‘ಮ್ಯಾಕ್ಸ್’ ಸಿನಿಮಾ ಸೀಕ್ವೆಲ್: ಸುದೀಪ್ ಹೇಳಿದ್ದೇನು?
Max Kannada Movie: ಸುದೀಪ್ ನಟಿಸಿ, ಸಹ ನಿರ್ಮಾಣ ಮಾಡಿರುವ ‘ಮ್ಯಾಕ್ಸ್’ ಸಿನಿಮಾ ಒಂದು ವಾರದ ಹಿಂದೆ ಬಿಡುಗಡೆ ಆಗಿದ್ದು, ಈಗಲೂ ರಾಜ್ಯದ ಹಲೆವೆಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದವರೆಲ್ಲ ಸಿನಿಮಾದ ಸೀಕ್ವೆಲ್ ಬರುತ್ತಾ ಎಂದು ಕೇಳುತ್ತಿದ್ದಾರೆ. ಈ ಪ್ರಶ್ನೆಗೆ ಇದೀಗ ಸ್ವತಃ ಸುದೀಪ್ ಉತ್ತರ ನೀಡಿದ್ದಾರೆ.
ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೇವಲ ಒಂದು ದಿನದಲ್ಲಿ ನಡೆಯುವ ಕತೆಯನ್ನು ಸಿನಿಮಾ ಒಳಗೊಂಡಿದ್ದು, ಸಿನಿಮಾದ ಮಾಸ್ ಅಂಶಗಳು, ಭರ್ಜರಿ ಆಕ್ಷನ್, ಕತೆಯಲ್ಲಿನ ಟ್ವಿಸ್ಟ್ ಸಖತ್ ಗಮನ ಸೆಳೆಯುತ್ತಿದೆ. ಸಿನಿಮಾ ತೆಲುಗು ಹಾಗೂ ತಮಿಳಿನಲ್ಲಿಯೂ ಬಿಡುಗಡೆ ಆಗಿದ್ದು, ಅಲ್ಲಿಯೂ ಸಹ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದ ಸೀಕ್ವೆಲ್ ಸಹ ಬರಲಿದೆಯೇ ಎಂಬ ಪ್ರಶ್ನೆ ಸುದೀಪ್ಗೆ ಎದುರಾಗಿದ್ದು, ಈ ಬಗ್ಗೆ ಕಿಚ್ಚ ಉತ್ತರ ನೀಡಿದ್ದಾರೆ.
ಮ್ಯಾಕ್ಸ್ ಸೀಕ್ವೆಲ್ ಪ್ರೀಕ್ವೆಲ್ ಬಗ್ಗೆ ಸುಳಿವು ಕೊಟ್ಟಿರುವ ಸುದೀಪ್, ‘ನಿರ್ದೇಶಕ ವಿಜಯ್ ಕಥೆ ಬರೀತಾರೆ ಅಂತ ಅಂದ್ಕೊಳ್ಳೋಣ’ ಎಂದು ಹೇಳಿದ್ದಾರೆ. ಆ ಮೂಲಕ ಸಿನಿಮಾದ ಸೀಕ್ವೆಲ್ ಬರುವ ಸಾಧ್ಯತೆ ಇದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಸಿನಿಮಾವನ್ನು ತಮಿಳಿನ ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಧನು, ಸುದೀಪ್ ಸಹ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ:‘ಯುಐ’ ಚಿತ್ರದ ಗಳಿಕೆ ಹಿಂದಿಕ್ಕಿದ ‘ಮ್ಯಾಕ್ಸ್’; ಯಾವ ಸಿನಿಮಾದ ಕಲೆಕ್ಷನ್ ಎಷ್ಟು?
