ವಾರದ ದಿನವೂ ‘ಮರ್ಯಾದೆ ಪ್ರಶ್ನೆ’ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್; ಸಿಕ್ಕಿದೆ ಉತ್ತಮ ರೇಟಿಂಗ್
‘ಮರ್ಯಾದೆ ಪ್ರಶ್ನೆ’ ಹೊಸಬರೇ ಮಾಡಿದ ಸಿನಿಮಾ. ಈ ಚಿತ್ರ ಯಶಸ್ಸು ಕಂಡಿದೆ. ಹೊಸಬರ ತಂಡದಿಂದ ನಿರ್ಮಾಣಗೊಂಡ ಈ ಚಿತ್ರವು ಉತ್ತಮ ರೇಟಿಂಗ್ ಪಡೆದುಕೊಂಡಿದೆ. ಸ್ಟಾರ್ ಕಾಸ್ಟ್ ಇಲ್ಲದಿದ್ದರೂ, ಚಿತ್ರದ ಕಥೆ ಮತ್ತು ನಿರ್ದೇಶನ ಪ್ರೇಕ್ಷಕರನ್ನು ಆಕರ್ಷಿಸಿದೆ. ಕಿಚ್ಚ ಸುದೀಪ್ ಅವರೂ ಈ ಚಿತ್ರವನ್ನು ವೀಕ್ಷಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಕನ್ನಡದ ಸಿನಿಮಾಗಳನ್ನು ಪ್ರೇಕ್ಷಕ ನೋಡುತ್ತಿಲ್ಲ ಎಂಬುದು ಅನೇಕರ ದೂರು. ಅದರಲ್ಲೂ ಹೊಸಬರ ಸಿನಿಮಾ ಬಂತು ಎಂದರೆ ಅದನ್ನು ಕಡೆಗಣಿಸುತ್ತಾರೆ ಎಂಬುದು ಅನೇಕರ ಆರೋಪ. ಇವುಗಳ ಮಧ್ಯೆಯೂ ಕೆಲವು ಸಿನಿಮಾಗಳು ಉತ್ತಮ ಪ್ರದರ್ಶನ ನೀಡುತ್ತಿವೆ. ಈಗ ‘ಮರ್ಯಾದೆ ಪ್ರಶ್ನೆ’ ಚಿತ್ರವನ್ನು ಜನರು ವೀಕ್ಷಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಶೋ ಪಡೆದುಕೊಳ್ಳೋ ನಿರೀಕ್ಷೆಯಲ್ಲಿ ತಂಡ ಇದೆ.
ಹೊಸಬರೇ ಸೇರಿ ಮಾಡಿರೋ ಸಿನಿಮಾ ‘ಮರ್ಯಾದೆ ಪ್ರಶ್ನೆ’. ಧಾರಾವಾಹಿಗಳ ಮೂಲಕ ಗುರುತಿಸಿಕೊಂಡಿರೋ ಶ್ವೇತಾ ಪ್ರಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆರ್ಜೆ ಪ್ರದೀಪ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ನಾಗರಾಜ್ ಸೋಮಯಾಜಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸ್ಟಾರ್ ತಾರಾ ಬಳಗ ಇಲ್ಲ. ರಾಕೇಶ್ ಅಡಿಗ, ಸುನಿಲ್ ರಾವ್, ಶೈನ್ ಶೆಟ್ಟಿ, ಪೂರ್ಣಚಂದ್ರ ಮೈಸೂರು, ತೇಜು ಬೆಳವಾಡಿ, ಪ್ರಭು ಮೊದಲಾದವರು ನಟಿಸಿದ್ದಾರೆ. ಒಂದು ಅಚ್ಚುಕಟ್ಟಾದ ಸಿನಿಮಾ ಮಾಡಿದ್ದಾರೆ. ಈ ಚಿತ್ರ ಹಂತ ಹಂತವಾಗಿ ಹೆಚ್ಚೆಚ್ಚು ಪ್ರೇಕ್ಷಕರನ್ನು ಸೆಳೆದುಕೊಳ್ಳುವ ಪ್ರಯತ್ನದಲ್ಲಿ ಇದೆ.
ನವೆಂಬರ್ 28 ಗುರುವಾರ. ವಾರದ ದಿನವಾದರೂ ಬೆಂಗಳೂರಿನ ಕೆಲವು ಕಡೆಗಳಲ್ಲಿ ‘ಮರ್ಯಾದೆ ಪ್ರಶ್ನೆ’ ಹೌಸ್ಫುಲ್ ಪ್ರದರ್ಶನ ಕಂಡಿದೆ ಎನ್ನುತ್ತಾರೆ ಪ್ರದೀಪ್. ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಈ ಚಿತ್ರವನ್ನು ನೋಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ‘ಮ್ಯಾಕ್ಸ್’ ಸಿನಿಮಾದ ಕೆಲಸಗಳ ಕಾರಣದಿಂದ ಅವರು ಈ ಚಿತ್ರ ವೀಕ್ಷಣೆ ಸಾಧ್ಯವಾಗಿರಲಿಲ್ಲ. ಶೀಘ್ರವೇ ಅವರು ‘ಮರ್ಯಾದೆ ಪ್ರಶ್ನೆ’ ಸಿನಿಮಾ ವೀಕ್ಷಿಸಿ ಅಭಿಪ್ರಾಯ ತಿಳಿಸಲಿದ್ದಾರೆ. ಅದು ಸಿನಿಮಾಗೆ ಸಹಕಾರಿ ಆಗುವ ನಿರೀಕ್ಷೆ ಇದೆ. ಬುಕ್ ಮೈ ಶೋನಲ್ಲಿ ಈ ಚಿತ್ರಕ್ಕೆ 9.3 ರೇಟಿಂಗ್ ಸಿಕ್ಕಿದೆ ಅನ್ನೋದು ವಿಶೇಷ.
ಇದನ್ನೂ ಓದಿ: ‘ಮರ್ಯಾದೆ ಪ್ರಶ್ನೆ’ ಸಿನಿಮಾದ ಪ್ರತಿ ಕಲಾವಿದನ ನಟನೆಯೂ ಅದ್ಭುತ
‘ನಮ್ಮದು ಇಡೀ ಕುಟುಂಬ ಕುಳಿತು ನೋಡುವ ಸಿನಿಮಾ. ಇಡೀ ಕುಟುಂಬ ಬಂದು ಸಿನಿಮಾನ ವೀಕ್ಷಣೆ ಮಾಡುತ್ತಿದ್ದಾರೆ. ಸಂಜೆಯ ಶೋಗಳು ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯುತ್ತಿದೆ. ನಮ್ಮದು ಸ್ಟಾರ್ ಕಾಸ್ಟ್ ಇರುವ ಸಿನಿಮಾ ಅಲ್ಲ. ಹೀಗಾಗಿ, ಚಿತ್ರ ನಿಧಾನಕ್ಕೆ ಪಿಕ್ಅಪ್ ಆಗುತ್ತದೆ ಎನ್ನುವ ನಿರೀಕ್ಷೆ ನಮಗೆ ಇದೆ’ ಎನ್ನುತ್ತಾರೆ ಪ್ರದೀಪ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:58 am, Fri, 29 November 24