ಡ್ರೈವರ್ಗಳಿಗಾಗಿ ಹಾಡಿದ ಈ ಗೀತೆಗೆ ಪುನೀತ್ ಹಣ ಪಡೆಯಲಿಲ್ಲ; ಕಾರಣ ತಿಳಿಸಿದ ‘ಯೆಲ್ಲೋ ಬೋರ್ಡ್’ ತಂಡ
‘ಯೆಲ್ಲೋ ಬೋರ್ಡ್’ ಸಿನಿಮಾದಲ್ಲಿ ಪ್ರದೀಪ್ ಅವರು ಡ್ರೈವರ್ ಪಾತ್ರ ಮಾಡಿದ್ದಾರೆ. ಟ್ಯಾಕ್ಸಿ ಚಾಲಕನ ಕನಸು ಮತ್ತು ಆಸೆಗಳ ಸುತ್ತ ಹೆಣೆದ ಕಥೆ ಈ ಸಿನಿಮಾದಲ್ಲಿ ಇದೆ.
ಚಿತ್ರರಂಗದ ಹಲವು ವಿಭಾಗಗಳಲ್ಲಿ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ತೊಡಗಿಕೊಂಡಿದ್ದರು. ನಟನಾಗಿ, ನಿರ್ಮಾಪಕನಾಗಿ, ಗಾಯಕನಾಗಿಯೂ ಅವರು ಗುರುತಿಸಿಕೊಂಡಿದ್ದರು. ಅನೇಕ ಸಿನಿಮಾಗಳಿಗೆ ಅವರು ಹಾಡಿದ ಗೀತೆಗಳು (Puneeth Rajkumar Songs) ಸೂಪರ್ ಹಿಟ್ ಆಗಿವೆ. ಅವರಿಂದ ಒಂದಾದರೂ ಹಾಡು ಹಾಡಿಸಬೇಕು ಎಂದು ಅನೇಕರು ಆಸೆಪಡುತ್ತಿದ್ದರು. ಅದೇ ರೀತಿ ‘ಯೆಲ್ಲೋ ಬೋರ್ಡ್’ (Yellow Board Movie) ಚಿತ್ರಕ್ಕಾಗಿ ಪುನೀತ್ ರಾಜ್ಕುಮಾರ್ ಒಂದು ಹಾಡು ಹೇಳಿದ್ದರು. ಆ ಗೀತೆ ರ‍್ಯಾಪ್ ಶೈಲಿಯಲ್ಲಿದೆ ಎಂಬುದು ವಿಶೇಷ. ವೃತ್ತಿಜೀವನದಲ್ಲಿ ಅಪ್ಪು ಈ ರೀತಿಯ ಹಾಡು ಹೇಳಿದ್ದು ಇದೇ ಮೊದಲು. ವಿಶೇಷವೇನೆಂದರೆ ಈ ಹಾಡು ಹೇಳಿದ್ದಕ್ಕಾಗಿ ಅವರು ಸಂಭಾವನೆ ಪಡೆದುಕೊಳ್ಳಲಿಲ್ಲ! ಅದಕ್ಕೊಂದು ವಿಶೇಷ ಕಾರಣ ಕೂಡ ಇದೆ. ಅದೇನು ಎಂಬುದನ್ನು ‘ಯೆಲ್ಲೋ ಬೋರ್ಡ್’ ಚಿತ್ರತಂಡ ವಿವರಿಸಿದೆ. ಇತ್ತೀಚೆಗೆ ಈ ಹಾಡನ್ನು ಬಿಡುಗಡೆ ಮಾಡಲಾಯಿತು. ಈ ಸಿನಿಮಾದಲ್ಲಿ ಪ್ರದೀಪ್ ನಾಯಕನಾಗಿ ನಟಿಸಿದ್ದಾರೆ. ಅಹಲ್ಯಾ ಸುರೇಶ್, ಸ್ನೇಹಾ ಖುಷಿ, ಸಾಧು ಕೋಕಿಲ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಾ.4ರಂದು ‘ಯೆಲ್ಲೋ ಬೋರ್ಡ್’ ಸಿನಿಮಾ ಬಿಡುಗಡೆ ಆಗಲಿದೆ. ತ್ರಿಲೋಕ್ ರೆಡ್ಡಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಪ್ರದೀಪ್ ಅವರು ಡ್ರೈವರ್ ಪಾತ್ರ ಮಾಡಿದ್ದಾರೆ. ಟ್ಯಾಕ್ಸಿ ಚಾಲಕನ ಕನಸು ಮತ್ತು ಆಸೆಗಳ ಸುತ್ತ ಹೆಣೆದ ಕಥೆ ಈ ಸಿನಿಮಾದಲ್ಲಿ ಇದೆ. ಒಂದು ಕೊಲೆಯ ಆರೋಪ ಹೊತ್ತು ನಾಯಕ ಅದರಿಂದ ಹೇಗೆ ಹೊರಬರುತ್ತಾನೆ ಎಂಬ ಸಸ್ಪೆನ್ಸ್ ಕಹಾನಿಯನ್ನು ತೆರೆಗೆ ತರಲು ತಂಡ ರೆಡಿಯಾಗಿದೆ. ಅದ್ವಿಕ್ ಅವರು ಸಂಗೀತ ನಿರ್ದೇಶನ ಮಾಡಿದ್ದು, ಪ್ರವೀಣ್ ಛಾಯಾಗ್ರಹಣ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ಹಾಡಿರುವ ರ‍್ಯಾಪ್ ಸಾಂಗ್ನಲ್ಲಿ ಡ್ರೈವರ್ಗಳ ಬಗ್ಗೆ ವಿವರಿಸಲಾಗಿದೆ. ಈ ಹಾಡು ಅಪ್ಪು ಅವರಿಗೆ ಸಖತ್ ಇಷ್ಟ ಆಗಿತ್ತು.
