‘ಭೈರತಿ ರಣಗಲ್​’ ರಿಲೀಸ್​ ದಿನಾಂಕ ಘೋಷಿಸಿ ಎಲ್ಲವನ್ನೂ ವಿವರಿಸಿದ ಶಿವಣ್ಣ

ನರ್ತನ್​ ನಿರ್ದೇಶನ ಮಾಡುತ್ತಿರುವ ‘ಭೈರತಿ ರಣಗಲ್​’ ಸಿನಿಮಾ ಬಗ್ಗೆ ಅಭಿಮಾನಿಗಳ ಸಖತ್ ಕ್ರೇಜ್​ ಇದೆ. ಈ ಸಿನಿಮಾದ ರಿಲೀಸ್​ ದಿನಾಂಕ ಘೋಷಿಸಲಾಗಿದೆ. ಅದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಶಿವರಾಜ್​ಕುಮಾರ್​ ಅವರು ಅನೇಕ ವಿಚಾರಗಳ ಬಗ್ಗೆ ಮನಸಾರೆ ಮಾತನಾಡಿದ್ದಾರೆ. ಈ ಸಿನಿಮಾವನ್ನು ಗೀತಾ ಶಿವರಾಜ್​ಕುಮಾರ್​ ಅವರು ನಿರ್ಮಾಣ ಮಾಡುತ್ತಿದ್ದಾರೆ.

‘ಭೈರತಿ ರಣಗಲ್​’ ರಿಲೀಸ್​ ದಿನಾಂಕ ಘೋಷಿಸಿ ಎಲ್ಲವನ್ನೂ ವಿವರಿಸಿದ ಶಿವಣ್ಣ
ಶಿವರಾಜ್​ಕುಮಾರ್​
Follow us
ಮದನ್​ ಕುಮಾರ್​
|

Updated on: Mar 10, 2024 | 10:02 PM

‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ (Shivarajkumar) ನಟನೆಯ ಬಹುನಿರೀಕ್ಷಿತ ‘ಭೈರತಿ ರಣಗಲ್​’ (Bhairathi Ranagal) ಸಿನಿಮಾ ಆಗಸ್ಟ್​ 15ರಂದು ಬಿಡುಗಡೆ ಆಗಲಿದೆ. ಇಂದು (ಮಾರ್ಚ್​ 10) ಈ ಸಿನಿಮಾದ ಸುದ್ದಿಗೋಷ್ಠಿ ನಡೆದಿದೆ. ವೇದಿಕೆಯಲ್ಲಿ ಶಿವರಾಜ್​ಕುಮಾರ್​ ಅವರು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಇಂಥ ಒಂದು ಪಾತ್ರವನ್ನು ಸೃಷ್ಟಿ ಮಾಡಿದ ನಿರ್ದೇಶಕ ನರ್ತನ್​ ಅವರಿಗೆ ನಾನು ಮೊದಲ ಧನ್ಯವಾದ ಹೇಳಬೇಕು. ಆರಂಭದಲ್ಲಿ ಮಫ್ತಿ ಸಿನಿಮಾ ಮಾಡುವಾಗ ನನಗೆ ಭಯ ಇತ್ತು. ಇಂಟರ್​ವಲ್​ ನಂತರ ಬರುವ ಪಾತ್ರ. ಇದೆಲ್ಲ ಬೇಕಾ ಅಂತ ಗೀತಾಗೂ ಪ್ರಶ್ನೆ ಇತ್ತು. ಮುರಳಿ ನಮ್ಮ ಮಾವನ ಮಗ. ಅವರಿಗೆ ಇಲ್ಲ ಅಂತಾನೂ ಹೇಳೋಕೆ ಆಗಲ್ಲ. ನಂತರ ನರ್ತನ್​ (Narthan) ಒತ್ತಾಯ ಮಾಡಿದಾಗ ಧೈರ್ಯ ಬಂತು. ಯಾರಿಗೆ ಹೆಸರು ಬರುತ್ತೆ ಅನ್ನೋದು ಮುಖ್ಯ ಅಲ್ಲ. ಚೆನ್ನಾಗಿ ಓಡುತ್ತಿರುವ ಸಿನಿಮಾದಲ್ಲಿ ನಾವು ಕೂಡ ಭಾಗಿ ಆಗಿದ್ದೇವೆ ಅನ್ನೋದು ನಮ್ಮ ಭಾಗ್ಯ. ನಂತರ ಆ ಪಾತ್ರ ನನಗೆ ಇಷ್ಟವಾಯ್ತು. ಡೈಲಾಗ್​ನಲ್ಲಿ ಒಂದು ಎನರ್ಜಿ ಇದೆ. ಅದೇ ಪಾತ್ರವನ್ನು ಇಟ್ಟುಕೊಂಡು ಭೈರತಿ ರಣಗಲ್​ ಸಿನಿಮಾ ಮಾಡಲಾಗಿದೆ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

