‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆ ಮಾಡಲಿರುವ ಘಟಾನುಘಟಿ ಸ್ಟಾರ್ಗಳು
ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ ಬಿಡುಗಡೆಗೆ ಕ್ಷಣಗಣನೆ ಆರಂಭ ಆಗಿದೆ. ವಿವಿಧ ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳು ಈ ಪ್ಯಾನ್ ಇಂಡಿಯಾ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಆ ಬಗ್ಗೆ ‘ಹೊಂಬಾಳೆ ಫಿಲ್ಮ್ಸ್’ ಕಡೆಯಿಂದ ಮಾಹಿತಿ ಹಂಚಿಕೊಳ್ಳಲಾಗಿದೆ. ಇಲ್ಲಿದೆ ನೋಡಿ ವಿವರ..

ಅಕ್ಟೋಬರ್ 2ರಂದು ‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ಬಗ್ಗೆ ಇರುವ ಕ್ರೇಜ್ ಅಷ್ಟಿಷ್ಟಲ್ಲ. ಟ್ರೇಲರ್ ನೋಡಲು ಸಿನಿಪ್ರಿಯರು ಕಾದಿದ್ದಾರೆ. ಟ್ರೇಲರ್ (Kantara Chapter 1 Trailer) ಬಿಡುಗಡೆಗೆ ಸಕಲ ಸಿದ್ಧತೆ ಆಗಿದೆ. ಸೆಪ್ಟೆಂಬರ್ 22ರಂದು ಹೃತಿಕ್ ರೋಷನ್, ಶಿವಕಾರ್ತಿಕೇಯನ್, ಪೃಥ್ವಿರಾಜ್ ಸುಕುಮಾರನ್ ಮತ್ತು ಪ್ರಭಾಸ್ ಅವರಿಂದ ಟ್ರೇಲರ್ ಬಿಡುಗಡೆ ಆಗಲಿದೆ ಎಂಬುದು ವಿಶೇಷ. ರಿಷಬ್ ಶೆಟ್ಟಿ (Rishab Shetty) ನಟನೆ, ನಿರ್ದೇಶನದ ಈ ಸಿನಿಮಾ ವಿಶ್ವಾದ್ಯಂತ ಅಬ್ಬರಿಸಲು ಸಜ್ಜಾಗಿದೆ.
‘ಹೊಂಬಾಳೆ ಫಿಲ್ಮ್ಸ್’ ಮೂಲಕ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಹಳ ಅದ್ದೂರಿಯಾಗಿ ನಿರ್ಮಾಣ ಆಗಿದೆ. ಅಷ್ಟೇ ಅದ್ದೂರಿಯಾಗಿ ಬಿಡುಗಡೆ ಪ್ಲ್ಯಾನ್ ಮಾಡಲಾಗುತ್ತಿದೆ. ಟ್ರೇಲರ್ ಬಿಡುಗಡೆ ಆದ ಬಳಿಕ ಸಿನಿಮಾ ಮೇಲಿನ ಹೈಪ್ ಇನ್ನಷ್ಟು ಹೆಚ್ಚಾಗಲಿದೆ. 7 ಭಾಷೆಗಳಲ್ಲಿ ಅಕ್ಟೋಬರ್ 2ರಂದು ಈ ಸಿನಿಮಾ ತೆರೆಕಾಣಲಿದೆ.
ಸೆಪ್ಟೆಂಬರ್ 22ರ ಸೋಮವಾರ ಮಧ್ಯಾಹ್ನ 12:45ಕ್ಕೆ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ಹೃತಿಕ್ ರೋಶನ್ ಅವರು ಹಿಂದಿ ಟ್ರೇಲರ್ ರಿಲೀಸ್ ಮಾಡುತ್ತಾರೆ. ತಮಿಳಿನ ಟ್ರೇಲರ್ ಅನ್ನು ಶಿವಕಾರ್ತಿಕೇಯನ್ ಬಿಡುಗಡೆ ಮಾಡಲಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಅವರು ಮಲಯಾಳಂ ಟ್ರೇಲರ್ ಬಿಡುಗಡೆ ಮಾಡಿದರೆ, ಪ್ರಭಾಸ್ ಕೈಯಿಂದ ತೆಲುಗು ಟ್ರೇಲರ್ ಅನಾವರಣ ಆಗಲಿದೆ.
ಕನ್ನಡದ ಕಲಾಭಿಮಾನಿಗಳಿಂದಲೇ ಕನ್ನಡದ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಸಲು ಚಿತ್ರತಂಡ ತೀರ್ಮಾನಿಸಿದೆ. ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದ್ದಂತೆಯೇ ಹೈಪ್ ಹೆಚ್ಚಾಗುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಮೇಕಿಂಗ್ ವಿಡಿಯೋ, ಪೋಸ್ಟರ್ಗಳು ಜನರಿಗೆ ಇಷ್ಟ ಆಗಿವೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಅಮೆರಿಕನಲ್ಲಿ ಶುರು ‘ಕಾಂತಾರ’ ಹವಾ, ಪ್ರೀಮಿಯರ್ ಶೋ ಬುಕಿಂಗ್ ಆರಂಭ
‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಬಿ. ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅರವಿಂದ್ ಎಸ್. ಕಶ್ಯಪ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಪ್ರಗತಿ ಶೆಟ್ಟಿ ಅವರು ವಸ್ತ್ರ ವಿನ್ಯಾಸದ ಜವಾಬ್ದಾರಿ ನಿಭಾಯಿಸಿದ್ದಾರೆ. ಈ ಚಿತ್ರವು ಭಕ್ತಿ, ಕಲೆ ಹಾಗೂ ಶಕ್ತಿಯನ್ನು ಒಳಗೊಂಡಿದೆ. ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿ ಈ ಸಿನಿಮಾ ಮೂಡಿಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




