ಸ್ಯಾಂಡಲ್ವುಡ್ ಹಿರಿಯ ನಿರ್ಮಾಪಕ ಕೆ. ಪ್ರಭಾಕರ್ ನಿಧನ; ಕಂಬನಿ ಮಿಡಿದ ಚಿತ್ರರಂಗ
ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ಕುಮಾರ್, ಉಪೇಂದ್ರ ಮುಂತಾದ ಹೆಸರಾಂತ ಕಲಾವಿದರ ಸಿನಿಮಾಗಳಿಗೆ ಕೆ. ಪ್ರಭಾಕರ್ ಅವರು ಬಂಡವಾಳ ಹೂಡಿದ್ದರು. ಅವರಿಗೆ 64 ವರ್ಷ ವಯಸ್ಸು ಆಗಿತ್ತು. ಹೃದಯಾಘಾತದಿಂದ ಕೆ. ಪ್ರಭಾಕರ್ ಕೊನೆಯುಸಿರು ಎಳೆದಿದ್ದಾರೆ. ಹಲವು ವರ್ಷಗಳಿಂದ ಸ್ಯಾಂಡಲ್ವುಡ್ನಲ್ಲಿ ಸಕ್ರಿಯವಾಗಿದ್ದ ಅವರ ಅಗಲಿಕೆಗೆ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಕೆ. ಪ್ರಭಾಕರ್ ಅವರು ಬೆಂಗಳೂರಿನಲ್ಲಿ ಕೊನೆಯುಸಿರು ಎಳೆದಿದ್ದಾರೆ. ಇಂದು (ಆಗಸ್ಟ್ 27) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೃದಯಾಘಾತ ಆದ ಬಳಿಕ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಅವರು ಇಹಲೋಕ ತ್ಯಜಿಸಿದ್ದಾರೆ. ಕೆ. ಪ್ರಭಾಕರ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಹಿರಿಯ ನಿರ್ಮಾಪಕನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಸಭ್ಯ ನಿರ್ಮಾಪಕ ಎಂದು ಕೆ. ಪ್ರಭಾಕರ್ ಅವರು ಗುರುತಿಸಿಕೊಂಡಿದ್ದಾರೆ. ಅನೇಕ ಸ್ಟಾರ್ ಕಲಾವಿದರ ಜೊತೆ ಅವರು ಸಿನಿಮಾ ಮಾಡಿದ್ದರು. ಕಾಶಿನಾಥ್, ಶಿವರಾಜ್ಕುಮಾರ್, ವಿಷ್ಣುವರ್ಧನ್, ಉಪೇಂದ್ರ, ರಾಧಿಕಾ ಕುಮಾರಸ್ವಾಮಿ ಮುಂತಾದ ಕಲಾವಿದರ ಸಿನಿಮಾಗಳಿಗೆ ಕೆ. ಪ್ರಭಾಕರ್ ಅವರು ಬಂಡವಾಳ ಹೂಡಿದ್ದರು. ಹಲವು ಸಿನಿಮಾಗಳ ಮೂಲಕ ಅವರು ಹೆಸರು ಗಳಿಸಿದ್ದರು.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಪರಿಸ್ಥಿತಿ, ಹಿರಿಯ ನಟ ಜಗ್ಗೇಶ್ ಕಣ್ಣೀರು
ಕಾಶಿನಾಥ್-ಭವ್ಯ ನಟನೆಯ ‘ಅವಳೇ ನನ್ನ ಹೆಂಡ್ತಿ’, ವಿಷ್ಣುವರ್ಧನ್-ಪ್ರೇಮಾ ಅಭಿನಯದ ‘ಎಲ್ಲರಂಥಲ್ಲ ನನ್ನ ಗಂಡ’, ಶಿವರಾಜ್ಕುಮಾರ್-ರಾಧಿಕಾ ಕುಮಾರಸ್ವಾಮಿ ನಟಿಸಿದ ‘ಅಣ್ಣ-ತಂಗಿ’, ಉಪೇಂದ್ರ-ಶಿವರಾಜ್ಕುಮಾರ್ ಒಟ್ಟಾಗಿ ಅಭಿನಯಿಸಿದ ‘ಲವ-ಕುಶ’ ಮುಂತಾದ ಸಿನಿಮಾಗಳನ್ನು ಕೆ. ಪ್ರಭಾಕರ್ ಅವರು ನಿರ್ಮಾಣ ಮಾಡಿದ್ದರು. ಪರಭಾಷೆಯ ಸಿನಿಮಾಗಳನ್ನು ಕೂಡ ಅವರು ನಿರ್ಮಿಸಿದ್ದರು.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿರುವ ಮುಖ್ಯ ಸಮಸ್ಯೆ ಏನು? ಬೊಟ್ಟು ಮಾಡಿ ತೋರಿದ ದುನಿಯಾ ವಿಜಯ್
ಅಷ್ಟೇ ಅಲ್ಲದೇ, ವಿಷ್ಣುವರ್ಧನ್ ನಟನೆಯ ‘ತುಂಬಿದ ಮನೆ’, ಅಂಬರೀಷ್-ಮಾಲಾಶ್ರೀ ಅಭಿನಯದ ‘ಸೋಲಿಲ್ಲದ ಸರದಾರ’ ಮುಂತಾದ ಚಿತ್ರಗಳಿಗೂ ಕೆ. ಪ್ರಭಾಕರ್ ಅವರು ಹಣ ಹೂಡಿದ್ದರು. ಕೌಟುಂಬಿಕ ಪ್ರೇಕ್ಷಕರನ್ನು ರಂಜಿಸುವಂತಹ ಸಿನಿಮಾಗಳನ್ನು ಮಾಡಿ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಸ್ಯಾಂಡಲ್ವುಡ್ನಲ್ಲಿ ಅನುಭವಿ ನಿರ್ಮಾಪಕನಾಗಿದ್ದ ಪ್ರಭಾಕರ್ ಅವರಿಗೆ 64 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.