‘ಪೌಡರ್’ಗೆ ಸಿದ್ಧವಾದ ದಿಗಂತ್, ಬೆಂಬಲ ನೀಡಿದ ಕಿಚ್ಚ ಸುದೀಪ್
Powder: ದಿಗಂತ್ ನಟಿಸಿ ಕೆಆರ್ಜಿ ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿರುವ 'ಪೌಡರ್' ಸಿನಿಮಾಕ್ಕೆ ವರಮಹಾಲಕ್ಷ್ಮಿ ಹಬ್ಬದಂದು ಚಾಲನೆ ದೊರೆತಿದೆ. ಕಿಚ್ಚ ಸುದೀಪ್ ಕ್ಲ್ಯಾಪ್ ಮಾಡುವ ಮೂಲಕ ಸಿನಿಮಾಕ್ಕೆ ಚಾಲನೆ ನೀಡಿದ್ದಾರೆ.
ನಟ ದಿಗಂತ್ಗೆ (Diganth) ಒಂದರ ಮೇಲೊಂದು ಒಳ್ಳೆಯ ಸಿನಿಮಾಗಳು ದೊರಕುತ್ತಿವೆ. ಇದೀಗ ಕೆಆರ್ಜಿ ಸ್ಟುಡಿಯೋಸ್ ಹಾಗೂ ಟಿವಿಎಫ್ ಮೋಷನ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾದ ನಾಯಕನಾಗಿ ದಿಗಂತ್ ಆಯ್ಕೆ ಆಗಿದ್ದಾರೆ. ಸಿನಿಮಾದ ಮುಹೂರ್ತ ಕಾರ್ಯಕ್ರಮ ನಿನ್ನೆ (ಆಗಸ್ಟ್ 26) ನಡೆದಿದೆ. ಸಿನಿಮಾಕ್ಕೆ ‘ಪೌಡರ್’ ಎಂದು ಭಿನ್ನವಾಗಿ ಹೆಸರಿಡಲಾಗಿದ್ದು, ಸಿನಿಮಾದಲ್ಲಿ ದೊಡ್ಡ ತಾರಾಗಾಣವೇ ಇದೆ. ಅಂದಹಾಗೆ ಮುಹೂರ್ತಕ್ಕೆ ನಟ ಕಿಚ್ಚ ಸುದೀಪ್ (Sudeep) ಆಗಮಿಸಿ ಸಿನಿಮಾ ತಂಡಕ್ಕೆ ಶುಭಾಶಯ ಕೋರಿದ್ದಾರೆ.
‘ಪೌಡರ್’ ಅಪ್ಪಟ ಕಾಮಿಡಿ ಸಿನಿಮಾ. ಒಂದು ಸಣ್ಣ ಊರಿನ ಯುವಕರಿಗೆ ದೊಡ್ಡ ಪ್ರಮಾಣದ ಕೊಕೇನ್ ಅಚಾನಕ್ಕಾಗಿ ಸಿಗುತ್ತದೆ. ಒಂದು ಕಡೆ ಆ ಕೊಕೇನ್ ಗಾಗಿ ಹುಡುಕಾಟದಲ್ಲಿರುವ ದುಷ್ಟರ ಗುಂಪು. ಇನ್ನೊಂದು ಕಡೆ ಆ ಕೊಕೇನ್ ಮಾರಿ ದಿಢೀರ್ ಶ್ರೀಮಂತರಾಗಬೇಕೆಂಬ ಯುವಕರ ಗುಂಪು. ಮತ್ತೊಂದು ಕಡೆ ತಮ್ಮ ಅಧಿಪತ್ಯ ಸ್ಥಾಪಿಸುವುದಕ್ಕೆ ಪ್ರಯತ್ನಿಸುತ್ತಿರುವ ಒಬ್ಬ ಮಾಸ್ಟರ್ ಮೈಂಡ್. ಈ ಹಾವು-ಏಣಿ ಆಟದಲ್ಲಿ ಗೆಲ್ಲುವವರು ಯಾರು? ಎಂದು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುತ್ತಿದೆ.
ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ಈ ಸಿನಿಮಾದಲ್ಲಿ ದಿಗಂತ್, ಧನ್ಯಾ ರಾಮಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಅಚ್ಯುತ್ ಕುಮಾರ್, ರವಿಶಂಕರ್ ಗೌಡ ಇನ್ನೂ ಹಲವು ಪ್ರತಿಭಾವಂತರು ನಟಿಸಿದ್ದಾರೆ. ಈ ಚಿತ್ರಕ್ಕೆ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಸೀನ್ ರೋಲ್ಡನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಥೆ-ಚಿತ್ರಕಥೆಯನ್ನು ದೀಪಕ್ ವೆಂಕಟೇಶನ್ ಬರೆದಿದ್ದಾರೆ. ಛಾಯಾಗ್ರಹಣ ಮಾಡುತ್ತಿರುವುದು ಶಾಂತಿ ಸಾಗರ್.
ಇದನ್ನೂ ಓದಿ:ಸಿನಿಮಾ ಬಿಡುಗಡೆ ದಿನವೇ ಇವೆಂಟ್: ರಾಜ್ ಬಿ ಶೆಟ್ಟಿ ಪರೋಕ್ಷ ಅಸಮಾಧಾನ ಕೆಆರ್ಜಿ ವಿರುದ್ಧವೇ?
ಇತ್ತೀಚೆಗಷ್ಟೆ ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಟಿವಿಎಫ್ ಒಪ್ಪಂದ ಮಾಡಿಕೊಂಡಿವೆ. ಈ ಎರಡು ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ‘ಪೌಡರ್’. ಈ ಸಿನಿಮಾದ ಶೂಟಿಂಗ್ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಲಿದೆ. 2024ರ ಏಪ್ರಿಲ್ 5 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎಂದು ಕೆ ಆರ್ ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಮಾಹಿತಿ ನೀಡಿದ್ದಾರೆ.
ಕಿಚ್ಚ ಸುದೀಪ್, ‘ಪೌಡರ್’ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಸಿನಿಮಾಕ್ಕೆ ಚಾಲನೆ ನೀಡಿದರು. ನಿರ್ಮಾಪಕ ಕಾರ್ತಿಕ್ ಗೌಡ ಅವರ ತಂದೆ ರಾಮಕೃಷ್ಣೇಗೌಡ ಕ್ಯಾಮೆರಾ ಸ್ವಿಚ್ ಆನ್ ಮಾಡಿ ಶುಭ ಹಾರೈಸಿದರು. ಮುಹೂರ್ತ ಸಂದರ್ಭದಲ್ಲಿ ನಟ ಡಾಲಿ ಧನಂಜಯ್, ಸಂತೋಷ್ ಆನಂದರಾಮ್, ರೋಹಿತ್ ಪದಕಿ, ಧೀರೇನ್ ರಾಮಕುಮಾರ್, ನವೀನ್ ಶಂಕರ್, ಕೆ.ಮಂಜು, ಭೂಮಿ ಶೆಟ್ಟಿ, ನಾಗಭೂಷಣ್, ಟಿವಿಎಫ್ ಸಂಸ್ಥಾಪಕರಾದ ಅರುಣಭ್ ಕುಮಾರ್, ವಿಜಯ್ ಕೋಶಿ, ಚೈತನ್ಯ ಕುಂಬಕೋಣಂ ಮುಂತಾದವರು ಹಾಜರಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