Puneeth Rajkumar: ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಫ್ಲೈಓವರ್ಗೆ ಪುನೀತ್ ರಾಜ್ಕುಮಾರ್ ಹೆಸರು? ಬಿಬಿಎಂಪಿಗೆ ಮನವಿ
Shivananda Circle Steel Bridge: ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಸ್ಟೀಲ್ ಬ್ರಿಡ್ಜ್ ಫ್ಲೈಓವರ್ ನಿರ್ಮಾಣ ಆಗುತ್ತಿದೆ. ಅದಕ್ಕೆ ಪುನೀತ್ ರಾಜ್ಕುಮಾರ್ ಅವರ ಹೆಸರು ಇಡಬೇಕು ಎಂಬ ವಿಷಯ ಚರ್ಚೆಗೆ ಬಂದಿದೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕನ್ನಡ ಚಿತ್ರರಂಗ ಎಂದಿಗೂ ಮರೆಯಲು ಸಾಧ್ಯವಿಲ್ಲ. ಬಾಲನಟನಾಗಿ ಬಂದ ಅವರು ಹೀರೋ ಆಗಿಯೂ ಮಾಡಿದ ಸಾಧನೆ ದೊಡ್ಡದು. ಚಂದನವನದ ಏಳಿಗೆಯಲ್ಲಿ ಅವರ ಕೊಡುಗೆ ದೊಡ್ಡದಿದೆ. ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಅವರು ಮಾದರಿ ವ್ಯಕ್ತಿ ಆಗಿದ್ದರು. ಅವರ ಹೆಸರನ್ನು ಶಾಶ್ವತವಾಗಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ. ಈಗ ಬೆಂಗಳೂರಿನ ಶಿವಾನಂದ ಸರ್ಕಲ್ (Shivananda Circle) ಬಳಿ ನಿರ್ಮಾಣ ಆಗುತ್ತಿರುವ ಸ್ಟೀಲ್ ಬ್ರಿಡ್ಜ್ ಫ್ಲೈಓವರ್ಗೆ ಪುನೀತ್ ರಾಜ್ಕುಮಾರ್ ಅವರ ಹೆಸರು ಇಡಬೇಕು ಎಂಬ ವಿಷಯ ಚರ್ಚೆಗೆ ಬಂದಿದೆ. ಈ ಕುರಿತು ಬಿಬಿಎಂಪಿಗೆ ಮನವಿ ಮಾಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ (NR Ramesh) ಹೇಳಿದ್ದಾರೆ.
‘ಇವತ್ತು ಬ್ರಿಡ್ಜ್ ತಡವಾಗಿ ನಿರ್ಮಾಣ ಆಗಲು ಶಿವಾನಂದ ಸ್ಟೋರ್ನವರು ಕಾರಣ. ಈಗ ಅವರ ಹೆಸರನ್ನ ಇಡಬಾರದು. ಕರ್ನಾಟಕ ಚಲನಚಿತ್ರ ಮಂಡಳಿ ಬಳಿ ಈ ನೂತನ ಬ್ರಿಡ್ಜ್ ಇರುವ ಕಾರಣ ಎಲ್ಲರೂ ಚರ್ಚೆ ಮಾಡಿ ಡಾ. ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡಬೇಕು. ಈ ಬಗ್ಗೆ ಬಿಬಿಎಂಬಿಗೆ ಮನವಿ ಮಾಡಲಾಗಿದೆ’ ಎಂದಿದ್ದಾರೆ ಎನ್.ಆರ್. ರಮೇಶ್.
ಇಂದು ಪುನೀತ್ ರಾಜ್ಕುಮಾರ್ ಅವರು ಭೌತಿಕವಾಗಿ ನಮ್ಮ ಜೊತೆ ಇಲ್ಲದೇ ಇರಬಹುದು. ಆದರೆ, ಅವರ ನೆನಪು ಎಂದಿಗೂ ಶಾಶ್ವತ. ಅಪ್ಪು ಮೇಲೆ ಜನರು ಇಟ್ಟಿರುವ ಅಭಿಮಾನಕ್ಕೆ ಸಾಟಿಯೇ ಇಲ್ಲ. ಪುನೀತ್ ನಿಧನರಾದ ಬಳಿಕ ಅನೇಕ ವೃತ್ತ, ರಸ್ತೆ, ಪಾರ್ಕ್ಗಳಿಗೆ ಅವರ ಹೆಸರು ಇಡಲಾಯಿತು. ಹಲವಾರು ಕಡೆಗಳಲ್ಲಿ ಪುನೀತ್ ಅವರ ಪುತ್ಥಳಿ, ಪ್ರತಿಮೆ ನಿರ್ಮಾಣ ಮಾಡಲಾಯಿತು. ಜನರ ಹೃದಯದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ಯಾವ ಸ್ಥಾನ ಇದೆ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ.
ಎಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಪುನೀತ್ ರಾಜ್ಕುಮಾರ್, ಅಪ್ಪು ಎಂದು ಹೆಸರು ಇಟ್ಟಿದ್ದು ಕೂಡ ವರದಿ ಆಗಿದೆ. ಜಾತ್ರೆ, ಉತ್ಸವಗಳಲ್ಲಿ ಪುನೀತ್ ಭಾವಚಿತ್ರ ಹಿಡಿದು ಬರುವ ಭಕ್ತರ ಸಂಖ್ಯೆಗೂ ಕಡಿಮೆ ಇಲ್ಲ. ಇನ್ನೂ ಕೆಲವರ ಮನೆಯ ದೇವರ ಕೋಣೆಯಲ್ಲಿ ಅಪ್ಪು ಫೋಟೋ ಇಡಲಾಗಿದೆ. ಒಟ್ಟಿನಲ್ಲಿ ಪುನೀತ್ ರಾಜ್ಕುಮಾರ್ ಅವರ ನೆನಪನ್ನು ಶಾಶ್ವತವಾಗಿಸುವ ಕಾರ್ಯ ಎಲ್ಲೆಡೆಯೂ ನಡೆಯುತ್ತಿದೆ.
ಅಕ್ಟೋಬರ್ 28ರಂದು ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಅಕ್ಟೋಬರ್ 21ರಂದು ಅದ್ದೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಮಾಡಲು ತೀರ್ಮಾನಿಸಲಾಗಿದೆ. ‘ಪುನೀತ ಪರ್ವ’ ಎಂಬ ಹೆಸರಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕದ ಮೂಲೆ ಮೂಲೆಗಳಿಂದ 5 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:39 pm, Fri, 14 October 22