ಕಾಲೇಜು ಶುಲ್ಕ ಭರಿಸಲಾಗದೇ ಕಷ್ಟದಲ್ಲಿದ್ದ ವಿದ್ಯಾರ್ಥಿ; ಸಹಾಯ ಮಾಡಿ ಆತಂಕ ದೂರ ಮಾಡಿದ ಸುದೀಪ್ ಚಾರಿಟೇಬಲ್ ಟ್ರಸ್ಟ್
Kichcha Sudeep Charitable Trust: ಹಾಸನದಲ್ಲಿ ಮಳೆಯಿಂದ ಕಾಲೇಜಿನ ಶುಲ್ಕ ಭರಿಸಲಾಗದೇ ಕಷ್ಟದಲ್ಲಿದ್ದ ವಿದ್ಯಾರ್ಥಿಗೆ ಸುದೀಪ್ ಚಾರಿಟೇಬಲ್ ಟ್ರಸ್ಟ್ ಸಹಾಯ ಮಾಡಿದೆ. ಅವರ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಹಾಸನ: ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ (Kichcha Sudeep) ತಮ್ಮ ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದಿದ್ದಾರೆ. ಅದಕ್ಕೆಂದೇ ಅವರು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ್ದು, ಅದರ ಮೂಲಕ ಅಗತ್ಯವಿರುವವರಿಗೆ ಬೇಕಾದ ನೆರವನ್ನು ತಲುಪಿಸುವ ವ್ಯವಸ್ಥೆ ಕೈಗೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಟ್ರಸ್ಟ್ ಮೂಲಕ ಮಳೆಯಿಂದ ಬೆಳೆ ಕಳೆದುಕೊಂಡ ರೈತರ ಪುತ್ರನೋರ್ವನಿಗೆ ಕಾಲೇಜು ಶಿಕ್ಷಣಕ್ಕೆ ಶುಲ್ಕ ಪಾವತಿಸಲಾಗಿದೆ. ಚಾರಿಟೇಬಲ್ನ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಬಿಎಸ್ಸಿ ನರ್ಸಿಂಗ್ ಓದುತ್ತಿದ್ದ ಹಾಸನದ ವಿದ್ಯಾರ್ಥಿಯೋರ್ವ ಕಷ್ಟದಲ್ಲಿದ್ದರು. ಅವರಿಗೆ ಟ್ರಸ್ಟ್ ಮೂಲಕ ನೆರವು ನೀಡಲಾಗಿದೆ.
ಘಟನೆಯ ವಿವರ ಇಲ್ಲಿದೆ: ಹಾಸನದಲ್ಲಿನ ಗಿರೀಶ್ ಕುಮಾರ್ ಮತ್ತು ಅವರ ಕುಟುಂಬ ಮಳೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಪರೀಕ್ಷಾ ಶುಲ್ಕ ಕಟ್ಟಲಾಗದೆ ಹಾಸನದ ಕಿಚ್ಚಾ ಸುದೀಪ್ ಅಭಿಮಾನಿಗಳ ಸಂಘವನ್ನು ಗಿರೀಶ್ ಸಂಪರ್ಕ ಮಾಡಿದ್ದರು. ಬಿಎಸ್ಸಿ ನರ್ಸಿಂಗ್ ಓದುತ್ತಿರುವ ಗಿರೀಶ್ ಕುಮಾರ್ಗೆ ಕಾಲೇಜು ಶುಲ್ಕಕ್ಕೆ 21 ಸಾವಿರ ರೂಗಳ ಅಗತ್ಯವಿತ್ತು. ಕುಟುಂಬದ ಕಷ್ಟವನ್ನು ಆಲಿಸಿದ ಸುದೀಪ್ ಟ್ರಸ್ಟ್, ನೆರವಿಗೆ ಮುಂದಾಯಿತು. ಶುಲ್ಕ ಕಟ್ಟದೇ ಪರೀಕ್ಷೆ ಬರೆಯಲಾಗದ ಆತಂಕದಲ್ಲಿದ್ದ ವಿದ್ಯಾರ್ಥಿಯ ಆತಂಕ ದೂರ ಮಾಡಿ, ಚೆಕ್ ಮೂಲಕ ಹಣವನ್ನು ನೀಡಲಾಗಿದೆ.
ಸುದೀಪ್ ತಮ್ಮ ಟ್ರಸ್ಟ್ ಮೂಲಕ ಹಣವನ್ನು ನೀಡಿದ್ದು, ವಿದ್ಯಾರ್ಥಿ ಯಾವುದೇ ಸಮಸ್ಯೆಗಳಿಲ್ಲದೇ ಮುಂದಿನ ಓದಿಗೆ ಸಿದ್ಧನಾಗಲು ಸಾಧ್ಯವಾಗಿದೆ. ಈ ಮೂಲಕ ಕಷ್ಟದಲ್ಲಿದ್ದ ವಿದ್ಯಾರ್ಥಿ ಹಾಗೂ ಕುಟುಂಬಕ್ಕೆ ಸುದೀಪ್ ತಮ್ಮ ಟ್ರಸ್ಟ್ ಮೂಲಕ ಸಹಾಯ ಮಾಡಿದ್ದು, ವಿದ್ಯಾರ್ಥಿಯ ಬದುಕಿಗೆ ಬೆಳಕಾಗಿದ್ದಾರೆ. ಕಿಚ್ಚ ಸುದೀಪ್ ಹಾಗೂ ಅವರ ಸುದೀಪ್ ಚಾರಿಟೇಬಲ್ ಟ್ರಸ್ಟ್ನ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ನಟನ ಸಾಮಾಜಿಕ ಕಾರ್ಯಕ್ಕೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಒಟಿಟಿಯಲ್ಲಿ ಕೋಟಿಗೊಬ್ಬ 3 ಬಿಡುಗಡೆ ಯಾವಾಗ?; ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ ಇಲ್ಲಿದೆ