‘ಇಬ್ಬನಿ ತಬ್ಬಿದ ಇಳೆಯಲಿ’ ಟ್ರೇಲರ್ಗೆ ಸಿಕ್ತು ಮೆಚ್ಚುಗೆ; ಸೆಪ್ಟೆಂಬರ್ 5ಕ್ಕೆ ಸಿನಿಮಾ ರಿಲೀಸ್
ಸೆಪ್ಟೆಂಬರ್ 5ಕ್ಕೆ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ರಿಲೀಸ್ ಆಗಲಿದೆ. ಚಂದ್ರಜಿತ್ ಬೆಳ್ಳಿಯಪ್ಪ ಆ್ಯಕ್ಷನ್-ಕಟ್ ಹೇಳಿರುವ ಈ ಸಿನಿಮಾದಲ್ಲಿ ವಿಹಾನ್, ಅಂಕಿತಾ ಅಮರ್, ಮಯೂರಿ ನಟರಾಜ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ, ಜಿ.ಎಸ್. ಗುಪ್ತ ಅವರು ನಿರ್ಮಾಣ ಮಾಡಿದ್ದಾರೆ. ಟ್ರೇಲರ್ ನೋಡಿದ ಅನೇಕರಿಂದ ಮೆಚ್ಚುಗೆ ಸಿಕ್ಕಿರುವುದು ತಂಡಕ್ಕೆ ಖುಷಿ ತಂದಿದೆ.
‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ‘ಪರಂವಃ ಸ್ಟುಡಿಯೋಸ್’ ಮೂಲಕ ಜಿ.ಎಸ್. ಗುಪ್ತ ಮತ್ತು ರಕ್ಷಿತ್ ಶೆಟ್ಟಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಂದ್ರಜಿತ್ ಬೆಳ್ಳಿಯಪ್ಪ ಅವರ ನಿರ್ದೇಶನ ಈ ಚಿತ್ರಕ್ಕಿದೆ. ವಿಹಾನ್, ಅಂಕಿತಾ ಅಮರ್, ಮಯೂರಿ ನಟರಾಜ ಅವರು ಈ ಚಿತ್ರಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಸೆ.5ರಂದು ‘ಇಬ್ಬನಿ ತಬ್ಬಿದ ಇಳೆಯಲಿ’ ಬಿಡುಗಡೆ ಆಗಲಿದೆ. ಈಗಾಗಲೇ ಟ್ರೇಲರ್ ನೋಡಿದವರಿಂದ ಮೆಚ್ಚುಗೆ ಸಿಗುತ್ತಿದೆ. ಹಾಡುಗಳು ಕೂಡ ಗಮನ ಸೆಳೆಯುತ್ತಿವೆ.
‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರತಂಡದಿಂದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ಹಾಡುಗಳ ಮೂಲಕ ಗೌರವ ಸಲ್ಲಿಸಲಾಯಿತು. ಬಳಿಕ ರಕ್ಷಿತ್ ಶೆಟ್ಟಿ ಮಾತನಾಡಿದರು. ‘ಡೈರೆಕ್ಟರ್ ಚಂದ್ರಜಿತ್ 9 ವರ್ಷಗಳ ಹಿಂದೆ ಬ್ಲಾಗ್ನಲ್ಲಿ ಮೆಸೇಜ್ ಮಾಡಿದ್ದರು. ಲಿಂಕ್ ಒಪನ್ ಮಾಡಿ ನೋಡಿದಾ ಬರವಣಿಗೆ ವಿಶೇಷ ಅನಿಸಿತು. ಬಳಿಕ ಚಂದ್ರಜಿತ್ ಭೇಟಿ ಆಯಿತು. ಅವರು ಬರೆದ ಕಥೆ ಸಿನಿಮಾವಾಗಿ ರೂಪಾಂತರವಾಯಿತು. ಸ್ಯಾಂಡಲ್ವುಡ್ನಲ್ಲಿ ಈ ಕಥೆಯನ್ನು ಹೋಲುವ ಸಿನಿಮಾಗಳು ಬಂದಿರಬಹುದು. ಆದರೆ ಈ ರೀತಿಯ ನಿರೂಪಣೆಯಿರುವ ಸಿನಿಮಾ ಬಂದಿಲ್ಲ. ಈಗಾಗಲೇ ನಾನು 3 ಬಾರಿ ಸಿನಿಮಾ ವೀಕ್ಷಿಸಿದ್ದೇನೆ. ವಿಹಾನ್ ಮತ್ತು ಅಂಕಿತಾ ಪ್ರಶಸ್ತಿ ಬರುವ ಹಾಗೆ ನಟಿಸಿದ್ದಾರೆ. ಮುಯೂರಿ ಕೆಲವೇ ಸನ್ನಿವೇಶದಲ್ಲಿ ಕಾಣಿಸಿಕೊಂಡರೂ ಎಲ್ಲರ ಗಮನ ಸೆಳೆಯುತ್ತಾರೆ’ ಎಂದಿದ್ದಾರೆ ರಕ್ಷಿತ್ ಶೆಟ್ಟಿ.
