‘ಎಲ್ಲರೂ ಬನ್ನಿ ಭೇಟಿಯಾಗೋಣ’ ಅಭಿಮಾನಿಗಳಿಗೆ ಆಹ್ವಾನ ನೀಡಿದ ರಿಷಬ್ ಶೆಟ್ಟಿ: ಎಲ್ಲಿ? ಯಾವಾಗ?
Rishab Shetty: ರಿಷಬ್ ಶೆಟ್ಟಿ ತಮ್ಮ ಅಭಿಮಾನಿಗಳನ್ನು ಭೇಟಿಯಾಗಲು ಮುಂದಾಗಿದ್ದು, ಸ್ಥಳ, ಸಮಯ ನಿಶ್ಚಯಿಸಿ ಆಹ್ವಾನ ನೀಡಿದ್ದಾರೆ.
ಕಾಂತಾರ (Kantara) ಸಿನಿಮಾ ಮೂಲಕ ಪ್ಯಾನ್ ಇಂಡಿಯಾ (Pan India) ಸ್ಟಾರ್ ಆಗಿರುವ ರಿಷಬ್ ಶೆಟ್ಟಿ ಈಗ ಕನ್ನಡ ಚಿತ್ರರಂಗದ ಹಾಟ್ ಫೇವರೇಟ್. ಕಾಂತಾರ ಸಿನಿಮಾದ ಬಳಿಕ ರಿಷಬ್ ಅಭಿಮಾನಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ. ರಿಷಬ್ ಎಲ್ಲಿ ಹೋದರು ಜನ ಮುತ್ತಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ಮಾತ್ರವಲ್ಲ ಪರ ರಾಜ್ಯಗಳಲ್ಲಿಯೂ ರಿಷಬ್ ಶೆಟ್ಟಿಗೆ (Rishab Shetty) ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ನಟರನ್ನು ಭೇಟಿಯಾಗುವುದು ಅಭಿಮಾನಿಗಳಿಗೆ ಹೇಗೆ ಪುಳಕವೋ ಅಂತೆಯೇ ನಟರಿಗೂ ಅಭಿಮಾನಿಗಳನ್ನು ಭೇಟಿ ಆಗುವುದು ಸಂಭ್ರಮವೇ. ಇದೀಗ ರಿಷಬ್ ಶೆಟ್ಟಿ ತಮ್ಮ ಅಭಿಮಾನಿಗಳನ್ನು ಭೇಟಿಯಾಗಲು ಮುಂದಾಗಿದ್ದಾರೆ. ಅದಕ್ಕಾಗಿ ಸಮಯ, ಸ್ಥಳ ನಿಗದಿಪಡಿಸಿದ್ದಾರೆ.
ಕೆಲವೇ ದಿನಗಳಲ್ಲಿ ರಿಷಬ್ ಶೆಟ್ಟಿಯವರ ಹುಟ್ಟುಹಬ್ಬವಿದೆ. ಇಷ್ಟು ದಿನ ಕುಟುಂಬದೊಟ್ಟಿಗೆ, ಆಪ್ತ ಗೆಳೆಯರು ಕೆಲವು ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ರಿಷಬ್ ಶೆಟ್ಟಿ ಈ ಬಾರಿ ಬೃಹತ್ ಆಗಿ ಭಾರಿ ಸಂಖ್ಯೆಯ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಜ್ಜಾಗಿದ್ದಾರೆ. ಹುಟ್ಟುಹಬ್ಬದ ನೆವದ ಮೂಲಕ ತಮ್ಮ ಅಭಿಮಾನಿಗಳನ್ನು ಭೇಟಿ ಆಗಲು ರಿಷಬ್ ಶೆಟ್ಟಿ ಮುಂದಾಗಿದ್ದಾರೆ.