ಸಿನಿಮಾ ಅನ್ನು ಇಂದು ಅಭಿಮಾನಿಗಳೊಟ್ಟಿಗೆ ಕೂತು ಸುದೀಪ್ ವೀಕ್ಷಣೆ ಮಾಡಿ ಎಂಜಾಯ್ ಮಾಡಿದರು. ನರ್ತಕಿ ಚಿತ್ರಮಂದಿರದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳೊಟ್ಟಿಗೆ ಸಿನಿಮಾ ವೀಕ್ಷಿಸಿದರು. ಬಳಿಕ ಮಾತನಾಡಿದ ಕಿಚ್ಚ ಸುದೀಪ್, ‘ಫ್ಯಾನ್ಸ್ ಜೊತೆ ಸಿನಿಮಾ ನೋಡಿ ತುಂಬಾ ಖುಷಿ ಆಯ್ತು, ನಾನು ‘ವಿಲನ್’ ಸಿನಿಮಾನ ಫ್ಯಾನ್ಸ್ ಜೊತೆ ನೋಡೋಕೆ ಬಂದಿದ್ದೆ, ಆ ನಂತರ ಥಿಯೇಟರ್ ಗೆ ಬರೋದನ್ನು ನಿಲ್ಲಿಸದ್ದೆ, ಬಹಳ ವರ್ಷಗಳ ಬಳಿಕ ಇಂದು ಅಭಿಮಾನಿಗಳೊಟ್ಟಿಗೆ ‘ಮ್ಯಾಕ್ಸ್’ ಸಿನಿಮಾ ನೋಡಿದೆ ಖುಷಿ ಆಯ್ತು’ ಎಂದಿದ್ದಾರೆ.
‘ಫ್ಯಾನ್ಸ್ ತುಂಬಾ ಚನ್ನಾಗಿ ನಡೆದುಕೊಂಡು, ಯಾವುದೇ ಸಮಸ್ಯೆ ಮಾಡಲಿಲ್ಲ ಆದರೆ ಅಮ್ಮನ ಹೆಸರಿನ ಟೈಟಲ್ ಕಾರ್ಡ್ ನೋಡೋಕೆ ನನಗೆ ಸಾಧ್ಯ ಆಗಿಲ್ಲ’ ಎಂದರು. ಮುಂದುವರೆದು, ‘ಮಲಯಾಳಂ ಹಿಂದಿಯಲ್ಲಿ ‘ಮ್ಯಾಕ್ಸ್’ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ನಾನು ಇದು ಕನ್ನಡಕ್ಕೆ ಅಂತಾನೆ ಮಾಡಿರೋ ಸಿನಿಮಾ, ಬೇರೆ ಭಾಷೆಗೆ ನಾನು ಡಬ್ ಮಾಡಿಲ್ಲ, ತಮಿಳಿನಲ್ಲಿ ಸಿನಿಮಾ ತುಂಬಾ ಚನ್ನಾಗಿ ಆಗ್ತಿದೆ, ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲಾ ಸಿನಿಮಾ ನೋಡುತ್ತಿದ್ದಾರೆ’ ಎಂದರು.
‘ವರ್ಷಕ್ಕೆ ಎರಡು ಸಿನಿಮಾ ಮಾಡೋ ಪ್ರಯತ್ನ ಮಾಡುತ್ತೇನೆ. ಕನ್ನಡ ಚಿತ್ರಗಳಿಗೆ ಜನರ ಪ್ರೋತ್ಸಾಹ ತುಂಬಾ ಇದೆ, ‘ಮ್ಯಾಕ್ಸ್’ ಸಿನಿಮಾ ಹೌಸ್ ಫುಲ್ ಆಗ್ತಿರೋದಕ್ಕೆ ತುಂಬಾ ಖುಷಿ ಇದೆ. ಸಿನಿಮಾದ ಆಕ್ಷನ್, ಡೈಲಗ್ಸ್ ತುಂಬಾ ಎಂಜಾಯ್ ಮಾಡುತ್ತಿದ್ದಾರೆ. ಇಡೀ ತಂಡದ ಪ್ರಯತ್ನಕ್ಕೆ ಫಲ ಸಿಕ್ಕಿದೆ’ ಎಂದಿದ್ದಾರೆ ಸುದೀಪ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