‘ವಿವಾದಗಳೇ ಇಲ್ಲದ ಕಲಾವಿದ’: ಬ್ಯಾಂಕ್ ಜನಾರ್ದನ್ ಅಗಲಿಕೆಗೆ ಉಪೇಂದ್ರ ಸಂತಾಪ
ಉಪೇಂದ್ರ ಅವರು ವೃತ್ತಿಜೀವನದ ಆರಂಭದ ದಿನಗಳಲ್ಲಿ ನಿರ್ದೇಶಿಸಿದ್ದ ‘ತರ್ಲೆ ನನ್ಮಗ’, ‘ಶ್’ ಸಿನಿಮಾಗಳಲ್ಲಿ ಬ್ಯಾಂಕ್ ಜನಾರ್ದನ್ ಅವರು ನಟಿಸಿದ್ದರು. ಇಂದು (ಏಪ್ರಿಲ್ 14) ಬ್ಯಾಂಕ್ ಜನಾರ್ದನ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಉಪೇಂದ್ರ ಅವರು ಆ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಈ ವೇಳೆ ಸಾಧು ಕೋಕಿಲ ಕೂಡ ಮಾತನಾಡಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ಬ್ಯಾಂಕ್ ಜನಾರ್ದನ್ (Bank Janardhan) ಅವರು ನಿಧನರಾಗಿದ್ದಾರೆ. ಅವರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಚಿತ್ರರಂಗದ ಅನೇಕರು ಕಂಬನಿ ಮಿಡಿದ್ದಾರೆ. ನಟರಾದ ಉಪೇಂದ್ರ (Upendra), ಸಾಧು ಕೋಕಿಲ, ಧ್ರುವ ಸರ್ಜಾ ಮುಂತಾದವರು ಬಂದು ಅಂತಿಮ ದರ್ಶನ ಪಡೆದಿದ್ದಾರೆ. ಬ್ಯಾಂಕ್ ಜನಾರ್ದನ್ ಅವರಿಗೆ 76 ವರ್ಷ ವಯಸ್ಸಾಗಿತ್ತು. ಅವರ ಜೊತೆಗಿನ ಒಡನಾಟವನ್ನು ಉಪೇಂದ್ರ ಮತ್ತು ಸಾಧುಕೋಕಿಲ (Sadhu Kokila) ಅವರು ನೆನಪಿಸಿಕೊಂಡಿದ್ದಾರೆ. ‘ಶ್’, ‘ತರ್ಲೆ ನನ್ಮಗ’ ಮುಂತಾದ ಸಿನಿಮಾಗಳಲ್ಲಿ ಉಪೇಂದ್ರ ಜೊತೆ ಬ್ಯಾಂಕ್ ಜನಾರ್ದನ್ ಅವರು ಕೆಲಸ ಮಾಡಿದ್ದರು. ಆ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ.
‘ಹಳೇ ನೆನಪುಗಳನ್ನು ಇಂದು ಮರೆಯೋಕೆ ಆಗಲ್ಲ. ಕಾಶಿನಾಥ್ ಅವರ ಮೂಲಕ ನನಗೆ ಬ್ಯಾಂಕ್ ಜನಾರ್ದನ್ ಪರಿಚಯ ಆಯಿತು. ಕಾಶಿನಾಥ್ ಅವರ ಸಿನಿಮಾಗಳಲ್ಲಿ ನಟಿಸಿದ ಬ್ಯಾಂಕ್ ಜನಾರ್ದನ್ ಅವರು ನಂತರ ಶ್, ತರ್ಲೆ ನನ್ಮಗ ಮುಂತಾದ ಸಿನಿಮಾಗಳಲ್ಲಿ ನಟಿಸಿದರು. ಆಗ ನಾವೆಲ್ಲ ಹೊಸ ನಿರ್ದೇಶಕರು. ನಮ್ಮ ಜೊತೆ ಇದ್ದುಕೊಂಡು ಡೇಟ್ಸ್ ತೊಂದರೆ ಆಗದ ರೀತಿಯಲ್ಲಿ ತುಂಬ ಸಂಪೋರ್ಟ್ ಮಾಡಿದ್ದರು. ಅವರು ಪರಿಪೂರ್ಣ ವ್ಯಕ್ತಿ ಆಗಿದ್ದರು’ ಎಂದು ಉಪೇಂದ್ರ ಹೇಳಿದ್ದಾರೆ.