ತಮ್ಮ ಹುಟ್ಟುಹಬ್ಬ ಆಚರಣೆ, ಅಭಿಮಾನಿಗಳ ಭೇಟಿ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿರುವ ರಿಷಬ್ ಶೆಟ್ಟಿ, ”ಕೆರಾಡಿ ಎಂಬ ಸಣ್ಣ ಊರಿನಿಂದ ಸಿನಿಮಾ ಕನಸು ಕಟ್ಟಿಕೊಂಡು ಬಂದಿರುವ ನನಗೆ ಎಷ್ಟೆಲ್ಲ ಪ್ರೀತಿ ತೋರಿಸಿ ಇಲ್ಲಿಯವರೆಗೆ ಕರೆದು ಕೊಂಡು ಬಂದು ನಿಲ್ಲಿಸಿದ್ದೀರ. ನೀವು ಇಷ್ಟೆಲ್ಲ ಪ್ರೀತಿ ತೋರಿಸಿದಾಗ ಅದನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬುದೇ ನನಗೆ ಗೊತ್ತಾಗಲಿಲ್ಲ. ಆದರೆ ಕಾಂತಾರ ಬಿಡುಗಡೆ ಆದ ಬಳಿಕ ತುಂಬಾ ಜನ ನನ್ನ ಮನೆ ಹತ್ತಿರ ಬಂದಿದ್ದೀರ. ಹೋದ ಕಡೆಯೆಲ್ಲ ನನ್ನನ್ನು ಭೇಟಿ ಆಗಲು ಕಾದಿದ್ದೀರ. ಎಷ್ಟೋ ಜನರಿಗೆ ನನ್ನನ್ನು ಭೇಟಿ ಆಗಲು ಆಗಲಿಲ್ಲ. ಆದ್ದರಿಂದ ನನ್ನ ಹುಟ್ಟಿದ ದಿನ ಜುಲೈ 7ನೇ ತಾರೀಖು. ಬೆಂಗಳೂರಿನ ನಂದಿನಿ ಲಿಂಕ್ ಗ್ರೌಂಡ್ನಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಸಿಗೋಣ, ನಿಮ್ಮನ್ನು ಭೇಟಿ ಆಗಲು ನಾನು ಕಾಯುತ್ತಿರುತ್ತೀನಿ” ಎಂದಿದ್ದಾರೆ.
ಇದನ್ನೂ ಓದಿ:ರಿಷಬ್ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾ ಚಿತ್ರೀಕರಣ ಮುಕ್ತಾಯ, ಮತ್ತೊಂದು ಸಿನಿಮಾದ ಕತೆ ಏನಾಯ್ತು?
ಕಾಂತಾರ 2 ಸಿನಿಮಾದ ಚಿತ್ರಕತೆ ತಯಾರಿಯಲ್ಲಿರುವ ರಿಷಬ್ ಶೆಟ್ಟಿ ಬಿಡುವು ಮಾಡಿಕೊಂಡು ಅಭಿಮಾನಿಗಳನ್ನು ಭೇಟಿ ಆಗುತ್ತಿದ್ದಾರೆ. ಕಾಂತಾರ ಸಿನಿಮಾವನ್ನು ಗೆಲ್ಲಿಸಿದ ಜನರನ್ನು, ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಲು ತಮ್ಮ ಹುಟ್ಟುಹಬ್ಬದ ಸಂದರ್ಭವನ್ನು ರಿಷಬ್ ಬಳಸಿಕೊಳ್ಳಲಿದ್ದಾರೆ. ಹಾಗೆಯೇ ಹುಟ್ಟುಹಬ್ಬದ ದಿನ ಕಾಂತಾರ 2 ಸಿನಿಮಾದ ಅಪ್ಡೇಟ್ ಸಹ ಕೊಡುವ ಸಾಧ್ಯತೆ ಇದೆ.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದ ಕಾಂತಾರ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿದೆ. ಕರ್ನಾಟಕದಲ್ಲಿ ಮಾತ್ರವೇ ಅಲ್ಲದೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಆಗಿ, ಬಿಡುಗಡೆ ಆದ ಎಲ್ಲ ಭಾಷೆಗಳಲ್ಲಿಯೂ ಭಾರಿ ಮೊತ್ತವನ್ನು ಕಲೆ ಹಾಕಿಕೊಟ್ಟಿದೆ. ಇದೀಗ ಕಾಂತಾರ 2 ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶಿಸಲು ಅಣಿಯಾಗುತ್ತಿದ್ದಾರೆ. ಆದರೆ ಈಗ ಜನ ನೋಡಿರುವ ಕಾಂತಾರ ಸಿನಿಮಾದಲ್ಲಿ ತೋರಿಸಲಾದ ಕತೆಯ ಹಿಂದಿನ ಕತೆಯನ್ನು ಕಾಂತಾರ 2 ನಲ್ಲಿ ತೋರಿಸಲಾಗುತ್ತಿದೆ. ಕಾಂತಾರ 2 ಸೀಕ್ವೆಲ್ ಅಲ್ಲ ಬದಲಿಗೆ ಪ್ರೀಕ್ವೆಲ್ ಆಗಿರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:57 pm, Tue, 4 July 23