‘ಮೊದಲ ಬಾರಿಗೆ ಡ್ರೈವರ್ಗಳ ಕುರಿತು ಸಿನಿಮಾ ಮಾಡಿದ್ದೀರಿ. ಒಳ್ಳೆಯದಾಗಲಿ. ಈ ಹಾಡು ಕೂಡ ಚೆನ್ನಾಗಿದೆ. ಡ್ರೈವರ್ಗಳಿಗೆ ನನ್ನ ಕಡೆಯಿಂದಲೂ ಒಂದು ಕೊಡುಗೆ ಇರಲಿ’ ಎಂದು ಹೇಳಿದ್ದ ಪುನೀತ್ ರಾಜ್ಕುಮಾರ್ ಈ ಹಾಡಿಗೆ ಸಂಭಾವನೆ ಪಡೆದಿರಲಿಲ್ಲ. ಆ ವಿಚಾರವನ್ನು ಪ್ರದೀಪ್ ನೆನಪು ಮಾಡಿಕೊಂಡರು. ಹಲವು ವರ್ಷಗಳ ಹಿಂದೆ ಪ್ರದೀಪ್ ನಟಿಸಿದ್ದ ‘ಜಾಲಿಡೇಸ್’ ಸಿನಿಮಾದ ಆಡಿಯೋ ಬಿಡುಗಡೆಗೆ ಬಂದು ಪುನೀತ್ ಹಾರೈಸಿದ್ದರು. ಈಗ ‘ಯೆಲ್ಲೋ ಬೋರ್ಡ್’ ಹಾಡುಗಳನ್ನು ಕೂಡ ಅವರಿಂದಲೇ ಬಿಡುಗಡೆ ಮಾಡಿಸಬೇಕು ಎಂದು ಆಸೆ ಇಟ್ಟುಕೊಳ್ಳಲಾಗಿತ್ತು. ಆದರೆ ಅದಕ್ಕೆ ವಿಧಿ ಅವಕಾಶ ನೀಡಲಿಲ್ಲ.
ಡ್ರೈವರ್ಗಳ ಕುರಿತಾದ ಈ ಹಾಡನ್ನು ಎಲ್ಲ ಡ್ರೈವರ್ಗಳು ಇಷ್ಟಪಟ್ಟಿದ್ದಾರೆ. ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಈ ಗೀತೆ ಸಾಹಿತ್ಯ ಬರೆದಿರುವುದು ‘ಜೇಮ್ಸ್’ ನಿರ್ದೇಶಕ ಚೇತನ್ ಕುಮಾರ್. ವಿಂಟೇಜ್ ಫಿಲಂಸ್ ಮೂಲಕ ನವೀನ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಯಾವುದೇ ಹೀರೋಯಿಸಂ ಇಲ್ಲದ ಪಾತ್ರದಲ್ಲಿ ಪ್ರದೀಪ್ ಅಭಿನಯಿಸಿದ್ದಾರೆ. ಸಾಮಾನ್ಯವಾಗಿ ಟ್ಯಾಕ್ಸಿ ಚಾಲಕರ ಮೇಲೆ ಕೆಲವು ಆರೋಪಗಳನ್ನು ಹೊರಿಸಲಾಗುತ್ತದೆ. ಯಾರೋ ಒಬ್ಬರು ಮಾಡುವ ತಪ್ಪಿಗೆ, ಎಲ್ಲ ಟ್ಯಾಕ್ಸಿ ಚಾಲಕರನ್ನೂ ದೂಷಿಸುವುದು ಸರಿಯಲ್ಲ ಎಂಬ ವಿಷಯವನ್ನು ಆಧರಿಸಿ ಈ ಚಿತ್ರ ಸಿದ್ಧವಾಗಿದೆ.
ಇದನ್ನೂ ಓದಿ:
‘ಪರಭಾಷೆಯ ಯಾವ ಚಿತ್ರಕ್ಕೂ ಕಮ್ಮಿ ಇಲ್ಲ ಜೇಮ್ಸ್ ಟೀಸರ್’; ಹಾಡಿ ಹೊಗಳಿದ ಪುನೀತ್ ಫ್ಯಾನ್ಸ್
ಈ ಶಾಲೆಯಲ್ಲಿ ಪುನೀತ್ ಫೋಟೋಗೆ ದಿನವೂ ಪೂಜೆ! ಪ್ರತಿ ವರ್ಷ 15 ಮಕ್ಕಳ ದತ್ತು ಸ್ವೀಕಾರ