‘ಗೌರಿ’ ಚಿತ್ರತಂಡದಿಂದ ಅಪ್ಪುಗೆ ನೃತ್ಯ ನಮನ: ಸಮರ್ಜಿತ್ ಜೊತೆ ತಾನ್ಯ ಹೋಪ್ ಹೆಜ್ಜೆ
Puneeth Rajkumar: ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದಂದು ‘ಗೌರಿ’ ಚಿತ್ರತಂಡದಿಂದ ವಿಶೇಷ ನೃತ್ಯ ನಮನ ಮಾಡಲಾಗುತ್ತಿದೆ.
ಪತ್ರಕರ್ತ, ನಟ, ನಿರ್ಮಾಪಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ಅವರ ಪುತ್ರ ಸಮರ್ಜಿತ್ ಲಂಕೇಶ್ ‘ಗೌರಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇಂದ್ರಜಿತ್ ಅವರೆ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಬಿಗ್ಬಾಸ್ ಚೆಲುವೆ ಸಾನ್ಯಾ ಐಯ್ಯರ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರತಂಡ ಭರದಿಂದ ಚಿತ್ರೀಕರಣ ನಡೆಸುತ್ತಿದೆ. ಇದರ ನಡುವೆ ಪುನೀತ್ ಅವರಿಗಾಗಿ ಚಿತ್ರತಂಡ ನೃತ್ಯ ನಮನ ಕಾರ್ಯಕ್ರಮ ನಡೆಸಿಕೊಡಲಿದೆ.
ಮಾರ್ಚ್ 17, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬ. ಪುನೀತ್ ಅವರ ಹುಟ್ಟುಹಬ್ಬಕ್ಕೆ ‘ಗೌರಿ’ ತಂಡದಿಂದ ವಿಶೇಷ ಗೀತೆಯೊಂದು ಬರಲಿದೆ. ಈ ವಿಶೇಷ ಗೀತೆಗೆ ‘ಗೌರಿ’ ಸಿನಿಮಾ ನಾಯಕ ಸಮರ್ಜಿತ್ ಲಂಕೇಶ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ತಾನ್ಯಾ ಹೋಪ್ ಹೆಜ್ಜೆ ಹಾಕಲಿದ್ದಾರೆ. ಮೋಹನ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಈ ಹಾಡಿನ ಬಗ್ಗೆ ಚಿತ್ರತಂಡದ ಸದಸ್ಯರು ಮಾತನಾಡಿದರು.
ಹೊಸ ನಾಯಕ ನಟ ಸಮರ್ಜಿತ್ ಮಾತನಾಡಿ, ‘ನಾನು ಅಪ್ಪು ಅವರ ಅಭಿಮಾನಿ, ಪುನೀತ್ ಅವರ ಡ್ಯಾನ್ಸ್ ನನಗೆ ಸ್ಪೂರ್ತಿ. ಹಾಗಾಗಿ ಅವರ ಹುಟ್ಟುಹಬ್ಬದಂದು ‘ಗೌರಿ’ ಚಿತ್ರತಂಡದಿಂದ ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅವರಿಗೆ ನಮನ ಸಲ್ಲಿಸುತ್ತಿದ್ದೇವೆ’ ಎಂದರು. ಇಂದ್ರಜಿತ್ ಅವರ ಮಗ ಸಮರ್ಜಿತ್ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರವಿದು. ‘ಸಮರ್ಜಿತ್ ಬಹಳ ಲವಲವಿಕೆಯ ಹುಡುಗ. ಈ ಹಾಡಿನಲ್ಲಿ ಸಮರ್ಜಿತ್ ಅವರ ಜೊತೆ ಅಭಿನಯಿಸುತ್ತಿರುವುದು ಖುಷಿಯಾಗಿದೆ. ನಾನು ಸಹ ಪುನೀತ್ ಅವರ ಅಭಿಮಾನಿ’ ಎಂದು ತಾನ್ಯ ಹೋಪ್ ತಿಳಿಸಿದರು.
ಇದನ್ನೂ ಓದಿ:ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಗೌರಿ ಖಾನ್ಗೆ ಶಾರುಖ್ ನೀಡಿದ್ದ ಮೊದಲ ಗಿಫ್ಟ್ ಏನು?
ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, ‘ಈಗಾಗಲೇ ‘ಗೌರಿ’ ಸಿನಿಮಾದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಆದರೆ ಇಂದು ಸಿನಿಮಾಗಿಂತ ಈ ಹಾಡಿನ ಬಗ್ಗೆ ಹೇಳಲು ಬಯಸುತ್ತೇನೆ. ಮುಂಬರುವ ಪುನೀತ್ ಅವರ ಹುಟ್ಟುಹಬ್ಬಕ್ಕೆ ‘ಗೌರಿ’ ಚಿತ್ರತಂಡದಿಂದ ವಿಶೇಷ ಹಾಡೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಪುನೀತ್ ರಾಜಕುಮಾರ್ ಅವರ ಚಿತ್ರಗಳ ಪ್ರಸಿದ್ಧ ಹಾಡುಗಳಿಗೆ ಸಮರ್ಜಿತ್ ಹಾಗೂ ತಾನ್ಯಾ ಹೋಪ್ ಹೆಜ್ಜೆ ಹಾಕಲಿದ್ದಾರೆ. ಈ ವಿಶೇಷ ಗೀತೆಯ ತಾಲೀಮು ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣವಾಗಲಿದೆ ಎಂದಿದ್ದಾರೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸಮರ್ಜಿತ್ ಲಂಕೇಶ್ ಅವರಿಗೆ ನಾಯಕಿಯಾಗಿ ಸಾನ್ಯ ಅಯ್ಯರ್ ನಟಿಸುತ್ತಿದ್ದಾರೆ. ಈಗಾಗಲೇ ಧಾರಾವಾಹಿ, ರಿಯಾಲಿಟಿ ಶೋ ಮೂಲಕ ಗಮನ ಸೆಳೆದಿರುವ ಸಾನ್ಯಾ ಐಯ್ಯರ್ ಅವರಿಗೆ ‘ಗೌರಿ’ ನಾಯಕಿಯಾಗಿ ಮೊದಲ ಸಿನಿಮಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