ಶಿವಣ್ಣನ ಘೋಸ್ಟ್ಗೆ ಭಾರಿ ಬೇಡಿಕೆ: ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ಹಕ್ಕುಗಳು
Shiva Rajkumar Ghost: ಶಿವರಾಜ್ ಕುಮಾರ್ ನಟನೆಯ 'ಘೋಸ್ಟ್' ಸಿನಿಮಾದ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ಸಿನಿಮಾದ ಹಕ್ಕುಗಳು ದೊಡ್ಡ ಸ್ಟುಡಿಯೋ ಒಂದಕ್ಕೆ ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗಿದೆ.
‘ಜೈಲರ್‘ (Jailer) ಸಿನಿಮಾದಲ್ಲಿ ಶಿವರಾಜ್ ಕುಮಾರ್ (Shiva Rajkumar) ಮಾಡಿರುವ ಸಣ್ಣ ಅತಿಥಿ ಪಾತ್ರವೇ ಅವರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ನೀಡುಬಿಟ್ಟಿದೆ. ಶಿವರಾಜ್ ಕುಮಾರ್ ಸಿನಿಮಾಗಳಿಗೆ ಈಗ ಪರಭಾಷೆಗಳಲ್ಲಿಯೂ ಬೇಡಿಕೆ ಶುರುವಾಗಿದೆ. ಈ ನಡುವೆ ಶಿವರಾಜ್ ಕುಮಾರ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುವಂತಾಗಿದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಪಕ್ಕಾ ಕಮರ್ಶಿಯಲ್, ಮಾಫಿಯಾ ಕತೆಯುಳ್ಳ ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದಾರೆ, ಸಿನಿಮಾದ ಹೆಸರು ‘ಘೋಸ್ಟ್’.
ಶಿವರಾಜ್ ಕುಮಾರ್ ನಟಿಸಿರುವ ‘ಘೋಸ್ಟ್’ ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲ ನೆರೆ ರಾಜ್ಯಗಳಲ್ಲಿಯೂ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾದ ಟೀಸರ್, ಒಂದು ಹಾಡು ಮಾತ್ರವೇ ಈ ವರೆಗೂ ಬಿಡುಗಡೆ ಆಗಿದ್ದು, ಇವೆರಡರಿಂದಲೇ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದು ಸಿನಿಮಾಕ್ಕಾಗಿ ತುದಿ ಗಾಲಲ್ಲಿ ನಿಂತಿದ್ದಾರೆ. ಇದೇ ಕಾರಣಕ್ಕೆ ಸಿನಿಮಾದ ಹಕ್ಕುಗಳಿಗೂ ಭಾರಿ ಬೇಡಿಕೆ ಶುರುವಾಗಿದ್ದು, ದೊಡ್ಡ ಮೊತ್ತಕ್ಕೆ ಹಕ್ಕುಗಳು ಮಾರಾಟವಾಗುತ್ತಿವೆ.
ಸಿನಿಮಾದ ಡಿಜಿಟಲ್ ಹಕ್ಕು, ಪ್ಯಾನ್ ಇಂಡಿಯಾ ಬಿಡುಗಡೆ ಹಕ್ಕು, ಕನ್ನಡೇತರ ಭಾಷೆಯ ಸ್ಯಾಟಲೈಟ್ ಹಕ್ಕುಗಳು ದೊಡ್ಡ ವಿತರಣೆ ಸಂಸ್ಥೆಯೊಂದಕ್ಕೆ ಭಾರಿ ಮೊತ್ತಕ್ಕೆ ಸೇಲ್ ಆಗಿದೆ. ಹೌದು, ಈ ಹಿಂದೆ, ‘ಆರ್ಆರ್ಆರ್’, ‘ಜವಾನ್’ ಸೇರಿದಂತೆ ಹಲವು ಬಿಗ್ ಬಜೆಟ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ವಿತರಣೆ ಮಾಡಿದ್ದ, ಹಕ್ಕುಗಳನ್ನು ಖರೀದಿಸಿರುವ ಪೆನ್ ಸ್ಟುಡಿಯೋಕ್ಕೆ ಘೋಸ್ಟ್ ಸಿನಿಮಾದ ಕೆಲವು ಹಕ್ಕುಗಳು ಮಾರಾಟವಾಗಿವೆ.
ಇದನ್ನೂ ಓದಿ:ಬಾಲಿವುಡ್ನಲ್ಲಿ ಹವಾ ಎಬ್ಬಿಸಲು ಶಿವರಾಜ್ ಕುಮಾರ್ ರೆಡಿ: ಏನಿದು ಹೊಸ ಸುದ್ದಿ?
‘ಘೋಸ್ಟ್’ ಸಿನಿಮಾದ ಕರ್ನಾಟಕೇತರ ಬಿಡುಗಡೆ ಹಕ್ಕು, ಕರ್ನಾಟಕೇತರ ಸ್ಯಾಟಲೈಟ್ ಹಕ್ಕು, ವಿದೇಶಿ ಬಿಡುಗಡೆ ಹಕ್ಕು, ಒಟಿಟಿ ಬಿಡುಗಡೆ ಹಕ್ಕುಗಳು ಪೆನ್ ಸ್ಟುಡಿಯೋಕ್ಕೆ ಮಾರಾಟವಾಗಿವೆ ಎನ್ನಲಾಗುತ್ತಿದೆ. ಅದೂ ಭಾರಿ ದೊಡ್ಡ ಮೊತ್ತಕ್ಕೆ. ಸಿನಿಮಾಕ್ಕೆ ಬಂಡವಾಳ ಹೂಡಿರುವ ಸಂದೇಶ್ ನಾಗರಾಜ್, ಕರ್ನಾಟಕದ ವಿತರಣೆ, ಕನ್ನಡದ ಆಡಿಯೋ ಹಕ್ಕುಗಳನ್ನು ಉಳಿಸಿಕೊಂಡು ಉಳಿದಿದ್ದೆಲ್ಲವನ್ನೂ ಪೆನ್ ಸ್ಟುಡಿಯೋಕ್ಕೆ ಮಾರಾಟ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
‘ಘೋಸ್ಟ್’ ಸಿನಿಮಾವನ್ನು ನಿರ್ದೇಶಕ, ನಟ ಶ್ರೀನಿ ನಿರ್ದೇಶನ ಮಾಡಿದ್ದಾರೆ. ಗ್ಯಾಂಗ್ಸ್ಟರ್ ಒಬ್ಬನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ಸಖತ್ ಸ್ಟೈಲಿಶ್ ಆಗಿ ಚಿತ್ರೀಕರಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾವು ಅಕ್ಟೋಬರ್ 19ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:01 pm, Sat, 23 September 23