ತೃತೀಯ ಲಿಂಗಿ ನಟಿಗೆ ಸಿನಿಮಾದಲ್ಲಿ ಅವಕಾಶ ನೀಡಿದ ‘ಮಿಸ್ಟರ್ ಆ್ಯಂಡ್ ಮಿಸಸ್ ಮನ್ಮಥ’ ಚಿತ್ರತಂಡ
ಗುಲ್ಬರ್ಗ ಮೂಲದ ತೃತೀಯ ಲಿಂಗಿ ವೈಶಾಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ನಟಿಯಾಗಬೇಕು ಎಂದು ಕನಸು ಕಂಡಿದ್ದ ಅವರು ‘ಮಿಸ್ಟರ್ ಆ್ಯಂಡ್ ಮಿಸಸ್ ಮನ್ಮಥ’ ಸಿನಿಮಾದಲ್ಲಿ ರಮ್ಯಾ ಎಂಬ ಪಾತ್ರ ಮಾಡಿದ್ದಾರೆ. ಕ್ಲಬ್ ಡ್ಯಾನ್ಸರ್ ಆಗಿದ್ದ ಅವರು ಈ ಸಿನಿಮಾಗಾಗಿ ಕೆಲಸ ಬಿಟ್ಟು ಬಂದಿದ್ದಾರೆ. ಈ ಚಿತ್ರದ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.
ಸಮಾಜದಲ್ಲಿ ತೃತೀಯ ಲಿಂಗಿಗಳನ್ನು (Transgender) ನೋಡುವ ರೀತಿಯೇ ಬೇರೆ ರೀತಿ ಇದೆ. ಎಲ್ಲರಂತೆ ಅವರು ಸಮಾಜದಲ್ಲಿ ಮುಖ್ಯವಾಹಿನಿಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಕನ್ನಡ ಚಿತ್ರರಂಗದಲ್ಲಿ ಓರ್ವ ತೃತೀಯ ಲಿಂಗಿಗೆ ಹೀರೋಯಿನ್ ಆಗಿ ನಟಿಸುವ ಅವಕಾಶ ನೀಡಲಾಗಿದೆ. ಹೌದು, ‘ಮಿಸ್ಟರ್ ಆ್ಯಂಡ್ ಮಿಸಸ್ ಮನ್ಮಥ’ (Mr and Mrs Manmatha) ಸಿನಿಮಾದಲ್ಲಿ ತೃತೀಯ ಲಿಂಗಿ ವೈಶಾಲಿ ಅವರು ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಅದರಲ್ಲಿ ವೈಶಾಲಿ (Vaishali) ಕೂಡ ಭಾಗವಹಿಸಿದ್ದರು. ಹಾಡು ಮತ್ತು ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ಅವರು ತಮ್ಮ ಅನುಭವ ಹಂಚಿಕೊಂಡರು. ಈ ಸಿನಿಮಾಗೆ ಎ. ಸುಬ್ರಮಣಿ ರಾಮಗೊಂಡನಹಳ್ಳಿ ಅವರು ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಕೂಡ ಅವರದ್ದೇ. ಜೊತೆಗೆ ಹೀರೋ ಆಗಿಯೂ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ನಟಿಯಾಗಬೇಕು ಎಂಬ ಆಸೆ ವೈಶಾಲಿ ಅವರಿಗೆ ಮೊದಲಿನಿಂದಲೂ ಇತ್ತು. ಅದಕ್ಕಾಗಿ ಅವರು ಹಲವು ಪ್ರಯತ್ನ ಮಾಡಿದ್ದರು. ಆದರೆ ಅವಕಾಶ ಸಿಕ್ಕಿರಲಿಲ್ಲ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ಒಮ್ಮೆ ನಾನು ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋಗೆ ಆಡಿಷನ್ ನೀಡಿದ್ದೆ. ಆದರೆ ಸೆಲೆಕ್ಟ್ ಆಗಲಿಲ್ಲ. ತೃತೀಯ ಲಿಂಗಿ ಎಂದರೆ ಭಿಕ್ಷೆ ಬೇಡಬೇಕು ಅಥವಾ ಸೆ*ಕ್ಸ್ ವರ್ಕರ್ ಆಗಿ ಕೆಲಸ ಮಾಡಬೇಕು ಎಂಬುದೇನೂ ಇಲ್ಲ. ನಾನು ಗೋವಾದ ಕ್ಲಬ್ನಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ. ನನಗೆ ರಂಗಭೂಮಿ ಬಗ್ಗೆ ಆಸೆ ಇತ್ತು’ ಎಂದಿದ್ದಾರೆ ವೈಶಾಲಿ.