‘ಜನಾರ್ದನ್ ಅವರು ಯಾವುದೇ ವಿವಾದ ಮಾಡಿಕೊಂಡಿರಲಿಲ್ಲ. ಬಹಳ ಅಪರೂಪದ ವ್ಯಕ್ತಿ ಅವರು. ಶೂಟಿಂಗ್ನಲ್ಲಿ ಅವರು ಇದ್ದರೆ ಇಡೀ ವಾತಾವರಣ ಅದ್ಭುತವಾಗಿ ಇರುತ್ತಿತ್ತು. ಅವರು ಮತ್ತೆ ಹುಟ್ಟಿಬರುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಮನೆಯವರಿಗೆ ಈ ನೋವನ್ನು ತಡೆದುಕೊಳ್ಳುವಂತಹ ಶಕ್ತಿ ಕೊಡಲಿ’ ಎಂದಿದ್ದಾರೆ ಉಪೇಂದ್ರ.
ಸೋಶಿಯಲ್ ಮೀಡಿಯಾ ಮೂಲಕ ಕೂಡ ಉಪೇಂದ್ರ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ‘ತರ್ಲೆ ನನ್ ಮಗ’, ‘ಶ್’ ಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯದಿಂದ ನನ್ನ ಸಿನಿ ಪಯಣದಲ್ಲಿ ಯಶಸ್ವೀ ಹೆಜ್ಜೆ ಇಡಲು ಕಾರಣಕರ್ತರಾದ ಸರಳ, ಸ್ನೇಹ ಜೀವಿ, ಅಪರೂಪದ ಕಲಾವಿದ ಬ್ಯಾಂಕ್ ಜನಾರ್ಧನ್ ಬೇರೆ ಪಾತ್ರಕ್ಕೆ ಸಜ್ಜಾಗಿ ಬರಲು ವಿಧಿವಶರಾಗಿದ್ದಾರೆ. ಬೇಗ ಬನ್ನಿ ಸಾರ್’ ಎಂದು ಉಪೇಂದ್ರ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Bank Janardhan Death: ಬ್ಯಾಂಕ್ ಜನಾರ್ಧನ್ ವೃತ್ತಿ ಜೀವನ ಬದಲಿಸಿದ್ದು ಆ ಇಬ್ಬರು ವ್ಯಕ್ತಿಗಳು
ಸಾಧು ಕೋಕಿಲ ಕೂಡ ತಮ್ಮ ನೆನಪು ಹಂಚಿಕೊಂಡರು. ‘ನಮಗೆ ಚಿತ್ರರಂಗದಲ್ಲಿ ಸಾಕಷ್ಟು ಕಲಾವಿದರು ಪರಿಚಿತರು. ಆದರೆ ಜನಾರ್ದನ್ ರೀತಿಯ ಕಲಾವಿದರು ಮತ್ತೆ ನಮ್ಮ ಚಿತ್ರರಂಗದಲ್ಲಿ ಹುಟ್ಟುವುದಿಲ್ಲ. ಯಾಕೆಂದರೆ, ಅವರು ತುಂಬಾ ಶಿಸ್ತಿನ ಕಲಾವಿದ. ತಾವಾಯ್ತು, ತಮ್ಮ ಕೆಲಸ ಆಯ್ತು ಅಂತ ಇದ್ದರು. ಏನೂ ಕಷ್ಟ ಹೇಳಿಕೊಳ್ಳುತ್ತಾ ಇರಲಿಲ್ಲ. ಜಾಲಿಯಾಗಿ ಇರುತ್ತಿದ್ದರು. ಇನ್ನೊಬ್ಬರ ಬಗ್ಗೆ ಮಾತನಾಡುತ್ತಿರಲಿಲ್ಲ. ಎಲ್ಲರನ್ನೂ ಪ್ರೀತಿಸುತ್ತಿದ್ದರು. ಅಂಥವರನ್ನು ಇಂದು ಕಳೆದುಕೊಂಡಿದ್ದೇವೆ. ಅವರ ಜೊತೆ ಅಂದಾಜು 100 ಸಿನಿಮಾದಲ್ಲಿ ನಾನು ನಟಿಸಿದ್ದೇನೆ’ ಎಂದಿದ್ದಾರೆ ಸಾಧು ಕೋಕಿಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.