Roberrt: ಪ್ರೇಕ್ಷಕರು ‘ರಾಬರ್ಟ್​’ ಸಿನಿಮಾ ಯಾಕೆ ನೋಡಬೇಕು? ಇಲ್ಲಿದೆ 5 ಪ್ರಮುಖ ಕಾರಣಗಳು!

Roberrt: ಪ್ರೇಕ್ಷಕರು ‘ರಾಬರ್ಟ್​’ ಸಿನಿಮಾ ಯಾಕೆ ನೋಡಬೇಕು? ಇಲ್ಲಿದೆ 5 ಪ್ರಮುಖ ಕಾರಣಗಳು!
ರಾಬರ್ಟ್​ ಸಿನಿಮಾದಲ್ಲಿ ದರ್ಶನ್​

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅಭಿನಯದ ‘ರಾಬರ್ಟ್​’ ಚಿತ್ರ ಮಾ.11ರಂದು ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. 5 ಪ್ರಮುಖ ಕಾರಣಗಳಿಗಾಗಿ ಈ ಸಿನಿಮಾವನ್ನು ನೋಡಬೇಕು ಎಂದು ಕಾದಿದ್ದಾರೆ ಅಭಿಮಾನಿಗಳು.

Rajesh Duggumane

| Edited By: sadhu srinath

Mar 08, 2021 | 12:00 PM

ದರ್ಶನ್​ ನಟನೆಯ ಯಾವುದೇ ಸಿನಿಮಾ ಬಿಡುಗಡೆ ಆದರೂ ಅವರ ಅಭಿಮಾನಿಗಳಿಗೆ ಹಬ್ಬವೇ ಸರಿ. ಎಲ್ಲ ಚಿತ್ರಮಂದಿರಗಳಲ್ಲೂ ಜಾತ್ರೆಯ ವಾತಾವರಣ ನಿರ್ಮಾಣ ಆಗಿರುತ್ತದೆ. ಈಗ ‘ರಾಬರ್ಟ್​’ ತೆರೆಕಾಣುತ್ತಿದ್ದು, ಸಿನಿಮಾ ನೋಡಲು ಫ್ಯಾನ್ಸ್​ ತುದಿಗಾಲಿನಲ್ಲಿ ನಿಂತಿದ್ದಾರೆ. ಸಿನಿಪ್ರಿಯರ ವಲಯದಲ್ಲಿ ‘ರಾಬರ್ಟ್’​ ಬಗ್ಗೆ ನಿರೀಕ್ಷೆ ಮೂಡಲು ಕಾರಣವಾದ 5 ಅಂಶಗಳು ಹೀಗಿವೆ…

ಕಾರಣ 1: ದರ್ಶನ್-ತರುಣ್​​ ಕಾಂಬಿನೇಷನ್​ ಈ ಹಿಂದೆ ತರುಣ್​ ಸುಧೀರ್​ ನಿರ್ದೇಶನ ಮಾಡಿದ್ದ ‘ಚೌಕ’ ಸಿನಿಮಾದಲ್ಲಿ ದರ್ಶನ್​ ಅವರು ರಾಬರ್ಟ್​ ಎಂಬ ಅತಿಥಿ ಪಾತ್ರವನ್ನು ಮಾಡಿದ್ದರು. ಅದಕ್ಕೆ ಜನರಿಂದ ಸಿಕ್ಕಾಪಟ್ಟೆ ಶಿಳ್ಳೆ, ಚೆಪ್ಪಾಳೆ ಸಿಕ್ಕಿತ್ತು. ಈಗ ಅದೇ ಪಾತ್ರವನ್ನು ಮುಖ್ಯವಾಗಿ ಇಟ್ಟುಕೊಂಡು ತರುಣ್​ ಅವರು ಹೊಸ ಕಥೆ ಬರೆದು ‘ರಾಬರ್ಟ್​’ ಸಿನಿಮಾ ಮಾಡಿದ್ದಾರೆ. ಈ ನಟ-ನಿರ್ದೇಶಕನ ಕಾಂಬಿನೇಷನ್​ ಬಗ್ಗೆ ಪ್ರೇಕ್ಷಕರಿಗೆ ದೊಡ್ಡಮಟ್ಟದ ನಿರೀಕ್ಷೆ ಇದೆ.

