ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ 0.5 ರೇಟಿಂಗ್ ನೀಡಿದ ಮಹೇಶ್ ಬಾಬು ಪುತ್ರ ಗೌತಮ್

ಮಹೇಶ್ ಬಾಬು ಪುತ್ರ ಗೌತಮ್ ಅವರು ವಿಮರ್ಶೆ ನೀಡುವುದರಲ್ಲಿ ಯಾವುದೇ ಮುಲಾಜಿಗೆ ಒಳಗಾಗಿಲ್ಲ. ‘ಟಾಕ್ಸಿಕ್’ ಮಾತ್ರವಲ್ಲದೇ ಕೆಲವು ಬೇರೆ ಸಿನಿಮಾಗಳಿಗೂ ಕೂಡ ಅವರು ಕಡಿಮೆ ರೇಟಿಂಗ್ ನೀಡಿದ್ದಾರೆ. ಹಾಗಿದ್ದರೂ ಕೂಡ ‘ಟಾಕ್ಸಿಕ್’ ಚಿತ್ರಕ್ಕೆ ಅವರು ಅರ್ಧ ಸ್ಟಾರ್ ರೇಟಿಂಗ್ ನೀಡಿರುವುದು ಚರ್ಚೆಗೆ ಕಾರಣ ಆಗಿದೆ.

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ 0.5 ರೇಟಿಂಗ್ ನೀಡಿದ ಮಹೇಶ್ ಬಾಬು ಪುತ್ರ ಗೌತಮ್
Gautam Ghattamaneni, Mahesh Babu, Yash

Updated on: Sep 01, 2026 | 10:43 PM

ತೆಲುಗು ಚಿತ್ರರಂಗದ ಸ್ಟಾರ್ ನಟ ಮಹೇಶ್ ಬಾಬು ಅವರ ಪುತ್ರ ಗೌತಮ್ ಘಟ್ಟಮನೇನಿ (Gautam Ghattamaneni) ಅವರ ಸಾಮಾಜಿಕ ಜಾಲತಾಣದ ಚಟುವಟಿಕೆಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಿನಿಮಾಪ್ರಿಯರು ಗೌತಮ್ ಅವರ ಲೆಟರ್‌ಬಾಕ್ಸ್ಡ್ (Letterboxd) ಖಾತೆಯನ್ನು ಪತ್ತೆಹಚ್ಚಿದ್ದಾರೆ. ಅದರಲ್ಲಿ ಅವರು ತಮ್ಮ ತಂದೆಯ ಸಿನಿಮಾಗಳು ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸೇರಿದಂತೆ ಹಲವು ಚಿತ್ರಗಳಿಗೆ ನೀಡಿರುವ ರೇಟಿಂಗ್‌ಗಳು ಗಮನ ಸೆಳೆದಿವೆ. ಕಂಡುಬಂದ ರೇಟಿಂಗ್‌ಗಳ ಪೈಕಿ, ಆಗಸ್ಟ್ 26ರಂದು ಬಿಡುಗಡೆಯಾದ ಯಶ್ ಅವರ ‘ಟಾಕ್ಸಿಕ್’ (Toxic) ಸಿನಿಮಾಗೆ ಗೌತಮ್ ಕೇವಲ ಅರ್ಧ ಸ್ಟಾರ್ (0.5/5) ರೇಟಿಂಗ್ ನೀಡಿರುವುದು ಚರ್ಚೆಗೆ ಕಾರಣ ಆಗಿದೆ.

Letterboxd ಎಂಬುದು ಸಿನಿಮಾಪ್ರೇಮಿಗಳಿಗಾಗಿ ಇರುವ ಒಂದು ಜಾಗತಿಕ ಸಾಮಾಜಿಕ ಜಾಲತಾಣ ಮತ್ತು ಆನ್‌ಲೈನ್ ವೇದಿಕೆಯಾಗಿದೆ. ಇಲ್ಲಿ ಬಳಕೆದಾರರು ತಾವು ನೋಡಿದ ಸಿನಿಮಾಗಳನ್ನು ಟ್ರ್ಯಾಕ್ ಮಾಡಬಹುದು, ರೇಟಿಂಗ್ ನೀಡಬಹುದು ಹಾಗೂ ವಿಮರ್ಶೆಗಳನ್ನು ಬರೆದು ಹಂಚಿಕೊಳ್ಳಬಹುದು. 20 ವರ್ಷ ಪ್ರಾಯದ ಗೌತಮ್ ಕೂಡ ಒಬ್ಬ ಕಟ್ಟಾ ಸಿನಿಮಾ ಪ್ರೇಮಿ ಎಂಬುದು ಅವರ ‘ಲೆಟರ್‌ಬಾಕ್ಸ್ಡ್’ ಪ್ರೊಫೈಲ್‌ನಿಂದ ತಿಳಿದುಬರುತ್ತದೆ.

