ಕಿಚ್ಚ ಸುದೀಪ್ (Sudeep) ಅವರು ಇತ್ತೀಚೆಗೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ‘ವಿಕ್ರಾಂತ್ ರೋಣ’ ಸಿನಿಮಾ ಕಳೆದ ವರ್ಷ ರಿಲೀಸ್ ಆಯಿತು. ಅವರು ಉಪೇಂದ್ರ ಜೊತೆ ನಟಿಸಿರುವ ‘ಕಬ್ಜ’ ಸಿನಿಮಾ (Kabzaa) ಈ ವಾರ (ಮಾರ್ಚ್ 17) ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸುದೀಪ್ ಅವರು ಪೊಲೀಸ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ಮಂಗಳವಾರ (ಮಾರ್ಚ್ 14) ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. ಕಿಚ್ಚ ಸುದೀಪ್, ಉಪೇಂದ್ರ, ಡಾಲಿ ಧನಂಜಯ್, ನೆನಪಿರಲಿ ಪ್ರೇಮ್, ಕೆಪಿ ಶ್ರೀಕಾಂತ್ ಮೊದಲಾದವರು ವೇದಿಕೆ ಮೇಲಿದ್ದರು. ಈ ವೇಳೆ ಉಪ್ಪಿ ಹೇಳಿದ ಮಾತಿಗೆ ಸುದೀಪ್ ಉತ್ತರ ಕೊಟ್ಟಿದ್ದಾರೆ.
‘ಕಬ್ಜ’ ಸಿನಿಮಾ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಸಿನಿಮಾದಲ್ಲಿ ಅದ್ದೂರಿ ಮೇಕಿಂಗ್ ಇರುವುದರಿಂದ ನಿರ್ದೇಶಕ ಆರ್. ಚಂದ್ರುಗೆ ಹೆಚ್ಚು ಸಮಯ ಬೇಕಾಗಿದೆ. ‘ಕಬ್ಜ 2’ ಚಿತ್ರದ ಬಗ್ಗೆಯೂ ಪ್ರೀ-ರಿಲೀಸ್ ಇವೆಂಟ್ನಲ್ಲಿ ಚರ್ಚೆ ಆಗಿದೆ. ಇದರಲ್ಲಿ ಸುದೀಪ್ ಮುಖ್ಯಭೂಮಿಕೆ ಮಾಡಬೇಕು ಎನ್ನುವ ಆಸೆಯನ್ನು ಉಪೇಂದ್ರ ವ್ಯಕ್ತಪಡಿಸಿದರು.
‘ಕಬ್ಜ ಚಿತ್ರದ ಎರಡನೇ ಪಾರ್ಟ್ನಲ್ಲಿ ನನಗೆ ಅತಿಥಿ ಪಾತ್ರ ಕೊಟ್ಟು, ಸುದೀಪ್ಗೆ ಮುಖ್ಯಭೂಮಿಕೆ ನೀಡಬೇಕು’ ಎಂದು ಉಪೇಂದ್ರ ಹೇಳಿದರು. ಇದಕ್ಕೆ ಉತ್ತರಿಸಿದ ಸುದೀಪ್, ‘ಆರ್. ಚಂದ್ರು ಒಂದು ಸಿನಿಮಾ ಒಪ್ಪಿಕೊಂಡ್ರೆ ನಾಲ್ಕು ವರ್ಷ ಮಾಡ್ತಾರೆ ಅಂತ ಉಪೇಂದ್ರ ಅವರಿಗೆ ಗೊತ್ತು. ಹೀಗಾಗಿ, ಎರಡನೇ ಪಾರ್ಟ್ನ ಜವಾಬ್ದಾರಿನ ನನಗೆ ವಹಿಸಿಬಿಟ್ರು’ ಎಂದರು. ಇದಕ್ಕೆ ಉತ್ತರಿಸಿದ ಉಪೇಂದ್ರ, ‘ಇವರು (ಸುದೀಪ್) ಮತ್ತಿನ್ನೇನು, ಐದು ವರ್ಷಕ್ಕೆ ಒಂದು ಸಿನಿಮಾ ಮಾಡ್ತಾರೆ. ಅಲ್ಲಿಗೆ ಸರಿ ಆಗುತ್ತದೆ’ ಎಂದು ಕಿಚ್ಚನ ಕಾಲೆಳೆದು ನಕ್ಕರು.
ಇದನ್ನೂ ಓದಿ: Kabzaa Movie: ‘ಕಬ್ಜ’ ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ಏನು? ವಿವರಣೆ ನೀಡಿದ ‘ರಿಯಲ್ ಸ್ಟಾರ್’ ಉಪೇಂದ್ರ
‘ಐದು ವರ್ಷಕ್ಕೆ ಒಂದು ಸಿನಿಮಾ ಮಾಡೋಕೂ, ಒಂದೇ ಸಿನಿಮಾ ಐದು ವರ್ಷ ಮಾಡೋಕೂ ವ್ಯತ್ಯಾಸ ಇದೆ’ ಎಂಬ ಉತ್ತರ ಕಿಚ್ಚನ ಕಡೆಯಿಂದ ಬಂತು. ‘ನೀವು ಈ ರೀತಿ ಪ್ರಾಜೆಕ್ಟ್ ಒಪ್ಪಿಕೊಂಡ್ರೆ ಮಧ್ಯೆ ಕ್ರಿಕೆಟ್ ಆಡುತ್ತಾ ಹಾಯಾಗಿ ಶೂಟಿಂಗ್ ಮಾಡಿಕೊಂಡು ಇರಬಹುದು’ ಎಂದು ಉಪ್ಪಿ ಹೇಳಿದರು.
ಇದನ್ನೂ ಓದಿ: Kabzaa: ಎಷ್ಟು ದೀರ್ಘವಾಗಿದೆ ‘ಕಬ್ಜ’ ಸಿನಿಮಾ? ಬಹುನಿರೀಕ್ಷಿತ ಚಿತ್ರದ ಅವಧಿ ಬಗ್ಗೆ ಸಿಕ್ತು ಮಾಹಿತಿ
‘ಕಬ್ಜ’ ಚಿತ್ರಕ್ಕಾಗಿ ಸುದೀಪ್ ಒಳ್ಳೆಯ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆಯೂ ಸುದೀಪ್ ಮಾತನಾಡಿದ್ದಾರೆ. ‘ವೃತ್ತಿಜೀವನದಲ್ಲಿ ಕಬ್ಜದಂತಹ ಸಿನಿಮಾಗಳು ಬರ್ತಾ ಇರಬೇಕು. ಶೂಟಿಂಗ್ ಮಾಡೋದು ಕೆಲವೇ ದಿನ ಆದ್ರೂ ಒಳ್ಳೆಯ ಪೇಮೆಂಟ್ ಕೊಡ್ತಾರೆ’ ಎಂದು ಸುದೀಪ್ ನಕ್ಕರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