ಚಂದನವನದಲ್ಲಿ (Sandalwood) ಅತಿ ವೇಗವಾಗಿ ಸಿನಿಮಾ ಕೆಲಸಗಳನ್ನು ಮುಗಿಸುತ್ತಾರೆ ಶಿವರಾಜ್ಕುಮಾರ್ (Shivarajkumar). ಸ್ಯಾಂಡಲ್ವುಡ್ನ ಬಹುಬೇಡಿಕೆಯ ಬ್ಯುಸಿ ನಟರಲ್ಲಿ ಅವರು ಕೂಡ ಪ್ರಮುಖರು. ಹಲವು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ಅವರು ಹೊಸ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರ ಅಭಿಮಾನಿಗಳು ‘ಬೈರಾಗಿ’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಈಗಾಗಲೇ ಟೀಸರ್ ಮತ್ತು ಹಾಡಿನ ಮೂಲಕ ಈ ಸಿನಿಮಾ ಕಾತರ ಮೂಡಿಸಿದೆ. ಅಷ್ಟರಲ್ಲಾಗಲೇ ಇನ್ನೊಂದು ವಿಶೇಷ ಸುದ್ದಿ ಹೊರಬಿದ್ದಿದೆ. ಶಿವರಾಜ್ಕುಮಾರ್ ಅವರು ನಟಿಸಲಿರುವ ಮುಂದಿನ ಸಿನಿಮಾದಲ್ಲಿ ಸೂಪರ್ ಹೀರೋ ಕಥೆ ಇರಲಿದೆ! ಅದಕ್ಕೆ ‘ಅವನೇ ಶ್ರೀಮನ್ನಾರಾಯಣ’ ಖ್ಯಾತಿಯ ಸಚಿನ್ ರವಿ (Sachin Ravi) ನಿರ್ದೇಶನ ಮಾಡಲಿದ್ದಾರೆ. ಸೂಪರ್ ಹೀರೋ ಗೆಟಪ್ನಲ್ಲಿ ಶಿವರಾಜ್ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಈ ಸುದ್ದಿ ಕೇಳಿ ಅವರ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇಷ್ಟು ವರ್ಷಗಳ ಸಿನಿಪಯಣದಲ್ಲಿ ಶಿವಣ್ಣ ಹಲವಾರು ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರನ್ನು ಸೂಪರ್ ಹೀರೋ ಆಗಿ ನೋಡಲು ಫ್ಯಾನ್ಸ್ ಉತ್ಸುಕರಾಗಿದ್ದಾರೆ. ಈ ಚಿತ್ರದಲ್ಲಿ ‘ಹ್ಯಾಟ್ರಿಕ್ ಹೀರೋ’ ಜೊತೆ ಬೇರೆ ಯಾವೆಲ್ಲ ಕಲಾವಿದರು ನಟಿಸಲಿದ್ದಾರೆ? ತೆರೆ ಹಿಂದೆ ಕೆಲಸ ಮಾಡಲಿರುವ ತಂತ್ರಜ್ಞರು ಯಾರು? ಈ ಎಲ್ಲ ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದೆ.
ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ 2019ರ ಡಿಸೆಂಬರ್ನಲ್ಲಿ ತೆರೆಕಂಡಿತು. ಆ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಸಚಿನ್ ರವಿ ಗುರುತಿಸಿಕೊಂಡರು. ಅವರ ಮುಂದಿನ ಸಿನಿಮಾ ಯಾವುದು? ಆ ಚಿತ್ರ ಯಾವ ಪ್ರಕಾರದಲ್ಲಿ ಇರಲಿದೆ ಎಂಬ ಬಗ್ಗೆ ಸಿನಿಪ್ರಿಯರಿಗೆ ಕುತೂಹಲ ಇತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಸಚಿನ್ ರವಿ ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಅವರು ಅಶ್ವತ್ಥಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಮರತ್ವ ಪಡೆದ ಅಶ್ವತ್ಥಾಮನ ಸುತ್ತವೇ ಇಡೀ ಸಿನಿಮಾದ ಕಥೆ ಸಾಗಲಿದೆ. ಇದು ಸಾಹಸ ಪ್ರಧಾನ ಸ್ಪೈ ಥ್ರಿಲ್ಲರ್ ಸಿನಿಮಾ ಆಗಿರಲಿದೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ‘ಬೀಸ್ಟ್’ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಸಿನಿಮಾದಲ್ಲಿ ಶಿವರಾಜ್ಕುಮಾರ್-ರಜನಿಕಾಂತ್ ನಟನೆ?
ನಿರ್ದೇಶಕ ಸಚಿನ್ ರವಿ ಅವರು ಈ ಸಿನಿಮಾದ ಮೂಲಕ ನಿರ್ಮಾಪಕ ಕೂಡ ಆಗುತ್ತಿದ್ದಾರೆ. ಕಾರ್ಪೊರೇಟ್ ಕಂಪನಿಯೊಂದರ ಜೊತೆಗೂಡಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸೂಪರ್ ಹೀರೋ ಕಾನ್ಸೆಪ್ಟ್ ಸಿನಿಮಾ ಎಂದರೆ ಅದ್ದೂರಿಯಾದ ಮೇಕಿಂಗ್ ಇರಲೇಬೇಕು. ಅದಕ್ಕೆ ತಕ್ಕಂತೆ ಅತ್ಯಾಧ್ಯುನಿಕ ವಿಎಫ್ಎಕ್ಸ್ ಕೂಡ ಇರಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಸೆಪ್ಟೆಂಬರ್ನಿಂದ ಈ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಲಿದೆ.
ಇದನ್ನೂ ಓದಿ: ‘ಬಾಯಿ ಇದೆ ಅಂತ ಏನೇನೋ ಮಾತಾಡೋದಲ್ಲ’; ಫ್ಯಾನ್ಸ್ ಅತಿರೇಕಕ್ಕೆ ಶಿವರಾಜ್ಕುಮಾರ್ ಗರಂ
ಚಿತ್ರರಂಗದಲ್ಲಿ ಶಿವರಾಜ್ಕುಮಾರ್ ಅವರ ಅನುಭವ ದೊಡ್ಡದು. 80ರ ದಶಕದಿಂದ ಇಲ್ಲಿಯವರೆಗೆ ಅವರು ಸಕ್ರಿಯರಾಗಿದ್ದಾರೆ. ಮೊದಲ ಸಿನಿಮಾ ‘ಆನಂದ್’ 1986ರಲ್ಲಿ ತೆರೆಕಂಡಿತು. ಈವರೆಗೂ 125ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಹೊಸ ಹೊಸ ಪಾತ್ರಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತ, ನಿರ್ದೇಶಕರ ನಟನಾಗಿ ಅವರು ಗುರುತಿಸಿಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡಲು ಯುವ ನಿರ್ದೇಶಕರು ಆಸೆ ಪಡುತ್ತಾರೆ. ಅದೇ ರೀತಿ ಸಚಿನ್ ರವಿ ಅವರು ಶಿವಣ್ಣನಿಗೆ ಆ್ಯಕ್ಷನ್-ಕಟ್ ಹೇಳುವ ಚಾನ್ಸ್ ಪಡೆದುಕೊಂಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಸಿನಿಮಾ ಯಾವ ರೀತಿ ಇರಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿರ್ಮಾಣ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:12 am, Thu, 19 May 22