ಚಂದ್ರಜಿತ್ ಬೆಳ್ಳಿಯಪ್ಪ ಅವರು ಮಾತನಾಡಿ, ‘ನಾನು ಯಾವುದಕ್ಕೂ ಬೇಗ ಕಾಂಪ್ರಮೈಸ್ ಆಗುವವನಲ್ಲ. ಆದರೆ ನನ್ನ ಟೀಮ್ ಎರಡೇ ದಿನದಲ್ಲಿ ಟ್ರೇಲರ್ ಸಿದ್ದ ಮಾಡಿತು. ನನಗೂ ನೋಡಿ ಖುಷಿ ಆಯಿತು. ರಕ್ಷಿತ್ ಶೆಟ್ಟಿ ಸೇರಿದಂತೆ ಇಡೀ ತಂಡದ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ವಿಹಾನ್, ಅಂಕಿತಾ, ಮಯೂರಿ ಅವರ ಜೊತೆಗೆ ಈ ಚಿತದಲ್ಲಿ ‘ಗೀತಾಂಜಲಿ’ ಸಿನಿಮಾ ಖ್ಯಾತಿಯ ಗಿರಿಜಾ ಶೆಟ್ಟರ್ ನಟಿಸಿದ್ದಾರೆ. 20 ವರ್ಷಗಳ ನಂತರ ಅವರು ಮತ್ತೆ ನಮ್ಮ ಸಿನಿಮಾದಲ್ಲಿ ನಟಿಸಿದ್ದು ಖುಷಿಯಾಗಿದೆ’ ಎಂದರು.
‘ಈ ಸಿನಿಮಾವನ್ನು ನೋಡಿದವರು ಇನ್ನಷ್ಟು ಜನರನ್ನು ಚಿತ್ರಮಂದಿರಕ್ಕೆ ಕರೆತರುತ್ತಾರೆ ಎನ್ನುವ ಭರವಸೆ ನನಗಿದೆ. ನಿರ್ದೇಶಕ ಚಂದ್ರಜಿತ್ ಹೇಳಿದ ಕಥೆ ಆಸಕ್ತಿಕರವಾಗಿತ್ತು. ಪ್ರತಿಭೆಯನ್ನು ಕಂಡು ಆಯ್ಕೆ ಮಾಡಿಕೊಳ್ಳುವವರಲ್ಲಿ ರಕ್ಷಿತ್ ಶೆಟ್ಟಿ ಕೂಡ ಒಬ್ಬರು. ಸಿನಿಮಾಗೆ ಆಯ್ಕೆಯಾದ ಮೇಲೆ ಅವರಿಗೆ ಮೆಸೇಜ್ ಮಾಡಿ ಧನ್ಯವಾದ ಹೇಳಿದ್ದೆ’ ಎಂದಿದ್ದಾರೆ ನಾಯಕ ನಟ ವಿಹಾನ್.
ಇದನ್ನೂ ಓದಿ: ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಸಿನಿಮಾಗಳಲ್ಲಿ ಆಸ್ಥಾನ ಕಲಾವಿದರು ಯಾರು?
‘ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಬ್ಲಾಕ್ ಬ್ಲಸ್ಟರ್ ಸಿನಿಮಾ ಆಗಲಿದೆ. ಚಿತ್ರ ನೋಡಿದ ತಂಡದವರು ನಿರ್ದೇಶಕ ಚಂದ್ರಜಿತ್ ಅವರನ್ನು ತಬ್ಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ’ ಎಂದಿದ್ದಾರೆ ಪರಂವಃ ಸಂಸ್ಥೆಯ ಸಿಇಓ ಶ್ರೀನಿಶ್ ಶೆಟ್ಟಿ. ‘ಚಾರ್ಲಿ 777’ ನಿರ್ದೇಶಕ ಕಿರಣ್ ರಾಜ್ ಕೂಡ ಸಿನಿಮಾ ಬಗ್ಗೆ ಭರವಸೆಯ ಮಾತುಗಳನ್ನು ಆಡಿದರು. ಸಂಗೀತ ನಿರ್ದೇಶಕ ಗಗನ್ ಬಡೇರಿಯಾ, ಛಾಯಾಗ್ರಾಹಕ ಶ್ರೀವತ್ಸನ್ ಸೆಲ್ವರಾಜನ್, ಸಂಕಲನಕಾರ ರಕ್ಷಿತ್ ಕಾಪು ಕೂಡ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.