ಹಿರಿಯ ಕಲಾವಿದರಿಗೆ ಅವಕಾಶ ನೀಡಿ ‘ಅತ್ಯುತ್ತಮ’ ಎನಿಸಿಕೊಂಡ ಕನ್ನಡ ಸಿನಿಮಾ ಈ ವಾರ ತೆರೆಗೆ
‘ಅತ್ಯುತ್ತಮ’ ಸಿನಿಮಾದಲ್ಲಿ ಶಿವಕುಮಾರ್ ಜೇವರಗಿ ಜೊತೆ ಪದ್ಮವಾಸಂತಿ, ಎಂ.ಎಸ್. ಉಮೇಶ್, ಮೈಸೂರು ರಮಾನಂದ್ ಸೇರಿದಂತೆ ಅನೇಕ ಹಿರಿಯ ಕಲಾವಿದರು ನಟಿಸಿದ್ದಾರೆ.
ಚಿತ್ರರಂಗದಲ್ಲಿ ಸಿನಿಮಾ ಚಟುವಟಿಕೆಗಳು ಗರಿಗೆದರಿವೆ. ಗಾಂಧಿನಗರ ಮತ್ತೆ ಹಳೇ ಚಾರ್ಮ್ ಪಡೆದುಕೊಂಡಿದೆ. ಪ್ರತಿ ವಾರ ಹಲವು ಸಿನಿಮಾಗಳು (Kannada Cinema) ಬಿಡುಗಡೆ ಆಗುತ್ತಿವೆ. ಕೊವಿಡ್ ಕಾರಣದಿಂದ ರಿಲೀಸ್ ದಿನಾಂಕ ಮುಂದೂಡಿಕೊಂಡಿದ್ದ ಅನೇಕ ಚಿತ್ರಗಳು ಈಗ ಥಿಯೇಟರ್ ಬಾಗಿಲಿಗೆ ಬರುತ್ತಿವೆ. ಈಗೇನೋ ಎಲ್ಲವೂ ಸರಿಯಾಗಿದೆ. ಆದರೆ ಕೊರೊನಾ ವೈರಸ್ ಹಾವಳಿ ಜೋರಾದಾಗ ಕನ್ನಡ ಚಿತ್ರರಂಗದ (Kannada Film Industry) ಪರಿಸ್ಥಿತಿ ಹದಗೆಟ್ಟಿತ್ತು. ನಟನೆಯನ್ನೇ ನಂಬಿಕೊಂಡಿದ್ದ ಅನೇಕ ಹಿರಿಯ ಕಲಾವಿದರು ಸಮಸ್ಯೆಗೆ ಸಿಲುಕಿದ್ದರು. ನಂತರದ ದಿನಗಳಲ್ಲಿ ಅವರ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುವುದು ಕಷ್ಟವಾಗಿತ್ತು. ಹಿರಿಯ ನಟ-ನಟಿಯರಿಗೆ ಅವಕಾಶ ನೀಡಲು ಕೆಲವು ನಿರ್ಮಾಪಕ-ನಿರ್ದೇಶಕರು ಹಿಂದೇಟು ಹಾಕುತ್ತಾರೆ. ಆದರೆ ‘ಅತ್ಯುತ್ತಮ’ ಕನ್ನಡ ಸಿನಿಮಾದಲ್ಲಿ ಹಳೆಯ ಕಲಾವಿದರಿಗೆ ನಿರ್ದೇಶಕ ಕಮ್ ನಾಯಕ ನಟ ಶಿವಕುಮಾರ್ ಬಿ. ಜೇವರಗಿ ಅವಕಾಶ ನೀಡಿದ್ದಾರೆ. ಆ ಕಾರಣದಿಂದ ಇದು ನಿಜವಾಗಿಯೂ ‘ಅತ್ಯುತ್ತಮ’ ಸಿನಿಮಾ ಎಂದಿದ್ದಾರೆ ಹಿರಿಯ ಕಲಾವಿದರು. ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳ ಅನುಭವ ಹೊಂದಿರುವ ಎಂ.ಎಸ್. ಉಮೇಶ್ (MS Umesh) ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೈಸೂರು ರಮಾನಂದ್ ಅವರು ಕೂಡ ಅಭಿನಯಿಸಿದ್ದಾರೆ. ಈ ಸಿನಿಮಾ ಇಂದು (ಮೇ 13) ಬಿಡುಗಡೆ ಆಗುತ್ತಿದೆ.
