ರೋಹಿಣಿ ಸಿಂಧೂರಿ ಅತ್ತೆಯಿಂದ ಗಾಯಕ ಲಕ್ಕಿ ಅಲಿ ವಿರುದ್ಧ ದೂರು, ಪ್ರಕರಣ ರದ್ದು ಮಾಡಿದ ಹೈಕೋರ್ಟ್
Rohini Sindhuri: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಅವರ ಪತಿ ಐಎಎಸ್ ಅಧಿಕಾರಿ ಸುಧೀರ್ ರೆಡ್ಡಿ ಹಾಗೂ ಗಾಯಕ ಲಕ್ಕಿ ಅಲಿ ನಡುವೆ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಕೆಂಚೇನಹಳ್ಳಿ ಬಳಿ ಜಮೀನಿನ ಕುರಿತು ವಿವಾದ ನಡೆಯುತ್ತಿದೆ. ಇದೀಗ ರೋಹಿಣಿ ಸಿಂಧೂರಿಯ ಅತ್ತೆ ಲಕ್ಕಿ ಅಲಿ ವಿರುದ್ಧ ನೀಡಿರುವ ದೂರು ಕುರಿತಂತೆ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಕುಟುಂಬ ಹಾಗೂ ಗಾಯಕ ಲಕ್ಕಿ ಅಲಿ ಅವರ ನಡುವೆ ಜಮೀನಿಗೆ ಸಂಬಂಧಿಸಿದ ವಿವಾದ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿದೆ. ಇತ್ತೀಚೆಗೆ ರೋಹಿಣಿ ಸಿಂಧೂರಿ ಅವರ ಅತ್ತೆ ಬುಜ್ಜಮ್ಮ ಎಂಬುವರು ಗಾಯಕ ಲಕ್ಕಿ ಅಲಿ ವಿರುದ್ಧ ದೂರು ದಾಖಲಿಸಿದ್ದರು. ಲಕ್ಕಿ ಅಲಿ ಕಡೆಯವರು ತಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ, ಕಾಂಪೌಂಡ್ ಒಡೆದು, ಗಿಡಗಳನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನ ಕೆಂಚೇನಹಳ್ಳಿಯ ಜಮೀನಿಗೆ ಲಕ್ಕಿ ಅಲಿ ಮತ್ತು ಅವರ ಬೆಂಬಲಿಗ ನುಗ್ಗಿ ಕಾಂಪೌಂಡ್ ಒಡೆದು, ಗಿಡಗಳನ್ನು ನಾಶ ಮಾಡಿದ್ದಾರೆ. ಇದರಿಂದ ನಮಗೆ 75 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ರೋಹಿಣಿ ಸಿಂಧೂರಿ ಅವರ ಅತ್ತೆ ಬುಜ್ಜಮ್ಮ ದೂರು ನೀಡಿದ್ದರು. ದೂರು ಆಧರಿಸಿ ಎಫ್ಐಆರ್ ಸಹ ದಾಖಲಾಗಿತ್ತು. ಪ್ರಕರಣಕ್ಕೆ ತಡೆ ನೀಡುವಂತೆ ಲಕ್ಕಿ ಅಲಿ ಮತ್ತು ಮೈಲಪನಹಳ್ಳಿ ಶ್ರೀನಿವಾಸ್ ಎಂಬುವರು ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಇದೀಗ ಪ್ರಕರಣಕ್ಕೆ ತಡೆ ನೀಡಿದೆ.
2016 ರಲ್ಲಿ ಲಕ್ಕಿ ಅವರ ಸಹೋದನಿಂದ ಜಮೀನನ್ನು ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ ಖರೀದಿ ಮಾಡಿದ್ದರು. ಆ ಜಮೀನಿನ ಪಕ್ಕದಲ್ಲೇ ಲಕ್ಕಿ ಅಲಿ ಅವರಿಗೆ ಸೇರಿದ ಟ್ರಸ್ಟ್ ಹೆಸರಿನಲ್ಲಿ 87 ಎಕರೆ ಜಾಗವಿದೆ. ಈ ಜಮೀನಿಗೆ ಸಂಬಂಧಿಸಿದಂತೆ ಆಗಿನಿಂದಲೂ ಸುಧೀರ್ ರೆಡ್ಡಿ ಹಾಗೂ ಲಕ್ಕಿ ಅಲಿ ನಡುವೆ ಸಿವಿಲ್ ವ್ಯಾಜ್ಯ ನಡೆಯುತ್ತಿದೆ. ರೋಹಿಣಿ ಸಿಂಧೂರಿ ಅಧಿಕಾರ ದುರ್ಬಳಕೆ ಮಾಡಿ ತಮಗೆ ಬೆದರಿಕೆ ಕಿರುಕುಳ ನೀಡಿದ್ದಾರೆ ಎಂದು ಈ ಹಿಂದೆ ಲಕ್ಕಿ ಅಲಿ ಆರೋಪ ಮಾಡಿದ್ದರು.
ಇದನ್ನೂ ಓದಿ:ಖ್ಯಾತ ಗಾಯಕ ಗಂಭೀರ ಆರೋಪ, IAS ಅಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೊಂದು ಸಂಕಷ್ಟ
ರೋಹಿಣಿ ಸಿಂಧೂರಿ ಮತ್ತು ಅವರ ಪತಿ ಸುಧೀರ್ ರೆಡ್ಡಿ, ಖಾಸಗಿ ದಾರಿಯನ್ನು ಸಾರ್ವಜನಿಕ ದಾರಿ ಎಂದು ವಾದಿಸಿ ಗೇಟ್ ತೆರೆಯುವಂತೆ ಒತ್ತಾಯ ಮಾಡಿದ್ದರು. ಪೊಲೀಸರು ಖಾಸಗಿ ವಾಹನಗಳಲ್ಲಿ ಬಂದು ಬೆದರಿಕೆ ಸಹ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳು ತಮ್ಮ ಬಳಿ ಇರುವುದಾಗಿ ಲಕ್ಕಿ ಅಲಿ ಪರ ವಕೀಲರು ಹೈಕೋರ್ಟ್ನಲ್ಲಿ ವಾದ ಸಲ್ಲಿಸಿದ್ದಾರೆ. ರೋಹಿಣಿ ಸಿಂಧೂರಿ ಮತ್ತು ಅವರ ಪತಿ ಅಧಿಕಾರ ದುರ್ಬಳಕೆ ಮಾಡಿ, ಲಕ್ಕಿ ಅಲಿಗೆ ಕಿರುಕುಳ ನೀಡಿದ್ದಾರೆ ಎಂದು ವಕೀಲರು ವಾದಿಸಿದರು. ವಾದ ಆಲಿಸಿದ ನ್ಯಾಯಾಲಯವು ಲಕ್ಕಿ ಅಲಿ ಹಾಗೂ ಮೈಲಪನಹಳ್ಳಿ ಶ್ರೀನಿವಾಸ್ ಅವರ ವಿರುದ್ಧ ಪ್ರಕರಣಕ್ಕೆ ತಡೆ ನೀಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:34 pm, Thu, 12 December 24