
ಅದ್ದೂರಿಯಾಗಿ ತೆರೆಕಂಡ ‘ಟಾಕ್ಸಿಕ್’ (Toxic) ಸಿನಿಮಾ ಕಥೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆಲವರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ಅದಕ್ಕೆ ಕಾರಣ ಆಗಿರುವುದು ಕಥೆ. ‘ಟಾಕ್ಸಿಕ್’ ಚಿತ್ರದ ಕಥೆ (Toxic Movie Story) ಬಗ್ಗೆ ಮಾಸ್ಟರ್ ಆನಂದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ‘ಟಾಕ್ಸಿಕ್ ಸಿನಿಮಾದ ಬಗ್ಗೆ ನಾನು ಒಂದು ಗೊಂದಲ ಪರಿಹರಿಸುತ್ತಿದ್ದೇನೆ. ಈ ಚಿತ್ರದಲ್ಲಿ ಕಥೆಯೇ ಇಲ್ಲ ಎನ್ನುವವರಿಗೆ ಸಸ್ಪೆನ್ಸ್ ಬಹಿರಂಗಪಡಿಸದೇ ಕೇವಲ 3 ನಿಮಿಷದಲ್ಲಿ ವಿವರ ನೀಡುತ್ತೇನೆ. ಜನರು ಕಥೆ ಇಲ್ಲ ಅಂತ ಯಾಕೆ ಹೇಳುತ್ತಿದ್ದಾರೆ ಎಂಬುದು ನನಗೆ ಅರ್ಥ ಆಗುತ್ತಿಲ್ಲ’ ಎಂದು ಮಾಸ್ಟರ್ ಆನಂದ್ (Master Anand) ಅವರು ವಿಡಿಯೋ ಆರಂಭಿಸಿದ್ದಾರೆ.
‘ಈ ಸಿನಿಮಾದಲ್ಲಿ ನಾನ್-ಲೀನಿಯರ್ ಆಗಿ ಕಥೆ ಹೇಳಿದ್ದಾರೆ. ಇದನ್ನು ಮೊದಲೇ ಗಮನದಲ್ಲಿ ಇಟ್ಟುಕೊಂಡು ಹೋಗಿ. ಮೊದಲಾರ್ಧದಲ್ಲಿ ದೃಶ್ಯಗಳು ಹಿಂದೆ-ಮುಂದೆ ಆಗುತ್ತವೆ. ಅದೆಲ್ಲದಕ್ಕೂ ಸ್ಪಷ್ಟನೆ ದ್ವಿತೀಯಾರ್ಧದಲ್ಲಿ ಇರುತ್ತದೆ. ಅದ್ಭುತವಾದ ಕ್ಲೈಮ್ಯಾಕ್ಸ್ ಇದೆ. ಕೊನೆಯ 20 ನಿಮಿಷವೇ ಸಿನಿಮಾ ಇರುವುದು. ಇಂಥ ಅದ್ಭುತವಾದ ಕಥೆ ಹೊಂದಿರುವ ಸಿನಿಮಾದಲ್ಲಿ ಏನು ಕಥೆ ಇದೆ ಹೇಳಿ ನೋಡೋಣ ಅಂತ ನನಗೆ ಸವಾಲು ಹಾಕುವಂತವರಿಗೆ ಇದನ್ನು ಹೇಳುತ್ತಿದ್ದೇನೆ’ ಎಂದಿದ್ದಾರೆ ಮಾಸ್ಟರ್ ಆನಂದ್.
‘ಒಬ್ಬನ ಬಾಲ್ಯ ಹಾಳಾಯಿತು ಎಂದರೆ ಅವನು ಅನಿಮಲ್ ಆಗುತ್ತಾನೆ. ನೀವು ಅನಿಮಲ್ ಸಿನಿಮಾ ನೋಡಿ ಒಪ್ಪಿಕೊಂಡಿದ್ದಿರಿ. ಇಲ್ಲಿ ಅವನಿಗೆ ಒಂದು ಮೃಗತ್ವ ಬರುತ್ತದೆ. ಈಟಿಂಗ್, ಮೇಟಿಂಗ್ ಮತ್ತು ಫೈಟಿಂಗ್ ಇದು ಪ್ರಾಣಿಯ ಸ್ವಭಾವ. ಅದನ್ನು ಹೊರತುಪಡಿಸಿ ಏನನ್ನೂ ಅದು ಕಲಿಯಲ್ಲ. ಆ ರೀತಿ ಇರುವ ವ್ಯಕ್ತಿಗೆ ಒಂದು ಲವ್ ಆದರೆ ಏನಾಗುತ್ತದೆ? ಆತನಿಗೆ ಮಗು ಜನಿಸಿದರೆ ಏನಾಗುತ್ತದೆ? ಆನಂತರ ಆ ಸಂಬಂಧಗಳನ್ನು ಕಡಿತಗೊಳಿಸಿಕೊಂಡರೆ ಏನಾಗುತ್ತದೆ ಎಂಬುದು ಈ ಸಿನಿಮಾದಲ್ಲಿದೆ’ ಎಂದು ಮಾಸ್ಟರ್ ಆನಂದ್ ಹೇಳಿದ್ದಾರೆ.
‘ಒಟ್ಟಾರೆ ಅವನ ಜೀವನವೇ ಟಾಕ್ಸಿಕ್ ಆಗುತ್ತದೆ. ಇದಕ್ಕೆ ಮೂಲ ಕಾರಣ ಅವನ ಬಾಲ್ಯದಲ್ಲಿ ಆದ ಒಂದು ಘಟನೆ. ಇಷ್ಟರಮೇಲೂ ಈ ಚಿತ್ರದಲ್ಲಿ ಕಥೆ ಇಲ್ಲ ಎಂದರೆ ನಾನು ಏನೂ ಮಾಡೋಕೆ ಆಗಲ್ಲ. ಅನಿಮಲ್ ರೀತಿ ಇರುವ ಆತನಿಗೂ ಪ್ರೀತಿ-ವಿಶ್ವಾಸ ಎಂಬುದು ಬಂದಾಗ ಗೊಂದಲಕ್ಕೆ ಒಳಗಾಗುತ್ತಾನೆ. ತನ್ನನ್ನು ತಾನು ಹೇಗೆ ದಂಡಿಸಿಕೊಳ್ಳುತ್ತಾನೆ ಎಂಬುದರೊಂದಿಗೆ ಕಥೆ ಮುಗಿಯುತ್ತದೆ’ ಎಂದಿದ್ದಾರೆ ಆನಂದ್.
ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ ನೋಡಿ ಮೆಚ್ಚಿಕೊಂಡ ಸುದೀಪ್; ಕಿಚ್ಚನ ಚಪ್ಪಾಳೆ ಪಡೆದ ಯಶ್
‘ಒಂದು ಅದ್ಭುತವಾದ ಸಿನಿಮಾ. ಇದನ್ನು ಟೀಕೆ ಮಾಡಿ, ಕಥೆ ಇಲ್ಲ ಎನ್ನುವವರಿಗೆ ನಾನು ಕಥೆ ಹೇಳಿದ್ದೇನೆ. ಕೊನೇ ಪಕ್ಷ ಈ ದೃಷ್ಟಿಕೋನವನ್ನು ಇಟ್ಟುಕೊಂಡು ಸಿನಿಮಾ ನೋಡಿ. ಆಗ ಅರ್ಥ ಆಗಬಹುದು’ ಎಂದು ಮಾಸ್ಟರ್ ಆನಂದ್ ಅವರು ವಿಡಿಯೋ ಪೂರ್ಣಗೊಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.