‘ಭೈರತಿ ರಣಗಲ್​ ಹೆಚ್ಚು ಮಾತಾಡುವುದಿಲ್ಲ. ಆದರೆ ಎಲ್ಲಿ ಮಾತು ಬೇಕೋ ಅಲ್ಲ ಮಾತ್ರ ಮಾತಾಡುತ್ತಾನೆ. ನರ್ತನ್​ ಅವರು ತುಂಬ ಚೆನ್ನಾಗಿ ಈ ಸ್ಕ್ರಿಪ್ಟ್​ ಬರೆದಿದ್ದಾರೆ. ರುಕ್ಮಿಣಿ ವಸಂತ್​, ರಾಹುಲ್​ ಬೋಸ್​, ಛಾಯಾ ಸಿಂಗ್​, ಮಧು ಗುರುಸ್ವಾಮಿ, ದೇವರಾಜ್​, ಅವಿನಾಶ್​ ಎಲ್ಲರೂ ತುಂಬ ಚೆನ್ನಾಗಿ ಮಾಡಿದ್ದಾರೆ. ಅದಕ್ಕಾಗಿ ನರ್ತನ್​ ಅವರಿಗೆ ಧನ್ಯವಾದ. ಸಿನಿಮಾ ಚೆನ್ನಾಗಿ ಮೂಡಿಬರುತ್ತಿರುವಾಗ ನಮಗೆ ಖರ್ಚಿನ ಬಗ್ಗೆ ಚಿಂತೆ ಆಗುವುದಿಲ್ಲ’ ಎಂದಿದ್ದಾರೆ ಶಿವರಾಜ್​ಕುಮಾರ್​.

ಇದನ್ನೂ ಓದಿ: ‘ಪುಷ್ಪ 2’, ‘ಸಿಂಗಂ ಅಗೇನ್’ ಜೊತೆ ಸ್ಪರ್ಧೆಗೆ ಇಳಿದ ‘ಭೈರತಿ ರಣಗಲ್’; ಆಗಸ್ಟ್ 15ಕ್ಕೆ ರಿಲೀಸ್

‘ನಾವು ಇಂದು ಭೈರತಿ ರಣಗಲ್​​ ರಿಲೀಸ್​ ಬಗ್ಗೆ ಅನೌನ್ಸ್​ ಮಾಡಿದಾಗ ಎಲ್ಲ ಅಭಿಮಾನಿ ​ದೇವರುಗಳು ತುಂಬ ಚೆನ್ನಾಗಿ ಸಪೋರ್ಟ್​ ಮಾಡಿದರು. ಅವರಿಗೆ ನಾನು ಪ್ರತ್ಯೇಕವಾಗಿ ಧನ್ಯವಾದ ಹೇಳಬೇಕಿಲ್ಲ. ಶಿವಣ್ಣ ಏನು ಎಂಬುದು ಅವರ ಮನಸ್ಸಿಗೆ ಗೊತ್ತು. ಅವರು ಏನು ಎಂಬುದು ನಮ್ಮ ಮನಸ್ಸಿಗೆ ಗೊತ್ತು. ನಾವು ಜಗಳ ಆಡುತ್ತೇವೆ, ಪ್ರೀತಿ ಮಾಡುತ್ತೇವೆ. ಅದನ್ನು ನಾವು ಸಾಬೀತು ಮಾಡಬೇಕಿಲ್ಲ. ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. 38 ವರ್ಷದಿಂದ ನನಗೆ ಬೆಂಬಲ ಕೊಡುತ್ತಿದ್ದೀರಿ’ ಎಂದು ಶಿವಣ್ಣ ಹೇಳಿದ್ದಾರೆ.

‘ಆಗಸ್ಟ್​ 15ರಂದು ನಾವು ಸಿನಿಮಾ ರಿಲೀಸ್​ ಮಾಡುತ್ತಿರುವುದು ಪೈಪೋಟಿಗಾಗಿ ಅಲ್ಲ. ರಜೆಯ ದಿನ ಬೇಕು ಅಂತ ನಾವು ಕೂಡ ಕಾದಿರುತ್ತೇವೆ. ಘೋಸ್ಟ್​ ಸಿನಿಮಾಗೂ ಇದೇ ರೀತಿ ಆಗಿತ್ತು. ರಜಾ ದಿನ ಇದ್ದಾಗ ಯಾರಾದರೂ ಆಯ್ಕೆ ಮಾಡುತ್ತಾರೆ. ಶೇಕಡ 75ರಿಂದ 80ರಷ್ಟು ಸಿನಿಮಾ ಕೆಲಸ ಮುಗಿದಿದೆ. ಇನ್ನು 25ರಿಂದ 30 ದಿನ ಶೂಟಿಂಗ್​ ಮಾತ್ರ ಬಾಕಿ ಇದೆ. ಜೊತೆಗೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳನ್ನು ಮಾಡಲಾಗುತ್ತಿದೆ. ರವಿ ಬಸ್ರೂರು ಹಿನ್ನೆಲೆ ಸಂಗೀತ ಮಾಡಬೇಕು ಮತ್ತು ಹಾಡುಗಳನ್ನು ಕೊಡಬೇಕು’ ಎಂದು ಶಿವಣ್ಣ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್​ಕುಮಾರ್:​

ಬೇರೆ ಭಾಷೆಯಲ್ಲೂ ‘ಭೈರತಿ ರಣಗಲ್​’ ಸಿನಿಮಾವನ್ನು ರಿಲೀಸ್​ ಮಾಡಬೇಕು ಎಂಬ ಆಲೋಚನೆ ಇದೆ. ತಮಿಳುನಾಡಿನಲ್ಲಿ ಶಿವರಾಜ್​ಕುಮಾರ್​ ಅವರಿಗೆ ಅಭಿಮಾನಿ ಬಳಗ ದೊಡ್ಡದಾಗಿದೆ. ಹಾಗಾಗಿ ತಮಿಳಿನಲ್ಲಿ ಖಂಡಿತಾ ರಿಲೀಸ್​ ಮಾಡಲಾಗುತ್ತದೆ ಎಂದು ನಿರ್ದೇಶಕ ನರ್ತನ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.