
ಕನ್ನಡ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿ ಇಂದು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna), ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅವರಿಗೆ ‘ಮಿಸ್ಟರ್ ಶೋಆಫ್’ (Mr Show-off) ಎಂದು ಹೇಳಿ ಭಾರೀ ವಿವಾದಕ್ಕೀಡಾಗಿದ್ದರು. 2017ರಲ್ಲಿ ನಡೆದ ಈ ಹಳೆಯ ಘಟನೆಯ ಬಗ್ಗೆ ‘ಆಪ್ ಕಿ ಅದಾಲತ್’ ಶೋನಲ್ಲಿ ಮಾತನಾಡಿದ ‘ಟಾಕ್ಸಿಕ್’ ಹೀರೋ ಯಶ್ (Yash) ಅವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ರಜತ್ ಶರ್ಮಾ ಅವರ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ರಶ್ಮಿಕಾ ಅವರ ಹಳೆಯ ಹೇಳಿಕೆಯ ಕುರಿತು ಪ್ರಶ್ನಿಸಿದಾಗ ಉತ್ತರಿಸಿದ ಯಶ್, ಯಾರೊಬ್ಬರ ಅಭಿಪ್ರಾಯವೂ ತಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ಯಾರಾದರೂ ನಮ್ಮ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬಹುದು. ಆದರೆ ಯಾರದ್ದೋ ಅಭಿಪ್ರಾಯ ನನ್ನ ವ್ಯಕ್ತಿತ್ವವಾಗಲು ಸಾಧ್ಯವಿಲ್ಲ. ನಾನು ಏನಾಗಿದ್ದೇನೋ, ಅದು ಇನ್ನೊಬ್ಬರ ದೃಷ್ಟಿಕೋನದಿಂದ ಬದಲಾಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.
‘ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದರು ಎಂಬುದು ನನಗೆ ಗೊತ್ತಿಲ್ಲ. ಆಗ ಅವರು ಚಿತ್ರರಂಗಕ್ಕೆ ಹೊಸಬರಾಗಿದ್ದರು. ಕೆಲವೊಂದು ಟಿವಿ ಶೋಗಳಲ್ಲಿ ನಿರೂಪಕರು 3-4 ಆಯ್ಕೆಗಳನ್ನು ನೀಡುತ್ತಾರೆ. ಪ್ರಾಯಶಃ ನನಗೆ ಈ ಆಯ್ಕೆ ಸೂಕ್ತವಾಗಬಹುದು ಎಂದು ಆ ಹುಡುಗಿ ಯೋಚಿಸಿರಬಹುದು. ಆ ಸಂದರ್ಭದಲ್ಲಿ ಹಲವು ನಿರ್ದೇಶಕರು ಅಸಮಾಧಾನಗೊಂಡಿದ್ದರು’ ಎಂದಿದ್ದಾರೆ ಯಶ್.
ರಶ್ಮಿಕಾ ಅವರ ಈ ಹೇಳಿಕೆಯ ನಂತರ ಯಶ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ನಟಿಯನ್ನು ತೀವ್ರವಾಗಿ ಟ್ರೋಲ್ ಮಾಡಿದ್ದರು. ಈ ಬಗ್ಗೆ ಮಾತನಾಡಿದ ಯಶ್, ‘ನೀವು ಇನ್ನೊಬ್ಬ ನಟ ಅಥವಾ ನಟಿಗೆ ಗೌರವ ನೀಡದಿದ್ದರೆ, ನೀವು ನನ್ನ ಅಭಿಮಾನಿಯಾಗಲು ಸಾಧ್ಯವೇ ಇಲ್ಲ’ ಎಂದು ತಮ್ಮ ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಮೊದಲು ಕೂಡ ಅನೇಕ ಬಾರಿ ಅವರು ಈ ಮಾತನ್ನು ಹೇಳಿದ್ದರು.
ಇದನ್ನೂ ಓದಿ: ‘ರಾಮಾಯಣ’ ಚಿತ್ರದ 4 ಸಾವಿರ ಕೋಟಿ ರೂ. ಬಜೆಟ್ ರಹಸ್ಯ ಬಿಚ್ಚಿಟ್ಟ ಯಶ್: ಇದು ಹಾಲಿವುಡ್ ಲೆಕ್ಕಾಚಾರ
2016ರಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದ ರಶ್ಮಿಕಾ, ಆನಂತರದ ಸಂದರ್ಶನವೊಂದರಲ್ಲಿ ಈ ಹೇಳಿಕೆ ನೀಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ, ರಶ್ಮಿಕಾ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು. ಇದೀಗ ಯಶ್ ನೀಡಿದ ಈ ಶಾಂತ ಮತ್ತು ಪ್ರಬುದ್ಧ ಪ್ರತಿಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:23 am, Sun, 16 August 26