‘ಸರ್ಕಾರಿ ನ್ಯಾಯಬೆಲೆ ಅಂಗಡಿʼ: ಇದು ರಾಗಿಣಿ ನಟನೆಯ ಹೊಸ ಸಿನಿಮಾ ಶೀರ್ಷಿಕೆ
‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಸಿನಿಮಾದಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಅನೇಕ ಹಿರಿಯ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇರಲಿದ್ದಾರೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಶೂಟಿಂಗ್ ನಡೆಯಲಿದೆ. ಸಾತ್ವಿಕ್ ಪವನ ಕುಮಾರ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ.

ಶೀರ್ಷಿಕೆ ಡಿಫರೆಂಟ್ ಆಗಿದ್ದರೆ ಪ್ರೇಕ್ಷಕರ ಗಮನ ಬೇಗ ಸೆಳೆದುಕೊಳ್ಳಬಹುದು. ಈಗ ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಎಂಬ ಟೈಟಲ್ನಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿದೆ. ಈ ಸಿನಿಮಾದಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಇದುವರೆಗೂ ಹೆಚ್ಚಾಗಿ ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಗಿಣಿ ದ್ವಿವೇದಿ ಅವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಸಿನಿಮಾದಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ನಟಿಸಲಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಕೆಲಸ ಬಹುತೇಕ ಪೂರ್ಣಗೊಂಡಿದೆ. ಇತ್ತೀಚೆಗೆ ಟೈಟಲ್ ಬಿಡುಗಡೆ ಮಾಡಲಾಯಿತು. ಅಲ್ಲದೇ, ಹಾಡುಗಳ ರೆಕಾರ್ಡಿಂಗ್ ಕೂಡ ಆರಂಭ ಆಗಿದೆ.
ಅನಂತ್ ಆರ್ಯನ್ ಅವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಹಾಡುಗಳ ಮುದ್ರಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ರಾಗಿಣಿ ದ್ವಿವೇದಿ, ಗೀತಪ್ರಿಯಾ, ನಿರ್ಮಾಪಕಿಯರಾದ ತೇಜು ಮೂರ್ತಿ, ಎಸ್. ಪದ್ಮಾವತಿ ಚಂದ್ರಶೇಖರ್, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ, ನಿರ್ದೇಶಕ ಸಾತ್ವಿಕ್ ಪವನ್ ಕುಮಾರ್ ಮುಂತಾದವರು ಹಾಜರಿದ್ದರು.
ಸಿನಿಮಾದ ಬಗ್ಗೆ ರಾಗಿಣಿ ದ್ವಿವೇದಿ ಮಾತನಾಡಿದರು. ‘ನನಗೆ ಇದು ಸಂಪೂರ್ಣ ವಿಭಿನ್ನವಾದ ಕಥೆ ಮತ್ತು ಪಾತ್ರ. ಆಹಾರ ವಿತರಣೆಯಲ್ಲೂ ಏನೆಲ್ಲ ನಡೆಯುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ನಮಗೆ ತಿಳಿಯದ ಹಲವು ಶಾಕಿಂಗ್ ವಿಷಯಗಳು ಈ ಸಿನಿಮಾದಲ್ಲಿದೆ. ಇದರ ಮೇಲೆ ನನಗೆ ತುಂಬ ನಿರೀಕ್ಷೆಯಿದೆ. ನನ್ನ ವೃತ್ತಿಜೀವನದಲ್ಲಿ ಇದು ಡಿಫರೆಂಟ್ ಸಿನಿಮಾ ಆಗಲಿದೆ’ ಎಂದು ಅವರು ಹೇಳಿದರು.

Sarkari Nyaya Bele Angadi Movie Team
ತೇಜು ಮೂರ್ತಿ ಮತ್ತು ಎಸ್. ಪದ್ಮಾವತಿ ಚಂದ್ರಶೇಖರ್ ಅವರು ಜಂಟಿಯಾಗಿ ‘ಜಯಶಂಕರ ಟಾಕೀಸ್ʼ ಮೂಲಕ ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಿ. ರಾಮಮೂರ್ತಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಸಾತ್ವಿಕ್ ಪವನ್ ಕುಮಾರ್ ಅವರು ಛಾಯಾಗ್ರಹಣ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಮಾರ್ಚ್ ವೇಳೆಗೆ ಈ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ.
ಇದನ್ನೂ ಓದಿ: ಡ್ರಗ್ಸ್ ಕೇಸ್ನಲ್ಲಿ ರಾಗಿಣಿ ನಿರಪರಾಧಿ; ನಟಿಯ ವಿರುದ್ಧದ ಕೇಸ್ ಖುಲಾಸೆ
ನಿರ್ದೇಶಕ ಸಾತ್ವಿಕ್ ಪವನ ಕುಮಾರ್ ಅವರು ಮಾತನಾಡಿ, ‘ಇದು ನೈಜ ವಿಷಯವನ್ನು ಆಧರಿಸಿದ ಸಿನಿಮಾ. ನಮ್ಮ ನಡುವೆ ಇರುವ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುವ ಘಟನೆಗಳೇ ಇಲ್ಲಿನ ಕಥೆ. ಅದನ್ನು ಕುತೂಹಲಭರಿತವಾಗಿ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ. ರಾಗಿಣಿ ದ್ವಿವೇದಿ ಅವರು ಹೊಸ ರೀತಿಯ ಪಾತ್ರ ಮಾಡುತ್ತಿದ್ದಾರೆ. ನ್ಯಾಯಬೆಲೆ ಅಂಗಡಿ ನಡೆಸುವ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ಅವರು ನಟಿಸುತ್ತಾರೆ’ ಎಂದು ಮಾಹಿತಿ ನೀಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:49 pm, Mon, 3 February 25