
‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ಹಾಗೂ ಬಹುಕೋಟಿ ವೆಚ್ಚದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic) ಸಿನಿಮಾ ಸದ್ಯ ಬಿಡುಗಡೆಯ ಹಂತದಲ್ಲಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸಿನಿಮಾ ಬಿಡುಗಡೆಗೂ ಮುನ್ನ ನಟ ಯಶ್ (Yash) ಈ ಚಿತ್ರದ ಕಥೆ ಮತ್ತು ಅದರಲ್ಲಿನ ಮಹಿಳಾ ಪಾತ್ರಗಳ ಕುರಿತು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿರುವ ಮಹಿಳಾ ಪಾತ್ರಗಳು ಅತ್ಯಂತ ಶಕ್ತಿಶಾಲಿ ಹಾಗೂ ಬೋಲ್ಡ್ ಆಗಿ ಮೂಡಿಬಂದಿವೆ ಎಂದು ಅವರು ಹೇಳಿದ್ದಾರೆ.
‘ವೆರೈಟಿ ಇಂಡಿಯಾ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಯಶ್, ‘ಸಾಮಾನ್ಯವಾಗಿ ಪುರುಷರಿಗೆ ಗ್ಯಾಂಗ್‌ಸ್ಟರ್ ಜಗತ್ತು ಅಥವಾ ಮನುಷ್ಯರ ಕರಾಳ ಮುಖದ ಬಗ್ಗೆ ಮಾತನಾಡಲು ಹೆಚ್ಚಿನ ಅವಕಾಶಗಳು ಸಿಗುತ್ತವೆ. ಆದರೆ ಆಳವಾದ ಭಾವನೆಗಳ ತಿಳುವಳಿಕೆ ಇರುವ ಗೀತು ಮೋಹನ್‌ದಾಸ್ ಅವರಂತಹ ನಿರ್ದೇಶಕಿ ಈ ಕರಾಳ ಜಗತ್ತಿನ ಕಥೆಯನ್ನು ಕೈಗೆತ್ತಿಕೊಂಡಾಗ, ಪ್ರತಿಯೊಂದು ದೃಶ್ಯವೂ ವಿಭಿನ್ನ ತಿರುವು ಪಡೆದುಕೊಳ್ಳುತ್ತದೆ’ ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಯಶ್ ಅವರು, ‘ನಮ್ಮ ಸಿನಿಮಾದಲ್ಲಿ ಕೆಲವು ಮಹಿಳಾ ಪಾತ್ರಗಳಿವೆ. ಅವರು ನಿಜಕ್ಕೂ ತುಂಬಾ ಬೋಲ್ಡ್ ಮತ್ತು ಶಕ್ತಿಶಾಲಿ ಮಹಿಳೆಯರು. ತಮ್ಮ ಜೀವನದ ಜವಾಬ್ದಾರಿಯನ್ನು ತಾವೇ ಹೊತ್ತು, ಯಾವುದೇ ಪರಿಸ್ಥಿತಿಯಲ್ಲೂ ಬದುಕುಳಿಯುವ ಧೀರರು. ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ರೀತಿಯ ವಿಭಿನ್ನ ಹಿಂಸೆ ಇರುತ್ತದೆ. ಆದ್ದರಿಂದ, ಅಂತಹ ಪ್ರಬಲ ವ್ಯಕ್ತಿತ್ವಗಳನ್ನು ಕಥೆಯೊಳಗೆ, ಅದೂ ಕೂಡ ಒಬ್ಬ ಮಹಿಳೆಯ ದೃಷ್ಟಿಕೋನದ ಮೂಲಕ ತಂದಾಗ ಅದು ಪ್ರೇಕ್ಷಕರಿಗೆ ಸಂಪೂರ್ಣ ಹೊಸ ಅನುಭವ ನೀಡುತ್ತದೆ’ ಎಂದು ಯಶ್ ವಿವರಿಸಿದ್ದಾರೆ.
‘ಟಾಕ್ಸಿಕ್’ ಒಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಗೀತು ಮೋಹನ್‌ದಾಸ್ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಕ್ಷಯ್ ಒಬೆರಾಯ್, ಸುದೇವ್ ನಾಯರ್, ಅಮಿತ್ ತಿವಾರಿ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ: ಯಶ್ ಸಿನಿಮಾದ ತೆರೆಹಿಂದೆ 10 ಸಾವಿರಕ್ಕೂ ಹೆಚ್ಚು ತಂತ್ರಜ್ಞರು
ಈ ಚಿತ್ರವನ್ನು ಏಕಕಾಲದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಆ್ಯಕ್ಷನ್ ಸೀಕ್ವೆನ್ಸ್‌ಗಳಿಗಾಗಿ ಹಾಲಿವುಡ್‌ನ ಪ್ರಸಿದ್ಧ ‘ಜಾನ್ ವಿಕ್’ ಸಿನಿಮಾ ಖ್ಯಾತಿಯ ಜೆಜೆ ಪೆರ್ರಿ ಸಾಹಸ ನಿರ್ದೇಶನ ಮಾಡಿದ್ದರೆ, ಭಾರತದ ಖ್ಯಾತ ಅನ್ಬರಿವ್ ಜೋಡಿ ಕೂಡ ಕೆಲವು ಪ್ರಮುಖ ಸಾಹಸ ದೃಶ್ಯಗಳನ್ನು ಸಂಯೋಜಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.