‘ನಾವು ಭಾರತೀಯರು, ಹಾಗೆಯೇ ಕನ್ನಡಿಗರೂ ಕೂಡ’; ಅದ್ನಾನ್ ಸಮಿ ಹೇಳಿಕೆಗೆ ರಮ್ಯಾ ತಿರುಗೇಟು
ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ, ‘ತೆಲುಗು ಬಾವುಟ ಬಾನೆತ್ತರಕ್ಕೆ ಹಾರುವಂತೆ ಮಾಡಿದ್ದೀರಿ’ ಎಂದು ಸಂತಸ ವ್ಯಕ್ತಪಡಿಸಿದ್ದರು. ಇದನ್ನು ಅದ್ನಾನ್ ಸಮಿ ಖಂಡಿಸಿದ್ದರು.
ನಟಿ ರಮ್ಯಾ (Actress Ramya) ಅವರು ಹಲವು ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳಿದ್ದಾರೆ. ಡಾಲಿ ಧನಂಜಯ್ ನಟನೆಯ ‘ಉತ್ತರಕಾಂಡ’ ಚಿತ್ರದ ಮೂಲಕ ಕಂಬ್ಯಾಕ್ ಆಗುತ್ತಿದ್ದಾರೆ. ಇದರ ಜತೆಗೆ ನಿರ್ಮಾಣ ಸಂಸ್ಥೆ ಆರಂಭಿಸಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅವರ ನಿರ್ಮಾಣದ ಮೊದಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Mutthina Male Haniye) ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ರಮ್ಯಾ ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಹಲವು ಚರ್ಚೆಗಳಲ್ಲಿ ಅವರು ಭಾಗಿ ಆಗುತ್ತಿದ್ದಾರೆ. ಈಗ ಖ್ಯಾತ ಗಾಯಕ ಅದ್ನಾನ್ ಸಮಿ ನೀಡಿದ ಹೇಳಿಕೆ ಬಗ್ಗೆ ರಮ್ಯಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡು ಗೋಲ್ಡನ್ ಗ್ಲೋಬ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಬಾಚಿಕೊಂಡಿತ್ತು. ಈ ಟ್ವೀಟ್ನ ಶೇರ್ ಮಾಡಿಕೊಂಡಿದ್ದ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ, ‘ತೆಲುಗು ಬಾವುಟ ಬಾನೆತ್ತರಕ್ಕೆ ಹಾರುವಂತೆ ಮಾಡಿದ್ದೀರಿ’ ಎಂದು ಸಂತಸ ವ್ಯಕ್ತಪಡಿಸಿದ್ದರು. ಇದನ್ನು ಅದ್ನಾನ್ ಸಮಿ ಖಂಡಿಸಿದ್ದರು.
‘ತೆಲುಗು ಧ್ವಜ? ಭಾರತದ ಧ್ವಜ ಅಲ್ಲವೇ? ನಾವು ಮೊದಲು ಭಾರತೀಯರು. ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳುವುದನ್ನು ನಿಲ್ಲಿಸಿ. ಅದರಲ್ಲೂ ಮುಖ್ಯವಾಗಿ ಅಂತರಾಷ್ಟ್ರೀಯವಾಗಿ ನಾವು ಒಂದು ದೇಶ. 1947ರಲ್ಲಿ ನೋಡಿದಂತೆ ಪ್ರತ್ಯೇಕತಾವಾದಿ ವರ್ತನೆಯು ಅತ್ಯಂತ ಅನಾರೋಗ್ಯಕರ. ಧನ್ಯವಾದಗಳು. ಜೈ ಹಿಂದ್’ ಎಂದು ಗಾಯಕ ಅದ್ನಾನ್ ಸಮಿ ಬರೆದುಕೊಂಡಿದ್ದರು.
Yes, we are are Indians but we are also Kannadigas, Tamils, Telugu, Bengali etc we all have our ‘flags’ just like we have our own language. We feel proud as Indians & also as people rooted by culture, language, flag. Unity in diversity ring a bell? https://t.co/8NbZPDiW3A
— Ramya/Divya Spandana (@divyaspandana) January 12, 2023
ಇದನ್ನು ರಮ್ಯಾ ರೀಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಹೌದು, ನಾವು ಭಾರತೀಯರು. ಅದೇ ರೀತಿ ನಾವು ಕನ್ನಡಿಗರು, ತಮಿಳರು, ಬೆಂಗಾಲಿಗಳು etc… ಕೂಡ ಹೌದು. ನಮ್ಮದೇ ಆದ ಭಾಷೆ ಇರುವಂತೆಯೇ ನಾವೆಲ್ಲರೂ ನಮ್ಮ ಧ್ವಜಗಳನ್ನು ಹೊಂದಿದ್ದೇವೆ. ನಮಗೆ ಭಾರತೀಯರಾಗಿ ಹೇಗೆ ಹೆಮ್ಮೆ ಇದೆಯೋ ಅದೇ ರೀತಿ ನಮ್ಮ ಸಂಸ್ಕೃತಿ, ಭಾಷೆ, ಧ್ವಜದ ಬಗ್ಗೆಯೂ ಹೆಮ್ಮೆ ಇದೆ’ ಎಂದಿದ್ದಾರೆ ರಮ್ಯಾ. ಅವರ ಟ್ವೀಟ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