AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಜಾಮೀನು ರದ್ದು ಅರ್ಜಿ, ಸುಪ್ರೀಂಗೆ ಸರ್ಕಾರ ನೀಡಿರುವ ಕಾರಣಗಳೇನು?

Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್ ಅವರ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಹೈಕೋರ್ಟ್‌ನ ತೀರ್ಪು ತಪ್ಪು ಎಂದು ವಾದಿಸಿರುವ ಸರ್ಕಾರ, ಡಿಎನ್‌ಎ ಪುರಾವೆಗಳು, ಸಾಕ್ಷಿ ಹೇಳಿಕೆಗಳು ಮತ್ತು ಆರೋಪಿಗಳ ಅಪರಾಧ ಹಿನ್ನೆಲೆಯನ್ನು ಉಲ್ಲೇಖಿಸಿದೆ. ದರ್ಶನ್ ಜಾಮೀನು ರದ್ದು ಮಾಡುವಂತೆ ಸರ್ಕಾರ ಸುಪ್ರೀಂಗೆ ಕೆಲವು ಕಾರಣಗಳನ್ನು ನೀಡಿದೆ.

ದರ್ಶನ್ ಜಾಮೀನು ರದ್ದು ಅರ್ಜಿ, ಸುಪ್ರೀಂಗೆ ಸರ್ಕಾರ ನೀಡಿರುವ ಕಾರಣಗಳೇನು?
Darshan Thoogudeepa Supreme
ಮಂಜುನಾಥ ಸಿ.
|

Updated on:Aug 06, 2025 | 12:17 PM

Share

ನಟ ದರ್ಶನ್ (Darshan) ಸೇರಿದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಇನ್ನೂ ಕೆಲವು ಆರೋಪಿಗಳ ಜಾಮೀನು ರದ್ದು ಕೋರಿ ಸರ್ಕಾರ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಚಾಲ್ತಿಯಲ್ಲಿದೆ. ಕೆಲ ದಿನಗಳ ಹಿಂದೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಜಾಮೀನು ನೀಡುವ ವಿಚಾರದಲ್ಲಿ ಹೈಕೋರ್ಟ್ ಆತುರ ತೋರಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಅರ್ಜಿ ವಿಚಾರಣೆ ಇನ್ನೂ ಚಾಲ್ತಿಯಲ್ಲಿದ್ದು, ದರ್ಶನ್ ಹಾಗೂ ಇನ್ನೂ ಕೆಲ ಆರೋಪಿಗಳ ಜಾಮೀನು ರದ್ದಿಗೆ ಸರ್ಕಾರ, ಸುಪ್ರೀಂಕೋರ್ಟ್​ಗೆ ಕೆಲ ಬಲವಾದ ಕಾರಣಗಳನ್ನು ನೀಡಿದೆ ಅದರ ವಿವರ ಇಲ್ಲಿದೆ…

ಮೃತ ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದ, ದರ್ಶನ್ ಲಿವ್-ಇನ್ ಸಂಬಂಧದಲ್ಲಿದ್ದ ಪವಿತ್ರ ಗೌಡಗೆ ಇನ್​ಸ್ಟಾಗ್ರಾಂನಲ್ಲಿ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿದ್ದ. ಇದರಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ, ಪಟ್ಟಣಗೆರೆಯ ಶೆಡ್‌ನಲ್ಲಿ ಕೊಲೆ ಮಾಡಲಾಯಿತು. ಆರೋಪಿಗಳು ಕೊಲೆ ನಡೆದ ಸ್ಥಳದಲ್ಲಿದ್ದರು ಎನ್ನುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಅಪಹರಣದ ಸಮಯದಲ್ಲಿ ಮತ್ತು ಕೊಲೆ ನಡೆದ ಸ್ಥಳದಲ್ಲಿ ಆರೋಪಿಗಳು ಇದ್ದರು ಎಂದು ತಿಳಿದುಬಂದಿದೆ. ಪಟ್ಟಣಗೆರೆಯ ಶೆಡ್‌ಗೆ ಆರೋಪಿಗಳು, ಮೃತ ವ್ಯಕ್ತಿ ಪ್ರವೇಶಿಸುವುದನ್ನು ಐವರು ಸಾಕ್ಷಿಗಳು ನೋಡಿದ್ದಾರೆ ಎಂದು ಸರ್ಕಾರ ಸುಪ್ರೀಂಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಕೊಲೆ ನಡೆದ ಸ್ಥಳದಿಂದ ಸಂಗ್ರಹಿಸಲಾದ ಮಣ್ಣಿನ ಮಾದರಿ ಮತ್ತು A-2 ದರ್ಶನ್, A-4 ರಾಘವೇಂದ್ರ, A-5 ನಂದೀಶ್ ಮತ್ತು A-11 ನಾಗರಾಜು ಅವರುಗಳ ಪಾದರಕ್ಷೆಗಳಿಂದ ಸಂಗ್ರಹಿಸಲಾದ ಮಣ್ಣಿನ ಮಾದರಿಗಳು ಹೊಂದಾಣಿಕೆಯಾಗುತ್ತವೆ. DNA ವಿಶ್ಲೇಷಣೆಯಿಂದ ಮೃತ ರೇಣುಕಾಸ್ವಾಮಿ ರಕ್ತದ ಕಲೆಗಳು ಹಲವು ಆರೋಪಿ ಬಟ್ಟೆಗಳ ಮೇಲೆ ಕಂಡುಬಂದಿವೆ. ಕೊಲೆ ನಡೆದ ಸಮಯದಲ್ಲಿ A-1 ಪವಿತ್ರಾ ಗೌಡ ಮತ್ತು A-2 ದರ್ಶನ್ ಇಬ್ಬರೂ ಸಕ್ರಿಯವಾಗಿ ಭಾಗಿಯಾಗಿದ್ದರು, ಹೈಕೋರ್ಟ್‌ನ ಜಾಮೀನು ನೀಡುವ ತೀರ್ಪು ಸರಿಯಾಗಿಲ್ಲ ಮತ್ತು ದಾಖಲೆಗಳಿಗೆ ವಿರುದ್ಧವಾಗಿದೆ , ಕೊಲೆ ಮಾಡಲು ಬಳಸಿದ ಆಯುಧಗಳು ಮಾರಕವಲ್ಲ ಎಂದು ಹೈಕೋರ್ಟ್ ಹೇಳಿರುವುದು ತಪ್ಪು, ಮೃತನ ಮೇಲಿನ ಗಾಯಗಳು ಇದನ್ನು ಸುಳ್ಳಾಗಿಸುತ್ತವೆ ಎಂದು ಸರ್ಕಾರ ವಾದಿಸಿದೆ.