ಗೌತಮ್ ಅವರು ವಿವಿಧ ಭಾಷೆ ಮತ್ತು ಶೈಲಿಯ ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳನ್ನು ವೀಕ್ಷಿಸಿ ರೇಟಿಂಗ್ ನೀಡಿದ್ದಾರೆ. ಯಾವುದೇ ಸಿನಿಮಾ ಅಥವಾ ನಟರ ಪ್ರಭಾವಕ್ಕೆ ಒಳಗಾಗದೆ, ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಮಾತ್ರ ಹಂಚಿಕೊಳ್ಳುವುದು ಅವರ ಈ ರೇಟಿಂಗ್ ವೈಖರಿಯಿಂದ ಸ್ಪಷ್ಟವಾಗುತ್ತದೆ. ಅವರು ತಮ್ಮ ತಂದೆ ಮಹೇಶ್ ಬಾಬು ಅವರ ‘ಪೋಕಿರಿ’ ಮತ್ತು ‘1: ನೇನೊಕ್ಕಡಿನೇ’ ಚಿತ್ರಗಳಿಗೆ 5 ಸ್ಟಾರ್ ರೇಟಿಂಗ್ ನೀಡಿದ್ದರೆ, ‘ನಿಜಮ್’ ಮತ್ತು ‘ವಂಶಿ’ ಸಿನಿಮಾಗಳಿಗೆ 2 ಸ್ಟಾರ್ ಹಾಗೂ ‘ಬ್ರಹ್ಮೋತ್ಸವಂ’ ಚಿತ್ರಕ್ಕೆ ಕೇವಲ 1 ಸ್ಟಾರ್ ರೇಟಿಂಗ್ ನೀಡಿದ್ದಾರೆ.

ಗೌತಮ್ ಅವರು ತಮ್ಮ ತಂದೆಯ ಸಿನಿಮಾಗಳಿಗೂ ಸಹ ಕಟ್ಟುನಿಟ್ಟಿನ ರೇಟಿಂಗ್ ನೀಡಿರುವುದು ಅಭಿಮಾನಿಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲ ಅಭಿಮಾನಿಗಳು ಗೌತಮ್ ಅವರ ಈ ನೇರ ಮತ್ತು ಪ್ರಾಮಾಣಿಕ ವಿಮರ್ಶೆಯನ್ನು ಬೆಂಬಲಿಸಿದ್ದರೆ, ಇನ್ನು ಕೆಲವರು ಇದು ಕೊಂಚ ಕಠಿಣವಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಮಹೇಶ್ ಬಾಬು ಅವರ ‘ಪೋಕಿರಿ’, ‘ದೂಕುಡು’, ‘ಅತಡು’ ಚಿತ್ರಗಳಂತೆ ಇತ್ತೀಚಿನ ಸಿನಿಮಾಗಳು ದೀರ್ಘಕಾಲ ನೆನಪಿನಲ್ಲಿ ಉಳಿಯುವಂತಹ ಪ್ರಭಾವ ಬೀರಿಲ್ಲ ಎಂಬುದಕ್ಕೆ ಗೌತಮ್ ಅವರ ಈ ರೇಟಿಂಗ್ ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್ ಸಿನಿಮಾದಿಂದ ಅರ್ಧಕ್ಕೆ ಹೊರಬಂದೆ’; ಬಿಗ್ ಬಾಸ್ ಮಾಜಿ ಸ್ಪರ್ಧಿಯ ಶಾಕಿಂಗ್ ಹೇಳಿಕೆ

ಕಡಿಮೆ ರೇಟಿಂಗ್ ಸಾಲಿನಲ್ಲಿ, ಯಶ್ ಅವರ ‘ಟಾಕ್ಸಿಕ್’ ಜೊತೆಗೆ ವಿಜಯ್ ದೇವರಕೊಂಡ ಅಭಿನಯದ ‘ಲೈಗರ್’ ಕೂಡ ಇದೆ. ಈ ಚಿತ್ರಕ್ಕೂ ಗೌತಮ್ ಅರ್ಧ ಸ್ಟಾರ್ ಮಾತ್ರ ನೀಡಿದ್ದಾರೆ. ಹಾಗೆಯೇ ಪ್ರಭಾಸ್ ನಟನೆಯ ಬ್ಲಾಕ್‌ಬಸ್ಟರ್ ‘ಕಲ್ಕಿ 2898 ಎಡಿ’ ಚಿತ್ರಕ್ಕೆ 2.5 ರೇಟಿಂಗ್ ನೀಡಿದ್ದಾರೆ. ‘ಟಾಕ್ಸಿಕ್’ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆಯೊಂದಿಗೆ ತೆರೆಕಂಡಿದ್ದರೂ, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಗೌತಮ್ ನೀಡಿರುವ ಈ ರೇಟಿಂಗ್ ನೆಟ್ಟಿಗರ ಚರ್ಚೆಗೆ ಹೊಸ ವಿಷಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us