‘ಬಿಗ್ ಬಾಸ್’ ಮನೆಯಲ್ಲೂ ಸದ್ದು ಮಾಡಿದ ‘ನವಗ್ರಹ’ ರೀ-ರಿಲೀಸ್ ವಿಚಾರ
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಈ ಬಾರಿ ಹೊರಗಿನ ಸುದ್ದಿಗಳು ಸ್ಪರ್ಧಿಗಳಿಗೆ ತಲುಪುತ್ತಿವೆ. 'ನವಗ್ರಹ' ಸಿನಿಮಾ ನವೆಂಬರ್ 8 ರಂದು ಮರು ಬಿಡುಗಡೆಯಾಗುತ್ತಿದೆ ಎಂಬ ಸುದ್ದಿ ಸ್ಪರ್ಧಿ ಧರ್ಮ ಕೀರ್ತಿರಾಜ್ ಅವರಿಗೆ ತಿಳಿದಿದೆ. ಈ ವಿಚಾರ ಕೇಳಿ ಅವರು ಸಂತೋಷಪಟ್ಟಿದ್ದಾರೆ. ಈ ಸಿನಿಮಾದಲ್ಲಿ ಅವರು ನಟಿಸಿದ್ದರು. ಸೃಜನ್ ಲೋಕೇಶ್ ಅವರು ಬಿಗ್ ಬಾಸ್ ಮನೆಗೆ ಭೇಟಿ ನೀಡಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಈ ಮೊದಲು ಹೊರಗಿನ ವಿಚಾರಗಳ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿರಲಿಲ್ಲ. ಆದರೆ, ಈ ಬಾರಿಯ ಸೀಸನ್ನಲ್ಲಿ ಹಾಗಿಲ್ಲ. ಹೊರಗಿನ ವಿಚಾರಗಳ ಮಾಹಿತಿ ಬಿಗ್ ಬಾಸ್ ಕಡೆಯಿಂದಲೇ ಸಿಗುತ್ತಿದೆ. ಸುದೀಪ್ ತಾಯಿ ನಿಧನ ವಾರ್ತೆ, ಸ್ಪರ್ಧಿಗಳ ಬಗ್ಗೆ ಹೊರಗಿನ ಜನಗಿರುವ ಅಭಿಪ್ರಾಯ ಎಲ್ಲವೂ ಗೊತ್ತಾಗುತ್ತಿದೆ. ಅದೇ ರೀತಿ ‘ನವಗ್ರಹ’ ಸಿನಿಮಾದ ರೀ-ರಿಲೀಸ್ ವಿಚಾರವೂ ಸದ್ದು ಮಾಡುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.
ದರ್ಶನ್, ಸೃಜನ್ ಲೋಕೇಶ್ ಮೊದಲಾದವರು ನಟಿಸಿರೋ ‘ನವಗ್ರಹ’ ಸಿನಿಮಾ 2008ರ ನವೆಂಬರ್ 7ರಂದು ರಿಲೀಸ್ ಆಯಿತು. ದಿನಕರ್ ತುಗುದೀಪ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಈಗ ನವೆಂಬರ್ 8ರಂದು ರೀ-ರಿಲೀಸ್ ಆಗುತ್ತಿದೆ. ಮೈಸೂರಿನ ಅಂಬಾರಿ ಕದಿಯೋ ಕಥೆಯನ್ನು ಈ ಚಿತ್ರ ಹೊಂದಿದೆ. ಗೆಂಡೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸೃಜನ್ ಲೋಕೇಶ್ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಧರ್ಮ ಕೀರ್ತಿರಾಜ್ ಇದ್ದಾರೆ. ಅವರು ‘ನವಗ್ರಹ’ ಚಿತ್ರದಲ್ಲಿ ವಿಕ್ಕಿ ಹೆಸರಿನ ಪಾತ್ರ ಮಾಡಿದ್ದರು. ಸೃಜನ್ ಅವರು ದೊಡ್ಮನೆ ಒಳಗೆ ಬಂದಿದ್ದನ್ನು ನೋಡಿ ಧರ್ಮಗೆ ಖುಷಿ ಆಗಿದೆ. ಸೃಜನ್ ಅವರು ಬಿಗ್ ಬಾಸ್ಗೆ ಅತಿಥಿಯಾಗಿ ಬರುತ್ತಿದ್ದಂತೆ ಯಾರ ಯಾರ ಪರಿಚಯ ಇದೆ ಎಂಬುದನ್ನು ಹೇಳಿದರು. ಅದೇ ರೀತಿ ಧರ್ಮ ಬಳಿ ವಿಶೇಷ ಸುದ್ದಿ ಇರೋದಾಗಿ ಹೇಳಿದರು.
ಇದನ್ನೂ ಓದಿ: ನವೆಂಬರ್ 8ಕ್ಕೆ ನವಗ್ರಹ ಸಿನಿಮಾ ಮರು ಬಿಡುಗಡೆ; ದರ್ಶನ್ ಅಭಿಮಾನಿಗಳಿಗೆ ಹಬ್ಬ
‘ಧರ್ಮ ಒಂದು ಗುಡ್ ನ್ಯೂಸ್ ಇದೆ. ನವಗ್ರಹ ಸಿನಿಮಾ ಮತ್ತೆ ರಿಲೀಸ್ ಆಗುತ್ತಿದೆ’ ಎಂದು ಸೃಜನ್ ಹೇಳಿದರು. ಇದನ್ನು ಕೇಳಿ ‘ಯಾವಾಗ’ ಎಂದು ಪ್ರಶ್ನೆ ಮಾಡಿದರು ಧರ್ಮ. ‘ನವೆಂಬರ್ 8’ ಎಂದು ಸೃಜನ್ ಉತ್ತರ ಕೊಟ್ಟರು. ಇದನ್ನು ಕೇಳಿ ಧರ್ಮ ಅವರು ಸಖತ್ ಖುಷಿಪಟ್ಟರು. ಈ ಮೂಲಕ ದೊಡ್ಮನೆ ಒಳಗೂ ಬಿಗ್ ಬಾಸ್ ವಿಚಾರ ಚರ್ಚೆ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.