ಇದನ್ನೂ ಓದಿ: ಕಾನೂನು ಪದವಿಗೆ ತೃತೀಯ ಲಿಂಗಿಗೆ ಪ್ರವೇಶ ನೀಡುವಂತೆ ಎನ್‌ಎಲ್‌ಎಸ್‌ಐಯುಗೆ ಹೈಕೋರ್ಟ್ ಸೂಚನೆ
‘ಎರಡು ಬಾರಿ ಆಡಿಷನ್ ನೀಡಿದಾಗ ನಾನು ಆಯ್ಕೆ ಆಗಲಿಲ್ಲ. ನಾವು ಬಸ್ನಲ್ಲಿ ಪ್ರಯಾಣ ಮಾಡುವಾಗ ಪಕ್ಕದಲ್ಲಿ ಸೀಟ್ ಇದ್ದರೂ ಕೂಡ ಫ್ಯಾಮಿಲಿಯವರು ಬಂದು ಕುಳಿತುಕೊಳ್ಳಲು ಹಿಂದೆಮುಂದೆ ನೋಡುತ್ತಾರೆ. ಹೀಗಿರುವಾಗ ನಮಗೆ ಯಾರು ಅವಕಾಶ ಕೊಡುತ್ತಾರೆ ಎಂದು ಸುಮ್ಮನಾಗಿದ್ದೆ. ಮತ್ತೆ ಕ್ಲಬ್ಗೆ ಹೋಗಿ ಸೇರಿಕೊಂಡೆ. ನಂತರ ಫೇಸ್ಬುಕ್ನಲ್ಲಿ ಈ ಚಿತ್ರತಂಡದ ಪರಿಚಯ ಆಯಿತು. ‘ಮಿಸ್ಟರ್ ಆ್ಯಂಡ್ ಮಿಸಸ್ ಮನ್ಮಥ’ ಚಿತ್ರದಲ್ಲಿ ನಟಿಸುವ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ಗೋವಾದಿಂದ ಬಂದು ಅರಸಿಕೆರೆಯಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದೆ’ ಎಂದು ವೈಶಾಲಿ ಹೇಳಿದ್ದಾರೆ.
ಇದನ್ನೂ ಓದಿ: 15,000 ಪದವೀಧರ, ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ, ತೃತೀಯ ಲಿಂಗಿಗಳು ಆಯ್ಕೆ
‘ಮಿಸ್ಟರ್ ಆ್ಯಂಡ್ ಮಿಸಸ್ ಮನ್ಮಥ’ ಸಿನಿಮಾದಲ್ಲಿ ರಮ್ಯಾ ಎಂಬ ಪಾತ್ರವನ್ನು ವೈಶಾಲಿ ನಿಭಾಯಿಸಿದ್ದಾರೆ. ಈ ಪಾತ್ರಕ್ಕೆ ಬೇರೆಯವರು ಡಬ್ಬಿಂಗ್ ಮಾಡಿದ್ದಾರೆ. ಅವಕಾಶ ಸಿಕ್ಕರೆ ಚಿತ್ರರಂಗದಲ್ಲಿ ಇದೇ ರೀತಿ ಮುಂದುವರಿಯಬೇಕು ಎಂದು ಅವರು ಗುರಿ ಇಟ್ಟುಕೊಂಡಿದ್ದಾರೆ. ಒಂದಷ್ಟು ಸೀರಿಯಲ್ ಮತ್ತು ಸಿನಿಮಾದಲ್ಲಿ ನಟಿಸಿದ ಅನುಭವ ಇರುವ ಎ. ಸುಬ್ರಮಣಿ ರಾಮಗೊಂಡನಹಳ್ಳಿ ಅವರು ಈ ಚಿತ್ರದಲ್ಲಿ ಮನ್ಮಥ ಎಂಬ ಪಾತ್ರ ಮಾಡಿದ್ದಾರೆ. ಅ.6ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಕೆವಿನ್ ಎಂ. ಅವರು ಸಂಗೀತ ನೀಡಿದ್ದಾರೆ. ಬಸವರಾಜ, ಚಂದನಾ, ರವಿ ಕುಂದಾಪುರ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.