ಕನ್ನಡದ ಬಹುಬೇಡಿಕೆಯ ಡೈಲಾಗ್ ರೈಟರ್ ಗುರು ಕಶ್ಯಪ್ ನಿಧನ; ಕಂಬನಿ ಮಿಡಿಯುತ್ತಿರುವ ಸ್ಯಾಂಡಲ್ವುಡ್
ಚಂದನವನದಲ್ಲಿ ಅನೇಕ ಸಿನಿಮಾಗಳಿಗೆ ಡೈಲಾಗ್ ಬರೆಯುತ್ತಿದ್ದ ಗುರು ಕಶ್ಯಪ್ ಅವರು ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾರೆ. ಸೋಮವಾರ (ಸೆ.13) ರಾತ್ರಿ ಅವರು ಇಹಲೋಕ ತ್ಯಜಿಸಿದರು.
ಕನ್ನಡದ ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಗುರು ಕಶ್ಯಪ್ ಅವರು ಸೋಮವಾರ (ಸೆ.13) ರಾತ್ರಿ ನಿಧನರಾದರು. ಹೃದಯಾಘಾತದಿಂದ ಅವರು ಮೃತ್ತಪಟ್ಟರು ಎಂಬ ಮಾಹಿತಿ ಸಿಕ್ಕಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರು ಎಳೆದರು ಎನ್ನಲಾಗುತ್ತಿದೆ. ಗಣೇಶ್ ಅಭಿನಯದ ‘ಸುಂದರಾಂಗ ಜಾಣ’, ರಮೇಶ್ ಅರವಿಂದ್ ನಟನೆಯ ‘ಪುಷ್ಪಕ ವಿಮಾನ’, ಪ್ರಿಯಾಂಕಾ ಉಪೇಂದ್ರ ಅಭಿನಯದ ‘ದೇವಕಿ’ ಮುಂತಾದ ಸಿನಿಮಾಗಳಿಗೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದರು. ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವರು ಕಂಬನಿ ಮಿಡಿಯುತ್ತಿದ್ದಾರೆ.
15ಕ್ಕೂ ಹೆಚ್ಚು ಸಿನಿಮಾಗಳಿಗೆ ಗುರು ಕಶ್ಯಪ್ ಕೆಲಸ ಮಾಡಿದ್ದರು. ಅವರಿಗೆ 45 ವರ್ಷ ವಯಸ್ಸಾಗಿತ್ತು. ನಿಧನಕ್ಕೂ ಮುನ್ನ ಅನೇಕ ಪ್ರಾಜೆಕ್ಟ್ಗಳಲ್ಲಿ ತೊಡಗಿಕೊಂಡಿದ್ದರು. ಡಾಲಿ ಧನಂಜಯ ನಟನೆಯ ‘ಮಾನ್ಸೂನ್ ರಾಗ’, ಶಿವರಾಜ್ಕುಮಾರ್ ಅಭಿನಯದ ‘ಬೈರಾಗಿ’, ‘ವ್ಹೀಲ್ ಚೇರ್ ರೋಮಿಯೋ’ ಮುಂತಾದ ಸಿನಿಮಾಗಳಿಗೆ ಅವರು ಡೈಲಾಗ್ ಬರೆಯುತ್ತಿದ್ದರು. ಆ ಸಿನಿಮಾಗಳು ತೆರೆಕಾಣುವುದಕ್ಕೂ ಮುನ್ನವೇ ಅವರು ನಿಧನರಾಗಿದ್ದಾರೆ. ಪತ್ನಿ ಮತ್ತು ಮಗಳನ್ನು ಗುರು ಕಶ್ಯಪ್ ಅಗಲಿದ್ದಾರೆ.
ಗುರು ಕಶ್ಯಪ್ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ‘ಗುರು ದೇವರಂಥ ಮನುಷ್ಯ ಆಗಿದ್ದರು. ಅತ್ಯುತ್ತಮ ಸಂಭಾಷಣಕಾರನನ್ನು ಚಂದನವನ ಇಂದು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ‘ಪುಷ್ಪಕ ವಿಮಾನ’ ನಿರ್ದೇಶಕ ರವೀಂದ್ರನಾಥ್ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
‘ಇದು ನಿಜಕ್ಕೂ ಶಾಕಿಂಗ್. ಈ ಸತ್ಯವನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಸದಾ ತಾಳ್ಮೆಯಿಂದ ನನ್ನ ಕಥೆಗಳನ್ನು ಕೇಳಿ, ಅವುಗಳಿಗೆ ಮೆಚ್ಚುಗೆ ಸೂಚಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಬರಹಗಳ ಫಸ್ಟ್ ಡ್ರಾಫ್ಟ್ ಓದುವುದನ್ನು ಮಿಸ್ ಮಾಡಿಕೊಳ್ಳುತ್ತೇನೆ ಸರ್’ ಎಂದು ನಟಿ ಆರೋಹಿ ನಾರಾಯಣ್ ಪೋಸ್ಟ್ ಮಾಡಿದ್ದಾರೆ.
‘ಗುರು ಕಶ್ಯಪ್ ತುಂಬ ಪ್ರತಿಭಾವಂತ ವ್ಯಕ್ತಿ ಆಗಿದ್ದರು. ಕೆಲವೇ ದಿನಗಳ ಹಿಂದೆ ಅವರ ಜೊತೆ ಕೆಲಸ ಮಾಡಿದ್ದೆ. ಒಂದೊಳ್ಳೆಯ ಪ್ರತಿಭೆಯನ್ನು ನಾವು ಕಳೆದುಕೊಂಡೆವು. ಇದು ಶಾಕಿಂಗ್. ಈ ಸುದ್ದಿ ಕೇಳಲು ಬೇಸರ ಆಗುತ್ತಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸಹೋದರನೇ’ ಎಂದು ‘ಶಿವಾಜಿ ಸುರತ್ಕಲ್’ ನಿರ್ದೇಶಕ ಆಕಾಶ್ ಶ್ರೀವತ್ಸ ಅವರು ಗುರು ಕಶ್ಯಪ್ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:
‘ನೀನೂ ಸತ್ತು ಹೋಗು’: ಸಿದ್ದಾರ್ಥ್ ಶುಕ್ಲಾ ನಿಧನದ ಬಳಿಕ ಕಿಡಿಗೇಡಿಗಳಿಂದ ನಟಿಗೆ ಮೆಸೇಜ್; ಆಸ್ಪತ್ರೆಗೆ ದಾಖಲು
ಸಿದ್ದಾರ್ಥ್ ಶುಕ್ಲಾ ಸಾವಿನ ಬಗ್ಗೆ ನಗುತ್ತಾ ಮಾತನಾಡಿದ್ದ ಸಲ್ಮಾನ್ ಖಾನ್: ಶಾಕಿಂಗ್ ವಿಡಿಯೋ ವೈರಲ್
Published On - 8:35 am, Tue, 14 September 21