ಕಾರಣ 2: ಬಹುದಿನಗಳ ಬಳಿಕ ಬರುತ್ತಿರುವ ದರ್ಶನ್​ ಸಿನಿಮಾ ಅಭಿಮಾನಿಗಳು ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರನ್ನು ಬೆಳ್ಳಿಪರದೆ ಮೇಲೆ ನೋಡಿ ತುಂಬ ದಿನಗಳಾಗಿವೆ. 2019ರ ಡಿಸೆಂಬರ್​ನಲ್ಲಿ ‘ಒಡೆಯ’ ಚಿತ್ರ ತೆರೆಕಂಡಿತ್ತು. ನಂತರ ಲಾಕ್​ಡೌನ್​ ಆರಂಭ ಆಗಿದ್ದರಿಂದ ‘ರಾಬರ್ಟ್​’ ಆಗಮನ ತಡವಾಯಿತು. ಒಂದು ವರ್ಷಕ್ಕಿಂತಲೂ ದೀರ್ಘವಾದ ಗ್ಯಾಪ್​ ಬಳಿಕ ದರ್ಶನ್​ ಅವರು ಅಭಿಮಾನಿಗಳನ್ನು ರಂಜಿಸಲು ಬರುತ್ತಿರುವುದರಿಂದ ತಮ್ಮ ನೆಚ್ಚಿನ ನಟನನ್ನು ದೊಡ್ಡ ಪರದೆಯಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಕಾರಣ 3: ಟಾಲಿವುಡ್​ನಲ್ಲೂ ಸೃಷ್ಟಿಯಾದ ಹೈಪ್​ ಕರ್ನಾಟಕ ಮಾತ್ರವಲ್ಲದೆ ತೆಲುಗು ನೆಲದಲ್ಲೂ ‘ರಾಬರ್ಟ್​’ ಸಿನಿಮಾ ಧೂಳೆಬ್ಬಿಸಲು ಸಜ್ಜಾಗಿದೆ. ಅಲ್ಲಿಯೂ ದರ್ಶನ್​ ಅವರಿಗೆ ಅಭಿಮಾನಿಗಳಿದ್ದಾರೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಈಗಾಗಲೇ ‘ರಾಬರ್ಟ್​’ ಕಟೌಟ್​ಗಳು ರಾರಾಜಿಸುತ್ತಿವೆ. ತೆಲುಗು ವರ್ಷನ್​ನ ಟೀಸರ್​, ಟ್ರೇಲರ್ ಮತ್ತು ಹಾಡುಗಳಿ​ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಟಾಲಿವುಡ್​ ಮಂದಿ ಈ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ. ಮಾಸ್​ ಸಿನಿಮಾಗಳನ್ನು ತೆಲುಗು ಸಿನಿಪ್ರಿಯರು ಹೆಚ್ಚು ಇಷ್ಟಪಡುತ್ತಾರೆ.

ಕಾರಣ 4: ಹರಿಕೃಷ್ಣ-ಅರ್ಜುನ್​ ಜನ್ಯ ಜುಗಲ್​ಬಂದಿ ಪ್ರಸ್ತುತ ಕನ್ನಡ ಚಿತ್ರರಂಗದ ಟಾಪ್​ ಸಂಗೀತ ನಿರ್ದೇಶಕರಲ್ಲಿ ಅರ್ಜುನ್​ ಜನ್ಯ ಮತ್ತು ವಿ. ಹರಿಕೃಷ್ಣ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತದೆ. ಈ ಇಬ್ಬರು ಘಟಾನುಘಟಿಗಳು ಜೊತೆಯಾಗಿ ‘ರಾಬರ್ಟ್​’ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಹಾಡುಗಳಿಗೆ ಅರ್ಜುನ್​ ಜನ್ಯ ಸಂಗೀತ ನೀಡಿದ್ದರೆ, ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ವಿ. ಹರಿಕೃಷ್ಣ ನಿಭಾಯಿಸಿದ್ದಾರೆ. ಹಾಡುಗಳು ಈಗಾಗಲೇ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿವೆ. ‘ಜೈ ಶ್ರೀರಾಮ್​…’ ಮತ್ತು ‘ಕಣ್ಣು ಹೊಡೆಯಾಕ…’ ಗೀತೆಗಳು ಎಲ್ಲರ ಫೇವರಿಟ್​ ಆಗಿವೆ.

ಕಾರಣ 5: ಘಟಾನುಘಟಿ ಕಲಾವಿದರ ಸಂಗಮ ‘ರಾಬರ್ಟ್​’ ಸಿನಿಮಾದ ಕ್ಯಾನ್ವಾಸ್​ ದೊಡ್ಡದಾಗಿದೆ. ಬಹುಕೋಟಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಅದಕ್ಕೆ ತಕ್ಕಂತೆ ಅನೇಕ ಖ್ಯಾತ ಕಲಾವಿದರು ನಟಿಸಿದ್ದಾರೆ. ಬಾಲಿವುಡ್​ ಮೂಲಕ ಸಿನಿಪಯಣ ಆರಂಭಿಸಿದ್ದ ನಟಿ ಆಶಾ ಭಟ್​ ಅವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಬಹುಭಾಷೆಯಲ್ಲಿ ಮಿಂಚಿದ ಜಗಪತಿ ಬಾಬು, ರವಿ ಕಿಶನ್​ ಅವರು ‘ರಾಬರ್ಟ್​’ನಲ್ಲಿ ವಿಲನ್​ ಆಗಿ ಅಬ್ಬರಿಸಲಿದ್ದಾರೆ. ವಿನೋದ್​​ ಪ್ರಭಾಕರ್​, ರವಿಶಂಕರ್​, ಸೋನಲ್​ ಮಂಥೆರೋ, ಚಿಕ್ಕಣ್ಣ, ಅವಿನಾಶ್​, ದೇವರಾಜ್​, ಶಿವರಾಜ್​ ಕೆ.ಆರ್​. ಪೇಟೆ, ಐಶ್ವರ್ಯಾ ಪ್ರಸಾದ್​ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ: Darshan: ‘ರಾಬರ್ಟ್​’ ರಿಲೀಸ್​ಗೂ ಮುನ್ನ ದರ್ಶನ್​ ಅಭಿಮಾನಿಗಳಿಗೆ 3 ದಿನ ಬ್ಯಾಕ್​ ಟು ಬ್ಯಾಕ್​ ಹಬ್ಬವೋ ಹಬ್ಬ!

Bigg Boss Kannada : ಬಿಗ್​ ಬಾಸ್​ ಮನೆಯಲ್ಲಿ ದರ್ಶನ್​ ಹಾಡು ಯಾಕೆ ಪ್ಲೇ ಆಗಲ್ಲ? ಸುದೀಪ್​ಗೆ ಪ್ರಶ್ನೆ ಎಸೆದ ‘ಡಿ ಬಾಸ್’​ ಫ್ಯಾನ್ಸ್​!

Follow us on

Most Read Stories

Click on your DTH Provider to Add TV9 Kannada