AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೈವ ನಂಬುವವರಿಗೆ ಬೇಸರ ಆಗುವಂತೆ ಮಾಡಬೇಡಿ: ಮೈಸೂರಿಗೆ ಬಂದು ಮನವಿ ಮಾಡಿದ ರಿಷಬ್ ಶೆಟ್ಟಿ

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ: ಚಾಪ್ಟರ್ 1’ ಚಿತ್ರದಿಂದ ದೊಡ್ಡ ಗೆಲವು ಸಿಕ್ಕಿದೆ. ಈಗ ಅವರು ಹಲವು ಊರುಗಳಿಗೆ ತೆರಳಿ ವಿಜಯ ಯಾತ್ರೆ ಮಾಡುತ್ತಿದ್ದಾರೆ. ಮೈಸೂರಿಗೂ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡಿ ಸಿನಿಮಾ ಬಗೆಗಿನ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ದೈವ ನಂಬುವವರಿಗೆ ಬೇಸರ ಆಗುವಂತೆ ಮಾಡಬೇಡಿ: ಮೈಸೂರಿಗೆ ಬಂದು ಮನವಿ ಮಾಡಿದ ರಿಷಬ್ ಶೆಟ್ಟಿ
Rishab Shetty
ಮದನ್​ ಕುಮಾರ್​
|

Updated on: Oct 16, 2025 | 5:23 PM

Share

ಬ್ಲಾಕ್ ಬಸ್ಟರ್ ಹಿಟ್ ಆಗಿರುವ ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಈಗಲೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಎರಡು ವಾರ ಕಳೆದರೂ ಈ ಸಿನಿಮಾದ ಹವಾ ಕಡಿಮೆ ಆಗಿಲ್ಲ. ಎಲ್ಲ ಕಡೆಗಳಲ್ಲಿ ಇದೇ ಸಿನಿಮಾದ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿನಿಮಾ ನೋಡಿದ ಬಳಿಕ ಕೆಲವರು ದೈವದ (Daiva) ಅನುಕರಣೆ ಮಾಡಿದ್ದಾರೆ. ಚಿತ್ರಮಂದಿರದಲ್ಲೇ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ದೈವವನ್ನು ನಂಬುವವರಿಗೆ ಇದರಿಂದ ಬೇಸರ ಆಗಿದೆ. ಆ ಕುರಿತು ಈಗಾಗಲೇ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಪ್ರತಿಕ್ರಿಯೆ ನೀಡಿದೆ. ಈಗ ರಿಷಬ್ ಶೆಟ್ಟಿ (Rishab Shetty) ಅವರು ಮೈಸೂರಿನಲ್ಲಿ ತಮ್ಮ ಅನಿಸಿಕೆ ತಿಳಿಸಿದ್ದಾರೆ.

‘ಈ ಬಗ್ಗೆ ತುಂಬಾ ಹಿಂದೆಯೇ ಕೇಳಿಕೊಂಡಿದ್ದೆ. ಈಗಲೂ ಕೇಳಿಕೊಳ್ಳುತ್ತಿದ್ದೇನೆ ಹಾಗೂ ಮುಂದೆಯೂ ಕೇಳಿಕೊಳ್ಳುತ್ತೇನೆ. ಸಿನಿಮಾದಲ್ಲಿ ಮನರಂಜನೆಯ ಅಂಶ ಇದ್ದೇ ಇರುತ್ತದೆ. ಜನರನ್ನು ಸಿನಿಮಾ ರಂಜಿಸಬೇಕು. ದೈವದ ವಿಚಾರ ಇಟ್ಟುಕೊಂಡು ಸಿನಿಮಾ ಮಾಡಿದಾಗ ಅದು ಬರೀ ಸಿನಿಮಾ ಆಗಿ ಇರುವುದಿಲ್ಲ. ಶ್ರದ್ಧೆ ಭಕ್ತಿಯಿಂದ ಸಿನಿಮಾ ಮಾಡಿರುತ್ತೇವೆ’ ಎಂದಿದ್ದಾರೆ ರಿಷಬ್ ಶೆಟ್ಟಿ.

‘ಸಿನಿಮಾದ ಜನಪ್ರಿಯತೆಯನ್ನು ನೋಡಿಕೊಂಡು ಕೆಲವು ಜನರು ಚಿತ್ರಮಂದಿರದಿಂದ ಹೊರಗೆ ಬಂದು ಅನುಕರಣೆ ಮಾಡಿದಾಗ ನಾನು ಕೂಡ ಆರಾಧಕನಾಗಿ, ನಂಬುವವನಾಗಿ ನನಗೆ ಬೇಸರ ಆಗುತ್ತದೆ. ಸಿನಿಮಾ ಮಾಡುವಾಗ ನಾವು ಶಿಸ್ತುಬದ್ಧವಾಗಿ ನಡೆದುಕೊಂಡು, ಹಿರಿಯರ ಮಾರ್ಗದರ್ಶನ ತೆಗೆದುಕೊಂಡಿರುತ್ತೇವೆ. ಪ್ರತಿ ಅವಕಾಶವನ್ನು ಉಪಯೋಗಿಸಿಕೊಂಡು ನಾನು ಕೇಳಿಕೊಳ್ಳುತ್ತೇನೆ. ದಯವಿಟ್ಟು ಆ ರೀತಿ ಮಾಡಬೇಡಿ. ದೈವವನ್ನು ನಂಬುವಂತಹ ಎಲ್ಲ ಭಕ್ತರಿಗೆ ಬೇಸರ ಉಂಟು ಮಾಡುತ್ತದೆ. ಆ ರೀತಿ ಮಾಡಬೇಡಿ ಅಂತ ಕೇಳಿಕೊಳ್ಳುತ್ತೇನೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ‘ಕಾಂತಾರ’ ನೋಡಿ ಹುಚ್ಚಾಟ, ದೈವದ ಅನುಕರಣೆ: ರಿಷಬ್​​ಗೆ ತುಳುಕೂಟ ಪತ್ರ

ಸಿನಿಮಾ ಸಕ್ಸಸ್ ಆಗಿದ್ದರ ಬಗ್ಗೆ ರಿಷಬ್ ಶೆಟ್ಟಿ ಮಾತನಾಡಿದ್ದಾರೆ. ‘ತುಂಬಾ ಖುಷಿ ಆಗುತ್ತದೆ. ನಾನು ಕುಂದಾಪುರದ ಕೆರಾಡಿ ಎಂಬ ಗ್ರಾಮದಿಂದ ಬಂದು ಚಿತ್ರರಂಗದಲ್ಲಿ ಅವಕಾಶಗಳನ್ನು ತೆಗೆದುಕೊಂಡು, ಹಲವಾರು ವರ್ಷಗಳು ಇಲ್ಲಿ ಕೆಲಸ ಮಾಡಿ, ಈಗ ಸಿನಿಮಾ ಮಾಡಿದಾಗ ಅದು ಜನರಿಗೆ ತಲುಪುವ ರೀತಿ ಕಂಡು ಖುಷಿ ಆಗಿದೆ. ಮೊದಲು ತುಂಬಾ ಕಷ್ಟ ಆಗುತ್ತಿತ್ತು. ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಿದ್ದೆವು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರು ನೋಡುತ್ತಿರುವುದು ನಮಗೆ ಹೆಚ್ಚಿನ ಚೈತನ್ಯ ನೀಡುತ್ತದೆ’ ಎಂದಿದ್ದಾರೆ ರಿಷಬ್ ಶೆಟ್ಟಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.