ಕನ್ನಡಿಗರ ಭಯೋತ್ಪಾದಕರಿಗೆ ಹೋಲಿಸಿದ ಸೋನು ನಿಗಂ, ದೂರು ದಾಖಲು
Sonu Nigam on Kannada: ಕನ್ನಡಿಗರ ಕನ್ನಡಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಸಿದ ಗಾಯಕ ಸೋನು ನಿಗಂ ವಿರುದ್ಧ ಕನ್ನಡ ರಕ್ಷಣಾ ಪಡೆ ಸದಸ್ಯರು ದೂರು ನೀಡಿದ್ದಾರೆ. ಮಾತ್ರವಲ್ಲದೆ ಸೋನು ನಿಗಂ ಅನ್ನು ಕನ್ನಡ ಚಲನಚಿತ್ರದಿಂದ ನಿಷೇಧಿಸಬೇಕೆಂದು ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘಕ್ಕೆ ಆಗ್ರಹಿಸಿದ್ದಾರೆ.

ಖ್ಯಾತ ಗಾಯಕ ಸೋನು ನಿಗಂ (Sonu Nigam) ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡಿಗರ ಬಗ್ಗೆ, ಕನ್ನಡತನದ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಈಗಾಗಲೇ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರ ಕನ್ನಡ ಪ್ರೀತಿಯನ್ನು ಭಯೋತ್ಪಾದನೆಗೆ ಗಾಯಕ ಸೋನು ನಿಗಂ ಹೋಲಿಸಿದ್ದು, ಇದೀಗ ಸೋನು ನಿಗಂ ವಿರುದ್ಧ ದೂರು ಸಹ ದಾಖಲಾಗಿದೆ. ಸೋನು ನಿಗಂ ಅವರ ಮತಿಹೀನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡಪರ ಸಂಘಟನೆಗಳು ಸೋನು ನಿಗಂ ವಿರುದ್ಧ ದೂರು ದಾಖಲಿಸಿವೆ. ಕನ್ನಡ ಚಿತ್ರರಂಗ ಸೋನು ನಿಗಂ ಅವರನ್ನು ನಿಷೇಧಿಸಬೇಕೆಂದು ಸಹ ಒತ್ತಾಯಿಸಲಾಗಿದೆ.
ಕನ್ನಡ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಸದಸ್ಯರು ಸೋನು ನಿಗಂ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕನ್ನಡಿಗರ ಕನ್ನಡ ಪ್ರೇಮವನ್ನು ಭಯೋತ್ಪಾದಕತೆಗೆ ಹೋಲಿಸಿದ ಸೋನು ನಿಗಂ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದರ ಜೊತೆಗೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಲಿದ್ದು, ಸೋನು ನಿಗಂ ವಿರುದ್ಧ ದೂರು ದಾಖಲಿಸಲಿದ್ದಾರೆ.
