ಅಕ್ಟೋಬರ್ನಲ್ಲಿ ರಿಲೀಸ್ ಆಗಲ್ಲ ‘ಸಪ್ತ ಸಾಗರದಾಚೆ ಎಲ್ಲೋ-ಸೈಡ್ ಬಿ’?; ಬೇರೆಯದೇ ಪ್ಲಾನ್ ರೂಪಿಸಿದ ತಂಡ?
ನಿರ್ದೇಶಕ ಹೇಮಂತ್ ರಾವ್ ಹಾಗೂ ರಕ್ಷಿತ್ ಪ್ಲಾನ್ ಬದಲಿಸಿದ್ದಾರೆ. ನವೆಂಬರ್ನಲ್ಲಿ ಸಿನಿಮಾನ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಇವರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ‘777 ಚಾರ್ಲಿ’ (777 Charlie Movie) ಬಳಿಕ ರಕ್ಷಿತ್ ಶೆಟ್ಟಿ ಅವರು ಈ ಸಿನಿಮಾದಿಂದ ಮತ್ತೊಂದು ಗೆಲುವು ಕಂಡರು. ನಟಿ ರುಕ್ಮಿಣಿ ವಸಂತ್ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಈಗ ಚಿತ್ರದ ‘ಸೈಡ್ ಬಿ’ಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಕೆಲವು ವರದಿಗಳ ಪ್ರಕಾರ ಸಿನಿಮಾ ರಿಲೀಸ್ ದಿನಾಂಕ ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದೆಯಂತೆ. ನವೆಂಬರ್ ವೇಳೆಗೆ ಸಿನಿಮಾನ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ರಕ್ಷಿತ್ ಶೆಟ್ಟಿ ಆ್ಯಂಡ್ ಟೀಂ ಪ್ಲಾನ್ ಮಾಡಿಕೊಂಡಿದೆಯಂತೆ.
ಸೆಪ್ಟೆಂಬರ್ 1ರಂದು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರಕ್ಕೆ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿತು. ಈ ಚಿತ್ರದ ಮುಂದುವರಿದ ಭಾಗ ‘ಎಸ್ಎಸ್ಇ ಸೈಡ್ ಬಿ’ ಅಕ್ಟೋಬರ್ 19ರಂದು ರಿಲೀಸ್ ಆಗಬೇಕಿತ್ತು. ಆದರೆ, ಒಂದು ವಾರ ತಡವಾಗಿ ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ನಿರ್ದೇಶಕ ಹೇಮಂತ್ ರಾವ್ ಹಾಗೂ ರಕ್ಷಿತ್ ಪ್ಲಾನ್ ಬದಲಿಸಿದ್ದಾರೆ. ನವೆಂಬರ್ನಲ್ಲಿ ಸಿನಿಮಾನ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಇವರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ರಕ್ಷಿತ್ ಶೆಟ್ಟಿ ಅವರು ಸಿನಿಮಾ ಪ್ರಚಾರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಆದರೆ, ‘ಸಪ್ತ ಸಾಗರದಾಚೆ ಎಲ್ಲೋ-ಸೈಡ್ ಬಿ’ ರಿಲೀಸ್ಗೆ ಇನ್ನು ಕೆಲವೇ ದಿನ ಬಾಕಿ ಇದ್ದರೂ ಇನ್ನೂ ಅವರು ಪ್ರಮೋಷನ್ ಆರಂಭಿಸಿಲ್ಲ. ಟ್ರೇಲರ್ ರಿಲೀಸ್ ಬಗ್ಗೆಯೂ ಯಾವುದೇ ಮಾಹಿತಿ ಕೊಟ್ಟಿಲ್ಲ. ಇದು ಕೂಡ ಅನುಮಾನ ಹೆಚ್ಚಲು ಪ್ರಮುಖ ಕಾರಣ.
ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಬಿ’ ರಿಲೀಸ್ ದಿನಾಂಕದಲ್ಲಿ ಬದಲಾವಣೆ; ಇಲ್ಲಿದೆ ಹೊಸ ಡೇಟ್
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಮೊದಲು ಕನ್ನಡದಲ್ಲಿ ರಿಲೀಸ್ ಆಯಿತು. ನಂತರ ತೆಲುಗಿಗೆ ಡಬ್ ಆಗಿ ಥಿಯೇಟರ್ನಲ್ಲಿ ಬಿಡುಗಡೆ ಆಯಿತು. ಆ ಬಳಿಕ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಐದೂ ಭಾಷೆಗಳಲ್ಲಿ ಸಿನಿಮಾ ಪ್ರಸಾರ ಕಂಡಿತು. ಈಗ ‘ಪಾರ್ಟ್ ಬಿ’ನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲು ತಂಡ ಪ್ಲಾನ್ ರೂಪಿಸಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಅವರಿಗೆ ಹೆಚ್ಚಿನ ಸಮಯದ ಅವಶ್ಯಕತೆ ಇದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