Jaggesh: ತಮ್ಮದೇ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ವೀಕ್ಷಿಸಿ ವಿಮರ್ಶೆ ನೀಡಿದ ಜಗ್ಗೇಶ್
ರಾಘವೇಂದ್ರ ಸ್ಟೋರ್ಸ್ ಸಿನಿಮಾ ಬಿಡುಗಡೆಗೆ ಸಂಪೂರ್ಣವಾಗಿ ರೆಡಿಯಾಗಿದ್ದು, ಸಿನಿಮಾವನ್ನು ಇತ್ತೀಚೆಗಷ್ಟೆ ನಟ ಜಗ್ಗೇಶ್ ನೋಡಿದ್ದಾರೆ. ಮಾತ್ರವಲ್ಲ ಸಿನಿಮಾದ ಬಗ್ಗೆ ಸಾಮಾನ್ಯ ಪ್ರೇಕ್ಷಕನ ರೀತಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್‘ (Raghavendra Stores) ಸಿನಿಮಾ ಹೊಸದೊಂದು ಅಪ್ಡೇಟ್ ಬರದೆ ಬಹಳ ಸಮಯವಾಗಿತ್ತು. ಭಾರಿ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಹೊಂಬಾಳೆ, ತಾನೇ ಬಂಡವಾಳ ಹಾಕಿರುವ ಈ ಸಣ್ಣ ಬಜೆಟ್ ಸಿನಿಮಾವನ್ನು ಮರೆತುಬಿಟ್ಟಿತೇ? ಎಂಬ ಅನುಮಾನ ಮೂಡಿತ್ತು. ಇದೀಗ ಸ್ವತಃ ನಟ ಜಗ್ಗೇಶ್ (Jaggesh), ತಾವೇ ನಟಿಸಿರುವ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ಬಗ್ಗೆ ಹೊಸದೊಂದು ಅಪ್ಡೇಟ್ ನೀಡಿದ್ದಾರೆ.
‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ಬಿಡುಗಡೆಗೆ ಸಂಪೂರ್ಣವಾಗಿ ರೆಡಿಯಾಗಿದ್ದು, ಸಿನಿಮಾವನ್ನು ಇತ್ತೀಚೆಗಷ್ಟೆ ನಟ ಜಗ್ಗೇಶ್ ನೋಡಿದ್ದಾರೆ. ಮಾತ್ರವಲ್ಲ ಸಿನಿಮಾದ ಬಗ್ಗೆ ಸಾಮಾನ್ಯ ಪ್ರೇಕ್ಷಕನ ರೀತಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
”ರಾಘವೇಂದ್ರ ಸ್ಟೋರ್ಸ್’ ಸಿನಿಮಾ ನೋಡಿದೆ. ಸಿನಿಮ ನೋಡಿದೆ ಅದ್ಭುತ ನಿರ್ದೇಶನ ಅದ್ಭುತ ಸಂಗೀತ, ಅದ್ಭುತ ಸಂಕಲನ,ಅದ್ಭುತ ಛಾಯಾಗ್ರಹಣ, ಒಟ್ಟಾರೆ ಹೊಂಬಾಳೆ ಫಿಲಮ್ಸ್ ಸಂಸ್ಥೆಯ ಅದ್ಭುತ ಚಿತ್ರ. ಧನ್ಯವಾದ ಇಂಥ ಅದ್ಭುತ ಚಿತ್ರ ಕಟ್ಟಿಕೊಟ್ಟ ಸಂತೋಶ್ ಆನಂದ್ರಾಮ್ ಅವರಿಗೆ. ನನ್ನ ಪ್ರಕಾರ ಈ ಚಿತ್ರ ಕನ್ನಡಿಗರ ಮನಗೆಲ್ಲುತ್ತದೆ ಬಹಳ ವರ್ಷ ನೆನಪಲ್ಲಿ ಉಳಿಯುತ್ತದೆ. ಅತಿ ಶೀಘ್ರ ಚಿತ್ರಮಂದಿರದಲ್ಲಿ” ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ ಜಗ್ಗೇಶ್.
