
ಮೇ 1ರಿಂದ ಮೇ 4ರ ತನಕ ಮುಂಬೈನಲ್ಲಿ ವರ್ಲ್ಡ್ ಆಡಿಯೋ ವಿಶ್ಯುವಲ್ ಎಂಟರ್ಟೇನ್ಮೆಂಟ್ ಸಮಿಟ್ (Waves Summit) ನಡೆಯುತ್ತಿದೆ. ಭಾರತೀಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದಾರೆ. ಮನರಂಜನಾ ಜಗತ್ತಿಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಈ ಶೃಂಗಸಭೆಯಲ್ಲಿ ಚರ್ಚೆ ಆಗುತ್ತಿದೆ. ಟಾಲಿವುಡ್ ನಟ ನಾಗಾರ್ಜುನ (Nagarjuna) ಅವರು ಕೂಡ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದಲ್ಲಿ ಯಶಸ್ಸು ಕಂಡಿದ್ದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಅದಕ್ಕೆ ‘ಕೆಜಿಎಫ್’ (KGF), ‘ಪುಷ್ಪ’, ‘ಬಾಹುಬಲಿ’ ಸಿನಿಮಾಗಳನ್ನು ಅವರು ಉದಾಹರಣೆಯಾಗಿ ನೀಡಿದ್ದಾರೆ.
ಪ್ರಶಾಂತ್ ನೀಲ್ ಅವರು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿದರು. ಹಿಂದಿ ಮಾರುಕಟ್ಟೆಯಲ್ಲಿ ‘ಕೆಜಿಎಫ್ 2’ ಸಿನಿಮಾ 435.33 ಕೋಟಿ ರೂಪಾಯಿ ಗಳಿಸಿತು. ಯಶ್ ಅವರಿಗೆ ಸಖತ್ ಜನಪ್ರಿಯತೆ ತಂದುಕೊಟ್ಟಿತು. ಈ ರೀತಿಯ ಸೌತ್ ಸಿನಿಮಾಗಳ ಯಶಸ್ಸಿನ ಬಗ್ಗೆ ನಾಗಾರ್ಜುನ ಅವರು ವರ್ಲ್ಡ್ ಆಡಿಯೋ ವಿಶ್ಯುವಲ್ ಎಂಟರ್ಟೇನ್ಮೆಂಟ್ ಸಮಿಟ್ನಲ್ಲಿ ಮಾತನಾಡಿದರು.
‘ಪುಷ್ಪ ಸಿನಿಮಾ ತೆಲುಗಿಗಿಂತಲೂ ಹೆಚ್ಚಾಗಿ ಉತ್ತರ ಭಾರತದಲ್ಲಿ ಹೆಚ್ಚು ಹಣ ಗಳಿಸಿತು. ಅದಕ್ಕೂ ಮೊದಲೇ ನಾವು ತೆಲುಗು ಸಿನಿಮಾದಲ್ಲಿ ಅಂತಹ ಕಥೆಗಳನ್ನು ನೋಡಿದ್ದೆವು. ಆದರೆ ಬಿಹಾರ, ಉತ್ತರ ಪ್ರದೇಶ, ಪಂಜಾಬ್ ಮುಂತಾದ ಕಡೆಗಳಲ್ಲಿ ಜನರು ತಮ್ಮ ಹೀರೋಗಳನ್ನು ಪುಷ್ಪ ರೀತಿ, ರಾಕಿ ಭಾಯ್ ರೀತಿ, ಬಾಹುಬಲಿ ರೀತಿ ನೋಡಲು ಬಯಸಿದ್ದರು. ಭಾರತದ ಜನರಿಗೆ ಪ್ರತಿದಿನ ಒಂದೇ ರೀತಿಯ ಬದುಕನ್ನು ಜೀವಿಸುವುದು ಕಷ್ಟ. ಅವರು ಒತ್ತಡದಿಂದ ಹೊರಗೆ ಬರಲು ಸಿನಿಮಾ ನೋಡುತ್ತಾರೆ. ಅಲ್ಲಿ ಅವರು ಮ್ಯಾಜಿಕ್ ನೋಡಲು ಬಯಸುತ್ತಾರೆ’ ಎಂದು ನಾಗಾರ್ಜುನ ಹೇಳಿದ್ದಾರೆ.
ಇದನ್ನೂ ಓದಿ: ವೇವ್ಸ್ ಸಮಿಟ್ನಲ್ಲಿ ಚಿತ್ರರಂಗದ ದಿಗ್ಗಜರ ಅಂಚೆ ಚೀಟಿ ಬಿಡುಗಡೆ; ಮೋದಿಗೆ ನಾಗಾರ್ಜುನ ಧನ್ಯವಾದ
‘ಮೂಲ ವಿಷಯಗಳನ್ನು ಇಟ್ಟುಕೊಂಡು, ಭಾರತದ ಶೈಲಿಯಲ್ಲೇ ನೈಜ ಬದುಕಿಗಿಂತ ದೊಡ್ಡದಾಗಿ ಕಥೆಯನ್ನು ಹೇಳುವುದು ಎಂದರೆ ಹೀಗೆಯೇ.. ಅದಕ್ಕಾಗಿಯೇ ಸಿನಿಮಾಗಳು ಸಕ್ಸಸ್ ಆಗಿವೆ. ಬಾಹುಬಲಿ ಒಂದು ತೆಲುಗು ಸಿನಿಮಾ ಎಂದುಕೊಂಡೇ ರಾಜಮೌಳಿ ಅವರು ಫ್ರೇಮ್ ಟು ಫ್ರೇಮ್ ನಿರ್ದೇಶನ ಮಾಡಿದರು. ತಮ್ಮ ಭಾಷೆ ಮತ್ತು ಮೂಲದ ಬಗ್ಗೆ ಅವರಿಗೆ ಹೆಮ್ಮೆ ಇದೆ. ಅದನ್ನು ಇಡೀ ಜಗತ್ತಿನ ಪ್ರೇಕ್ಷಕರು ಇಷ್ಟಪಟ್ಟರು’ ಎಂದಿದ್ದಾರೆ ನಾಗಾರ್ಜುನ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.