ಇದನ್ನೂ ಓದಿ:ರಮ್ಯಾ ಕ್ರಮಕ್ಕೆ ದರ್ಶನ್ ಅಭಿಮಾನಿಗಳಲ್ಲಿ ನಡುಕ 

ಸಾಕ್ಷಿಯಾದ ಪುನೀತ್ ಹೇಳಿಕೆಯನ್ನು ತಡವಾಗಿ ದಾಖಲಿಸಲಾಗಿದೆ ಎಂಬ ಕಾರಣಕ್ಕೆ ತನಿಖೆಯನ್ನು ಅನುಮಾನಿಸಿರುವುದು ಸರಿಯಲ್ಲ. ಹೇಳಿಕೆಯನ್ನು ತಡವಾಗಿ ದಾಖಲಿಸಲು ಸೂಕ್ತ ಕಾರಣಗಳನ್ನು ನೀಡಲಾಗಿದೆ. ಪ್ರಕರಣದಲ್ಲಿ ಸೂಕ್ತ ವಿಧಿ ವಿಜ್ಞಾನ, ಎಲೆಕ್ಟ್ರಾನಿಕ್ ಮತ್ತು CDR ಪುರಾವೆಗಳಿವೆ ಎಂದು ಹೈಕೋರ್ಟ್ ಪರಿಗಣಿಸಿಲ್ಲ. ಜಾಮೀನು ವಿಚಾರಣೆಯ ಹಂತದಲ್ಲಿ ಹೈಕೋರ್ಟ್ ‘ಮಿನಿ ಟ್ರಯಲ್’ ನಡೆಸಿದೆ. A-2 ದರ್ಶನ್ ಗೆ ಹಿಂದೆ ಕೂಡ ಅಪರಾಧ ಚಟುವಟಿಕೆಗಳಲ್ಲಿ ಭಾಗಿ ಆಗಿದ್ದರು ಅವರಿಗೆ ಅಪರಾಧಿಕ ಹಿನ್ನಲೆ ಇದೆ. A-2 ದರ್ಶನ್ ಬೆನ್ನು ನೋವಿನ ಕಾರಣಕ್ಕೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಪಡೆದಿದ್ದರೂ. ಆದರೆ ಅದರ ಮರುದಿನವೇ ಚಲನಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಇದರಿಂದ ಅವರು ಜಾಮೀನನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಸರ್ಕಾರ ಆರೋಪಿಸಿದೆ. ಈ ಪ್ರಕರಣದಲ್ಲಿ, A-2 ದರ್ಶನ್ ಮತ್ತು ಅವರ ಸಹ ಆರೋಪಿಗಳ ಪ್ರಭಾವದಿಂದ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ. ಪ್ರಕರಣದ ವಿಚಾರಣೆಯನ್ನು ದಿನನಿತ್ಯ ನಡೆಸಲು ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ನೇಮಿಸಲು ಸರ್ಕಾರ ಒಪ್ಪಿಕೊಂಡಿದೆ ಎಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:31 am, Wed, 6 August 25