ಹೋಟೆಲ್ ನಡೆಸುತ್ತಿರುವ ಮಧ್ಯ ವಯಸ್ಕ ಬ್ರಹ್ಮಚಾರಿಯೊಬ್ಬನ ಕತೆ ‘ರಾಘವೇಂದ್ರ ಸ್ಟೋರ್ಸ್’. ಈ ಸಿನಿಮಾ ಘೋಷಣೆಯಾಗಿದ್ದು 2021 ರ ಸೆಪ್ಟೆಂಬರ್ ತಿಂಗಳಲ್ಲಿ. ಸಿನಿಮಾದ ಚಿತ್ರೀಕರಣ ಬೇಗನೇ ಮುಗಿಯಿತಾದರೂ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ, ಬಿಗ್ ಬಜೆಟ್ ಸಿನಿಮಾಗಳ ಕಡೆಗೆ ಗಮನ ಹರಿಸಿದ್ದರಿಂದ ಈ ಸಿನಿಮಾದ ಪ್ರೀ ಪ್ರೊಡಕ್ಷನ್ ಹಾಗೂ ಇತರೆ ಕೆಲಸಗಳು ತಡವಾದವು. ತಮ್ಮ ಇತರೆ ಸಿನಿಮಾಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಮಾಹಿತಿ ಹಂಚಿಕೊಳ್ಳುವ ಹೊಂಬಾಳೆ, ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ಬಗ್ಗೆ ಪೋಸ್ಟ್ ಹಂಚಿಕೊಳ್ಳುವುದನ್ನೂ ಕಡಿಮೆ ಮಾಡಿಬಿಟ್ಟಿತ್ತು. ಹಾಗಾಗಿ ಈ ಸಿನಿಮಾ ನಿಂತೇ ಹೋಯಿತೇನೊ ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿತ್ತು. ಆದರೆ ಸ್ವತಃ ನಟ ಜಗ್ಗೇಶ್, ಸಿನಿಮಾ ಶೀಘ್ರದಲ್ಲಿ ಬಿಡುಗಡೆ ಆಗಲಿದೆ ಎಂದಿರುವುದು ಸಮಾಧಾನ ತಂದಿದೆ.
‘ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ’, ‘ರಾಜಕುಮಾರ’ ಅಂಥಹಾ ಇಂಡಸ್ಟ್ರಿ ಹಿಟ್ ಸಿನಿಮಾಗಳನ್ನು ನೀಡಿರುವ ಸಂತೋಶ್ ಆನಂದ್ ರಾಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಜಗ್ಗೇಶ್ ಜೊತೆಗೆ ನಾಯಕಿಯಾಗಿ ಶ್ವೇತಾ ಶ್ರೀವಾತ್ಸವ್ ನಟಿಸಿದ್ದಾರೆ. ಜೊತೆಗೆ ರವಿಶಂಕರ್ ಗೌಡ ಸಹ ಇದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್.
ಜಗ್ಗೇಶ್ ನಟನೆಯ ಈ ಹಿಂದಿನ ಸಿನಿಮಾ ‘ತೋತಾಪುರಿ’ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಲಿಲ್ಲ. ಹಾಗಾಗಿ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದ ಮೇಲೆ ಭಾರಿ ನಿರೀಕ್ಷೆಯನ್ನು ಜಗ್ಗೇಶ್ ಹಾಗೂ ಅವರ ಅಭಿಮಾನಿಗಳು ಇರಿಸಿಕೊಂಡಿದ್ದಾರೆ. ಇದರ ಜೊತೆಗೆ ರಂಗನಾಯಕ ಹೆಸರಿನ ಸಿನಿಮಾದಲ್ಲಿ ಜಗ್ಗೇಶ್ ನಟಿಸುತ್ತಿದ್ದು, ಈ ಸಿನಿಮಾವನ್ನು ‘ಮಠ’, ‘ಎದ್ದೇಳು ಮಂಜುನಾಥ’ ನಿರ್ದೇಶಿಸಿದ್ದು ಗುರುಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಬಗ್ಗೆಯೂ ನಿರೀಕ್ಷೆ ಇದೆ.