Bhajarangi 2: ‘ಭಜರಂಗಿ 2’ ಚಿತ್ರಕ್ಕೆ ರಾಕಿ ಭಾಯ್ ಸಾಥ್; ಒಂದೇ ವೇದಿಕೆಯಲ್ಲಿ ಶಿವಣ್ಣ-ಯಶ್
Yash: ಗಾಂಧಿನಗರದಲ್ಲಿ ಈಗ ಪ್ರೀ-ರಿಲೀಸ್ ಇವೆಂಟ್ಗಳ ಹವಾ ಜೋರಾಗಿದೆ. ಆ ಟ್ರೆಂಡ್ನಲ್ಲಿ ‘ಭಜರಂಗಿ 2’ ತಂಡ ಕೂಡ ಸೇರಿಕೊಳ್ಳುತ್ತಿದ್ದು, ಅದಕ್ಕೆ ಯಶ್ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ.
ಕೊರೊನಾ ವೈರಸ್ ಎರಡನೇ ಅಲೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಗಾಂಧಿನಗರಕ್ಕೆ ಹಳೇ ಚಾರ್ಮ್ ಮರಳಿದೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈಗಾಗಲೇ ದುನಿಯಾ ವಿಜಯ್ ನಟನೆಯ ‘ಸಲಗ’ ಮತ್ತು ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಸಿನಿಮಾಗಳು ರಿಲೀಸ್ ಆಗಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿವೆ. ಈಗ ಶಿವರಾಜ್ಕುಮಾರ್ ಸರದಿ. ‘ಹ್ಯಾಟ್ರಿಕ್ ಹೀರೋ’ ನಟನೆಯ ‘ಭಜರಂಗಿ 2’ (Bhajarangi 2) ಚಿತ್ರ ಅ.29ಕ್ಕೆ ಅದ್ದೂರಿಯಾಗಿ ಬಿಡುಗಡೆ ಆಗಲಿದ್ದು, ಈ ಚಿತ್ರತಂಡಕ್ಕೆ ‘ರಾಕಿಂಗ್ ಸ್ಟಾರ್’ ಯಶ್ ಸಾಥ್ ನೀಡುತ್ತಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಈಗ ಪ್ರೀ-ರಿಲೀಸ್ ಇವೆಂಟ್ಗಳ ಹವಾ ಜೋರಾಗಿದೆ. ಆ ಟ್ರೆಂಡ್ನಲ್ಲಿ ‘ಭಜರಂಗಿ 2’ ತಂಡ ಕೂಡ ಸೇರಿಕೊಳ್ಳುತ್ತಿದೆ. ಇಂದು (ಅ.26) ಸಂಜೆ ಬೆಂಗಳೂರಿನ ಸ್ಟಾರ್ ಹೋಟೆಲ್ವೊಂದರಲ್ಲಿ ಅದ್ದೂರಿಯಾಗಿ ಈ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಲಿದೆ. ವಿಶೇಷ ಏನೆಂದರೆ, ಈ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರು ಮುಖ್ಯ ಅಥಿತಿಯಾಗಿ ಆಗಮಿಸಲಿದ್ದಾರೆ. ಆ ಮೂಲಕ ಚಿತ್ರತಂಡಕ್ಕೆ ಶುಭ ಕೋರಲಿದ್ದಾರೆ.
ಒಂದೇ ವೇದಿಕೆಯಲ್ಲಿ ಶಿವರಾಜ್ಕುಮಾರ್ ಮತ್ತು ಯಶ್ ಕಾಣಿಸಿಕೊಳ್ಳಲಿದ್ದಾರೆ. ಇಡೀ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದೆ. ಚಿತ್ರದ ಬಗ್ಗೆ, ಶಿವಣ್ಣನ ಬಗ್ಗೆ ಯಶ್ ಏನು ಮಾತನಾಡುತ್ತಾರೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾತರರಾಗಿದ್ದಾರೆ.
ಹಲವು ಕಾರಣಗಳಿಗಾಗಿ ‘ಭಜರಂಗಿ 2’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿರುವ ಟ್ರೇಲರ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಸೂಪರ್ ನ್ಯಾಚುರಲ್ ಕಥೆ, ಬೃಹತ್ ಸೆಟ್ಗಳು, ಕಲಾವಿದರ ಭಿನ್ನ ವಿಭಿನ್ನ ಗೆಟಪ್ಗಳು ಗಮನ ಸೆಳೆಯುತ್ತಿವೆ. ಶಿವರಾಜ್ಕುಮಾರ್ ಮತ್ತು ನಿರ್ದೇಶಕ ಎ. ಹರ್ಷ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಮೂರನೇ ಸಿನಿಮಾ ಇದಾಗಿದ್ದು, ಸಾಕಷ್ಟು ಹೈಪ್ ಸೃಷ್ಟಿ ಮಾಡಿದೆ.
ಈ ಸಿನಿಮಾದಲ್ಲಿ ಹಿರಿಯ ನಟಿ ಶ್ರುತಿ, ಭಜರಂಗಿ ಲೋಕಿ, ಭಾವನಾ ಮೆನನ್, ಶಿವರಾಜ್ ಕೆ.ಆರ್. ಪೇಟೆ, ಚೆಲುವ ರಾಜು ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.
ಇದನ್ನೂ ಓದಿ:
‘ಭಜರಂಗಿ 2’ ಟ್ರೇಲರ್ ಬಿಡುಗಡೆಗೂ ಮುನ್ನ ಧೂಳೆಬ್ಬಿಸಿದ ಪೋಸ್ಟರ್; ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ
ಆಲಿಮ್ ಹಕೀಮ್ ಸಲೂನ್ನಲ್ಲಿ ಯಶ್; ಕೆರಳಿದ ಸಿಂಹದಂತಿರುವ ಹೇರ್ ಸ್ಟೈಲ್ ವಿಡಿಯೋ ವೈರಲ್