ಸಿದ್ಧವಾಗುತ್ತಿದೆ ಸಾಲುಮರದ ತಿಮ್ಮಕ್ಕನ ಬಯೋಪಿಕ್; ಮುಖ್ಯ ಪಾತ್ರದಲ್ಲಿ ನಟಿ ಸೌಜನ್ಯ
ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಪುಸ್ತಕಗಳು ಪ್ರಕಟಗೊಂಡಿವೆ. ಆದರೆ ಇದೇ ಮೊದಲ ಬಾರಿಗೆ ಅವರ ಜೀವನವನ್ನು ಆಧರಿಸಿ ಸಿನಿಮಾ ತಯಾರಾಗುತ್ತಿದೆ. ನಟಿ ಸೌಜನ್ಯ ಅವರು ಸಾಲುಮರದ ತಿಮ್ಮಕ್ಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಒರಟ ಶ್ರೀ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದೆ.

ಪರಿಸರ ಉಳಿಸುವ ವಿಷಯದಲ್ಲಿ ಸಾಲುಮರದ ತಿಮ್ಮಕ್ಕ (Saalumarada Thimmakka) ಎಲ್ಲರಿಗೂ ಸ್ಫೂರ್ತಿ. ತಿಮ್ಮಕ್ಕ ಅವರ ಸಾಮಾಜಿಕ ಕಾರ್ಯಕ್ಕೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರ ಬದುಕಿನ ಬಗ್ಗೆ ಈಗಗಾಲೇ ಪುಸ್ತಕಗಳು ಬಂದಿವೆ. ಈಗ ಸಿನಿಮಾ ಕೂಡ ಸಿದ್ಧವಾಗುತ್ತಿದೆ. ವೃಕ್ಷಗಳನ್ನೇ ಮಕ್ಕಳಾನ್ನಾಗಿ ಕಂಡು ಲೆಕ್ಕವಿಲ್ಲದಷ್ಟು ಮರಗಳನ್ನು ಬೆಳೆಸಿ ಬೆಳೆಸಿದ ತಿಮ್ಮಕ್ಕ ಅವರು ಈ ಸಮಾಜಕ್ಕೆ ಮಾದರಿ. ಅವರ ಬಯೋಪಿಕ್ (Saalumarada Thimmakka Biopic) ತಯಾರಾಗುತ್ತಿರುವುದು ಸಂತಸದ ವಿಷಯ. ಒರಟ ಶ್ರೀ ಅವರು ಈ ಸಿನಿಮಾಗೆ ನಿದೇಶನ ಮಾಡುತ್ತಿದ್ದಾರೆ.
‘ಶ್ರೀಲಕ್ಷ್ಮಿ ವೆಂಕಟೇಶ್ವರ ಪಿಕ್ಚರ್ಸ್’ ಬ್ಯಾನರ್ ಮೂಲಕ ದಿಲೀಪ್ ಕುಮಾರ್ ಎಚ್.ಆರ್., ಸೌಜನ್ಯ ಡಿ.ವಿ, ಎ. ಸಂತೋಷ್ ಮುರಳಿ, ಒರಟ ಶ್ರೀ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರು ಬರೆದಿರುವ ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ’ ಕೃತಿಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗುತ್ತಿದೆ.
2007ರಲ್ಲಿ ಬಂದಿದ್ದ ‘ಒರಟ ಐ ಲವ್ ಯೂ’ ಸಿನಿಮಾ ಖ್ಯಾತಿಯ ನಿರ್ದೇಶಕ ಒರಟ ಶ್ರೀ ಅವರು ಮೊದಲ ಬಾರಿಗೆ ಕಲಾತ್ಮಕ ಸಿನಿಮಾಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿ ಸೌಜನ್ಯ ಅವರು ತಿಮ್ಮಕ್ಕನ ಪಾತ್ರವನ್ನು ನಿಭಾಯಿಸುದ್ದಾರೆ. ತಿಮ್ಮಕ್ಕನ ಗಂಡನ ಪಾತ್ರವನ್ನು ನೀನಾಸಂ ಅಶ್ವಥ್ ಅವರು ಮಾಡುತ್ತಿದ್ದಾರೆ. ಎಂ.ಕೆ. ಮಠ, ಗಣೇಶ್ ಕೆ. ಸರ್ಕಾರ್, ಮನು, ದೀಪಾ ಡಿ.ಕೆ. ಅಂಜನಮ್ಮ, ಪ್ರಕಾಶ್ ಶೆಟ್ಟಿ, ಭೂಮಿಕಾ ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ.
ಸಾಲುಮರದ ತಿಮ್ಮಕ್ಕನ ಬಯೋಪಿಕ್ಗೆ ಈಗಾಗಲೇ ಶೂಟಿಂಗ್ ಆರಂಭ ಆಗಿದೆ. ತುಮಕೂರು ಜಿಲ್ಲೆಯ ಹುಲಿಕಲ್ ಮತ್ತು ಮಧುಗಿರಿಯ ಸುತ್ತಮುತ್ತ ಚಿತ್ರಿಕರಣ ಮಾಡಲಾಗಿದೆ. ಮೊದಲ ಹಂತದ ಶೂಟಿಂಗ್ ಮುಕ್ತಾಯವಾಗಿದೆ. ಮುಂದಿನ ವಾರದಲ್ಲಿ 2ನೇ ಹಂತದ ಚಿತ್ರೀಕರಣ ಶುರುವಾಗಲಿದೆ. ಇತ್ತೀಚೆಗೆ ಸಿನಿಮಾದ ಶೀರ್ಷಿಕೆಯನ್ನು ಹಿರಿಯ ಬರಹಗಾರ್ತಿ, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಶ್ರೀಮತಿ ನಾಗಲಕ್ಷ್ಮಿ ಬಾಯಿ ಅವರು ಬಿಡುಗಡೆ ಮಾಡಿದರು.
ಇದನ್ನೂ ಓದಿ: ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಮರಳಿದ ಸಾಲುಮರದ ತಿಮ್ಮಕ್ಕ, ಇಬ್ಬರು ನರ್ಸ್‌ಗಳ ನಿಯೋಜನೆ
ಈ ಸಿನಿಮಾಗೆ ನೆಲ್ಲಿಕಟ್ಟೆ ಸಿದ್ದೇಶ್ ಮತ್ತು ಒರಟ ಶ್ರೀ ಅವರು ಸಂಭಾಷಣೆ ಹಾಗೂ ಸಾಹಿತ್ಯವನ್ನು ಬರೆದಿದ್ದಾರೆ. ನಾಗರಾಜ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಕೆ. ಗಿರೀಶ್ ಕುಮಾರ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಶ್ಯಾಮ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








