ಬ್ಯಾಂಕ್ ಜನಾರ್ದನ್ ಅಂತಿಮ ದರ್ಶನ: ವಿಪರೀತ ಕೋಪಗೊಂಡ ಪ್ರಥಮ್; ಕಾರಣ ಏನು?
ನಟ ಪ್ರಥಮ್ ಅವರು ನೇರ ನಡೆ-ನುಡಿಯ ವ್ಯಕ್ತಿ. ಅನೇಕ ಸಂದರ್ಭಗಳಲ್ಲಿ ಅವರು ನೇರವಾಗಿ ಮಾತನಾಡಿ ಗರಂ ಆದ ಉದಾಹರಣೆ ಇದೆ. ಇಂದು (ಏಪ್ರಿಲ್ 14) ನಿಧನರಾದ ಬ್ಯಾಂಕ್ ಜನಾರ್ದನ್ ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದ ಪ್ರಥಮ್ ಅವರು ಸಖತ್ ಕೋಪಗೊಂಡರು. ಅವರ ಕೋಪಕ್ಕೆ ಕಾರಣ ಆಗಿದ್ದು ಸರ್ಕಾರಿ ಅಧಿಕಾರಿಗಳ ವರ್ತನೆ.

ಚಂದನವನದ ಹಿರಿಯ ನಟ, 800ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದ ಕಲಾವಿದ ಬ್ಯಾಂಕ್ ಜನಾರ್ದನ್ (Bank Janardhan) ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ಅಂತಿಮ ದರ್ಶನಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕನ್ನಡ ಚಿತ್ರರಂಗದ (Sandalwood) ಅನೇಕ ಸೆಲೆಬ್ರಿಟಿಗಳು ಬಂದು ಬ್ಯಾಂಕ್ ಜನಾರ್ದನ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ನಟ ಪ್ರಥಮ್ (Pratham) ಕೂಡ ಬಂದು ಶ್ರದ್ಧಾಂಜಲಿ ಸಲ್ಲಿಸಿದರು. ಆದರೆ ಈ ವೇಳೆ ಅವರು ತುಂಬ ಗರಂ ಆಗಿ ಮಾತನಾಡಿದರು. ಬ್ಯಾಂಕ್ ಜನಾರ್ದನ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲು ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸಹಕರಿಸಲಿಲ್ಲ ಎಂದು ಪ್ರಥಮ್ ಸಿಟ್ಟಾಗಿದ್ದಾರೆ.
‘ಯಾವ ಸರ್ಕಾರ ಇದ್ದರೂ ಸರಿ. ಯಾವುದೇ ಹಿರಿಯ ಕಲಾವಿದರು ತೀರಿಕೊಂಡಾಗ, ಫಾರ್ಮಾಲಿಟಿಗಳನ್ನು ಪಕ್ಕಕ್ಕೆ ಇಡಿ. ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ತರಲು ಯಾವುದೇ ಸಮಸ್ಯೆ ಆಗಬಾರದು. ಉಳಿದ ಪೇಪರ್ ವರ್ಕ್ಗಳನ್ನು ಆಮೇಲೆ ಮಾಡಿ. ಸತ್ತು ಹೋದವರು ಬಂದು ಪೇಪರ್ ವರ್ಕ್ ಮಾಡೋಕೆ ಆಗತ್ತಾ? ಇದೆಲ್ಲ ಸರ್ಕಾರಕ್ಕೆ ಇರಬೇಕಾದ ಬೇಸಿಕ್ ಕಾಮನ್ ಸೆನ್ಸ್’ ಎಂದು ಪ್ರಥಮ್ ಹೇಳಿದ್ದಾರೆ.
‘ಇದನ್ನೆಲ್ಲ ಸರ್ಕಾರ ಮತ್ತು ಅಧಿಕಾರಿಗಳು ಗಮನಕ್ಕೆ ತೆಗೆದುಕೊಂಡು ಮಾಡಬೇಕು. ಪಾರ್ಥಿವ ಶರೀರ ತರಲು ತಡವಾದರೆ, ಅರ್ಧ ಗಂಟೆ ಅಂತಿಮ ದರ್ಶನ ಮಾಡಿಸಲು ಇಲ್ಲಿಗೆ ಯಾಕೆ ತರಬೇಕು? ನೀವೇನು ಜಡ್ ಪ್ಲಸ್ ಭದ್ರತೆ ಕೊಡುತ್ತೀರಾ? ಜೀರೋ ಟ್ರಾಫಿಕ್ ಮಾಡುತ್ತೀರಾ? ಬರಲು ಒಂದೂವರೆ ಗಂಟೆ, ಹೋಗಲು ಒಂದೂವರೆ ಗಂಟೆ. ಹಾಗಿದ್ದರೆ ಯಾಕೆ ಬರಬೇಕು? ಹಿರಿಯ ಕಲಾವಿದರು ನಿಧನರಾದಾಗ ಅಂತಿಮ ದರ್ಶನಕ್ಕೆ ಮೊದಲು ಅವಕಾಶ ಮಾಡಿಕೊಡಿ’ ಎಂದಿದ್ದಾರೆ ಪ್ರಥಮ್.
ಇದನ್ನೂ ಓದಿ: 25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್ಗೆ ಹಾರ್ಟ್ ಸಮಸ್ಯೆ ಆಗಿತ್ತು: ಸಾಧು ಕೋಕಿಲ
‘ಅಧಿಕಾರಿಗಳೇ.. ನೀವು ಕೂಡ ಸಾಯ್ತೀರಿ. ನೀವೇನು ಕೂಟ ಹೊಡೆದುಕೊಂಡು ಇಲ್ಲೇ ಇರ್ತೀರಾ? 900 ಸಿನಿಮಾ ಮಾಡಿರುವವರ ಮೃತದೇಹ ತರಲು ಇಷ್ಟ ಕಷ್ಟಪಡಬೇಕು ಎಂದರೆ ನಿಮಗೆ ನಾಚಿಕೆ ಆಗಬೇಕು. ಆ ಸ್ಥಾನದಲ್ಲಿ ಇರಲು ನೀವೆಲ್ಲ ಅಯೋಗ್ಯರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಶಿವರಾಜ್ ತಂಗಡಗಿ ಅವರು ಇರುವುದರಿಂದ ಸ್ವಲ್ಪ ಪರವಾಗಿಲ್ಲ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಪ್ರಥಮ್ ಅವರು ಗುಡುಗಿದ್ದಾರೆ. ಅವರ ಜೊತೆ ಹಿರಿಯ ನಟ ಗಣೇಶ್ ರಾವ್ ಕೇಸರ್ಕರ್ ಸಹ ಅಧಿಕಾರಗಳ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:21 pm, Mon, 14 April 25