Puneeth Rajkumar: ಪುನೀತ್ ರಾಜ್ಕುಮಾರ್ ಪುಣ್ಯ ಸ್ಮರಣೆ; ಅಪ್ಪು ಸಮಾಧಿಗೆ ಅಣ್ಣಾವ್ರ ಕುಟುಂಬದಿಂದ ಪೂಜೆ
Puneeth Rajkumar Death Anniversary: ಗಾಜನೂರಿನಿಂದಲೂ ಅನೇಕ ಬಂಧುಗಳು ಸದಾಶಿವನಗರದಲ್ಲಿನ ಪುನೀತ್ ಅವರ ಮನೆಗೆ ಆಗಮಿಸಿದ್ದಾರೆ. ಮನೆ ಮುಂದಿನ ಗಣೇಶನಿಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಗಿದೆ.
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ (Puneeth Rajkumar) ನಿಧನರಾಗಿ ಒಂದು ವರ್ಷ ಕಳೆದಿದೆ. ಇಂದು (ಅ.29) ಮೊದಲ ವರ್ಷದ ಪುಣ್ಯ ಸ್ಮರಣೆ (Puneeth Rajkumar Death Anniversary) ಪ್ರಯುಕ್ತ ಅಪ್ಪು ಸಮಾಧಿಗೆ ಡಾ. ರಾಜ್ಕುಮಾರ್ ಕುಟುಂಬದ ಸದಸ್ಯರು ಪೂಜೆ ಸಲ್ಲಿಸುತ್ತಿದ್ದಾರೆ. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಅಪಾರ ಸಂಖ್ಯೆಯಲ್ಲಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಕೂಡ ಸಮಾಧಿಗೆ (Puneeth Rajkumar Samadhi) ಭೇಟಿ ನೀಡಿ, ನಮನ ಸಲ್ಲಿಸುತ್ತಿದ್ದಾರೆ. ಬೆಳಗ್ಗೆ 9 ಗಂಟೆಗೆ ಕುಟುಂಬದವರು ಸಮಾಧಿಗೆ ಪೂಜೆ ಮಾಡಲಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಇದರಲ್ಲಿ ಭಾಗಿ ಆಗಲಿದ್ದಾರೆ. ಅಲ್ಲದೇ, ಅಪ್ಪು ಆಪ್ತರು ಮತ್ತು ಸ್ನೇಹಿತರು ಕೂಡ ಜೊತೆಗೆ ಇರಲಿದ್ದಾರೆ.
ಸಮಾಧಿ ಬಳಿ ಪೂಜೆ ಮುಗಿದ ನಂತರ ಪುನೀತ್ ರಾಜ್ಕುಮಾರ್ ನಿವಾಸದಲ್ಲಿ ವರ್ಷದ ಕಳಸ ಪೂಜೆ ನಡೆಯಲಿದೆ. ಅಪ್ಪುಗೆ ಇಷ್ಟವಾದ ತಿನಿಸುಗಳನ್ನು ಇಟ್ಟು ಪೂಜೆ ನೆರವೇರಿಸಲಾಗುತ್ತದೆ. ಪೂಜೆ ಸಲುವಾಗಿ ಶಿವಣ್ಣ ಮತ್ತು ಗೀತಕ್ಕ ಅವರು ಮುಂಜಾನೆಯೇ ಅಪ್ಪು ನಿವಾಸಕ್ಕೆ ಬಂದು ಹೋಗಿದ್ದಾರೆ. ಡಾ. ರಾಜ್ಕುಮಾರ್ ಹುಟ್ಟೂರಾದ ಗಾಜನೂರಿನಿಂದಲೂ ಅನೇಕ ಬಂಧುಗಳು ಸದಾಶಿವನಗರದಲ್ಲಿರುವ ಪುನೀತ್ ಮನೆಗೆ ಆಗಮಿಸಿದ್ದಾರೆ. ಮನೆ ಮುಂದಿನ ಗಣೇಶನಿಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಗಿದೆ.
ಅಪ್ಪುಗಾಗಿ ಹಿರಿಯ ಜೀವದ ಮಂಡಕ್ಕಿ ಹಾರ:
ಅಪ್ಪು ಪುಣ್ಯ ಸ್ಮರಣೆ ಅಂಗವಾಗಿ ಅಭಿಮಾನಿಗಳು ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಸಮಾಧಿಗೆ ನಮಿಸುತ್ತಿದ್ದಾರೆ. ಸುಮಿತ್ರಾ ಬಾಯಿ ಎಂಬ ವೃದ್ಧೆಯೊಬ್ಬರು ಅಪ್ಪುಗಾಗಿ ಮಂಡಕ್ಕಿ ಹಾರ ತಂದಿದ್ದಾರೆ. ಪುನೀತ್ ನಿಧನರಾದಾಗ ಹಾಗೂ ತಿಥಿ ಸಮಯದಲ್ಲಿ ಕೂಡ ಮಂಡಕ್ಕಿ ಹಾರ ತಂದಿದ್ದರು. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಈ ಹಾರ ನೀಡಬೇಕು ಎಂದು ಸುಮಿತ್ರಾ ಬಾಯಿ ಕಾಯುತ್ತಿದ್ದಾರೆ.
ಕಂಠೀರವ ಸ್ಟುಡಿಯೋ ಬಳಿ ರಾರಾಜಿಸಿದ ಕಟೌಟ್:
ಪುನೀತ್ ರಾಜ್ಕುಮಾರ್ ಸಮಾಧಿ ಇರುವ ಕಂಠೀರವ ಸ್ಟುಡಿಯೋ ಹೊರಗೆ ಅಪ್ಪು ಅವರ ವಿಶೇಷವಾದ ಕಟೌಟ್‌ಗಳನ್ನ ಹಾಕಲಾಗಿದೆ. ಪುನೀತ್ ಅಭಿನಯದ ಸಿನಿಮಾಗಳ ಕಟೌಟ್ ಜೊತೆಯಲ್ಲಿ ಡಾ. ರಾಜ್ಕುಮಾರ್ ಹಾಗೂ ಪಾರ್ವತಮ್ಮ ಅವರ ಕಟೌಟ್ಗಳನ್ನೂ ಹಾಕುವ ಮೂಲಕ ಅಭಿಮಾನ ಮೆರೆಯಲಾಗಿದೆ.
ನೆಲಕ್ಕುರುಳಿದ ವಿದ್ಯುತ್ ಕಂಬ:
ನಟ ಪುನೀತ್ ನಿವಾಸದ ಬಳಿ ಇರುವ ವಿದ್ಯುತ್ ಕಂಬ ನೆಲಕ್ಕೆ ಉರುಳಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಪುನೀತ್ ಮನೆ ಎದುರು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:03 am, Sat, 29 October 22