ವಿವಾದದ ಬಗ್ಗೆ ಮಾತನಾಡಿರುವ ಕರವೇ ಅಧ್ಯಕ್ಷ ನಾರಾಯಣಗೌಡ ಅವರು, ‘ಸೋನು ನಿಗಂ ಒಬ್ಬ ಸಾಂಸ್ಕೃತಿಕ ಭಯೋತ್ಪಾದಕ. ಸೋನು ನಿಗಮ್ ಕನ್ನಡದಿಂದ ಬ್ಯಾನ್ ಮಾಡಬೇಕು, ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸುತ್ತಾನಾ? ಸೋನು ನಿಗಂ ಈ ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು, ಇಲ್ಲವಾದರೆ ಸೋನು ನಿಗಮ್ ಕನ್ನಡ ಹಾಡು ಹಾಡುವಂತಿಲ್ಲ, ಸೋನು ನಿಗಂ ಮೇಲೆ ನಿಷೇಧ ಹೇರಬೇಕು ಎಂದು ಕನ್ನಡ ಚಲನಚಿತ್ರ ಮಂಡಳಿ, ನಿರ್ಮಾಪಕ ಸಂಘಕ್ಕೆ ಆಗ್ರಹಿಸುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ:ಕನ್ನಡಿಗರ ಮೇಲೆ ಸೋನು ನಿಗಂ ಸಿಟ್ಟು ಹೊಸದೇನಲ್ಲ, ಈ ಹಿಂದೆಯೂ ನಡೆದಿತ್ತು ಘಟನೆ
ಈ ರೀತಿ ದುರಭಿಮಾನಿ ತೋರಿಸುವ ಸೋನು ನಿಗಮ್ ಗೆ ಹಾಡಲು ಅವಕಾಶ ಕೊಡಬೇಡಿ, ಕನ್ನಡ ಹಾಡು ಹಾಡಿ ಎಂದು ಕೇಳೋದು ತಪ್ಪಾ?, ನೂರಾರು ಕನ್ನಡ ಚಿತ್ರ ಹಾಡನ್ನು ಸೋನು ನಿಗಮ್ ಹಾಡಿದ್ದಾರೆ, ಬಾಲಿವುಡ್ ಕೈ ಕೊಟ್ಟಾಗ ಕನ್ನಡಗರು ಕೈಹಿಡಿದು ಗೆಲ್ಲಿಸಿದರು. ನಮ್ಮ ಹಣ, ನಮ್ಮ ಅನ್ನ ತಿಂದು ಕನ್ನಡ ಹಾಡು ಎಂದರೆ ಅದು ಅಪರಾಧವೇ?, ಕನ್ನಡತನವನ್ನು ಭಯೋತ್ಪಾದಕರಿಗೆ ಹೋಲಿಸಿ ಆಮೇಲೆ ಕನ್ನಡದ ಮೇಲೆ ತೋರಿಕೆಯ ಪ್ರೀತಿ ಮಾತಾಡ್ತಿಯಾ? ಕನ್ನಡ ಹಾಡು ಎಂದು ಕೇಳಿದಾಗ ಹಾಡಬೇಕಿತ್ತು ಇಲ್ಲವೇ ತಪ್ಪಗಿರಬೇಕಿತ್ತು, ಅದು ಬಿಟ್ಟು ಕನ್ನಡಿಗರ ಸ್ವಾಭಿಮಾನ ಕೆಣಕುವ ಕೆಲಸ ಮಾಡ್ತೀಯಾ?, ಭಯೋತ್ಪದಕರ ರೀತಿ ಮಾಡಿದರೆ ನಾವು ಸುಮ್ಮನಿರಲ್ಲ ಎಸ್ ಪಿ ಬಿ ಅಂಥ ಶ್ರೇಷ್ಠ ಗಾಯಕರು ಕನ್ನಡದ ಬಗ್ಗೆ ಎಂಥ ಗೌರವ ಇಟ್ಟುಕೊಂಡಿದ್ದರು. ಆದರೆ ನಿಗಮ್ ಈ ರೀತಿ ನಡೆದುಕೊಂಡು ಸರಿಯಲ್ಲ, ಕೂಡಲೆ ಕ್ಷಮೆ ಕೇಳಬೇಕು’ ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಕಾಲೇಜೊಂದರಲ್ಲಿ ಸೋನು ನಿಗಂ ಲೈವ್ ಗಾಯನಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದ ಆಗ ಮಾತನಾಡಿದ ಸೋನು ನಿಗಂ, ‘ಕನ್ನಡ, ಕನ್ನಡ.. ಇದರಿಂದಲೇ ಪಹಲ್ಗಾಮ್ ದಾಳಿ ಆಗಿರುವುದು’ ಎಂದು, ಕನ್ನಡಿಗರ ಕನ್ನಡಾಭಿಮಾನವನ್ನು ಭಯೋತ್ಪಾದಕತೆಗೆ ಹೋಲಿಸಿದ್ದರು. ಸೋನು ನಿಗಂ ಅವರ ಈ ಹೇಳಿಕೆಗೆ ಕನ್ನಡಿಗರ ಒಕ್ಕೂರಲ ಆಕ್ರೋಶ ವ್ಯಕ್ತವಾಗಿದೆ. ಚಿತ್ರರಂಗದ ಕೆಲ ಪ್ರಮುಖರು ಸೋನು ನಿಗಂ ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:17 am, Sat, 3 May 25