‘ಅತ್ಯುತ್ತಮ’ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಶಿವಕುಮಾರ್ ಬಿ. ಜೇವರಗಿ ಅವರು ಹೀರೋ ಆಗಿಯೂ ನಟಿಸಿದ್ದಾರೆ. ಅವರ ಜೊತೆ ಅನುಭವಿ ಕಲಾವಿದರಾದ ಪದ್ಮವಾಸಂತಿ, ಜೈ ಜಗದೀಶ್, ಸುಚೇಂದ್ರ ಪ್ರಸಾದ್, ಗೀತಾ ಅಡಿಗ ಮುಂತಾದವರು ಕೂಡ ಬಣ್ಣ ಹಚ್ಚಿದ್ದಾರೆ. ಸಂಸಾರದ ಸಾಮರಸ್ಯದ ಬಗ್ಗೆ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವ ಆಶಯದಿಂದ ತಯಾರಾದ ‘ಅತ್ಯುತ್ತಮ’ ಚಿತ್ರಕ್ಕೆ ಸುನಿತಾ ಎಸ್. ಜೇವರಗಿ ಬಂಡವಾಳ ಹೂಡಿದ್ದಾರೆ.
‘ನಮ್ಮ ನಮ್ಮ ಮನೆಗಳಲ್ಲಿ ನಡೆಯುವ ಜಗಳಗಳಿಂದಾಗಿ ಎಳೆ ಮನಸ್ಸುಗಳ ಮೇಲೆ ಕೆಟ್ಟ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಾದ್ದು ನಮ್ಮ ಜಾಣತನ. ಅದನ್ನು ಸರಿಯಾಗಿ ಸಾಧಿಸಿದವವೇ ಅತ್ಯುತ್ತಮರು’ ಎಂಬ ಡೈಲಾಗ್ ಟ್ರೇಲರ್ನಲ್ಲಿ ಹೈಲೈಟ್ ಆಗಿದೆ. ಅದೇ ಥೀಮ್ನಲ್ಲಿ ಇಡೀ ಸಿನಿಮಾ ಮೂಡಿಬಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾಗೆ ದಿನೇಶ್ ಕುಮಾರ್ ಸಂಗೀತ ನೀಡಿದ್ದಾರೆ. ರವಿ ಸಂಕಲನ, ಸಿ. ನಾರಾಯಣ್ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ.
ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮೈಸೂರು ರಮಾನಂದ್ ಮಾತನಾಡಿದರು. ‘ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು ಎನ್ನುವ ಮಾತಿನಂತೆ ನಮ್ಮಂಥ ಹಳೇ ಕಲಾವಿದರಿಗೆ ನಿರ್ದೇಶಕರು ಈ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ. ಸೂಕ್ತವಾದ ಸಂಭಾವನೆ ನೀಡಿದ್ದಾರೆ. ಶೂಟಿಂಗ್ ಸಮಯದಲ್ಲಿ ಎಲ್ಲ ಅನುಕೂಲವನ್ನೂ ಮಾಡಿಕೊಟ್ಟಿದ್ದರು. ಆ ವಿಚಾರದಲ್ಲಿ ಹೆಸರಿಗೆ ತಕ್ಕಂತೆಯೇ ಈ ಚಿತ್ರತಂಡ ಅತ್ಯುತ್ತಮ ಆಗಿದೆ. ಈ ಚಿತ್ರದಲ್ಲಿ ಸಾಮಾಜಿಕ ಕಳಕಳಿಯ ಸಂದೇಶ ಇದೆ’ ಎಂದರು ಮೈಸೂರು ರಮಾನಂದ್.
ಈ ಚಿತ್ರದಲ್ಲಿ ನಟಿಸಿದ್ದು ಪದ್ಮವಾಸಂತಿ ಅವರಿಗೆ ಖುಷಿ ನೀಡಿದೆ. ‘ನಾನು ಜೈಗದೀಶ್ ಅವರ ಜೊತೆ ತೆರೆ ಹಂಚಿಕೊಂಡಿದ್ದೇನೆ. ಎಲ್ಲ ಹಳೇ ಕಲಾವಿದರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಹೆಚ್ಚು ಖುಷಿ ಆಯಿತು. ಕೊವಿಡ್ ನಂತರ ಇಷ್ಟು ಜನ ಕಲಾವಿದರಿಗೆ ಕೆಲಸ ಕೊಟ್ಟಿದ್ದಕ್ಕೆ ನಿರ್ದೇಶಕ ಶಿವಕುಮಾರ್ ಜೇವರಗಿ ಅವರಿಗೆ ಧನ್ಯವಾದಗಳು. ಕುಟುಂಬದ ಎಲ್ಲ ಸದಸ್ಯರಿಗೆ ಈ ಸಿನಿಮಾದಲ್ಲಿ ಒಳ್ಳೆಯ ಮೆಸೇಜ್ ಇದೆ’ ಎಂದಿದ್ದಾರೆ ನಟಿ ಪದ್ಮವಾಸಂತಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.