ದರ್ಶನ್, ಉಪೇಂದ್ರ, ಸುದೀಪ್ಗೆ ನನ್ನ ನೆನಪಿಲ್ಲ; ಬೇಸರ ಹೊರಹಾಕಿದ್ದ ಬ್ಯಾಂಕ್ ಜನಾರ್ಧನ್
ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರು ನಿಧನರಾಗುವ ಮುನ್ನ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರ ಅವಗಣನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ದರ್ಶನ್, ಉಪೇಂದ್ರ, ಸುದೀಪ್ ಮುಂತಾದ ನಟರು ತಮ್ಮನ್ನು ಮರೆತುಬಿಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದರು. ಹೊಸ ಪೀಳಿಗೆಯ ನಿರ್ದೇಶಕರು ಹಿರಿಯರಿಗೆ ಅವಕಾಶ ನೀಡದಿರುವುದರಿಂದ ದುಡಿಯುವುದು ಕಷ್ಟವಾಗಿದೆ ಎಂದು ಅವರು ಹೇಳಿದ್ದರು.

ಹಲವು ಹಿರಿಯ ಕಲಾವಿದರು ಮೂಲೆ ಗುಂಪಾಗಿದ್ದಾರೆ. ಹೊಸ ಜನರೇಶನ್ ನಿರ್ದೇಶಕರು ಹಾಗೂ ನಿರ್ಮಾಪಕರು ಚಿತ್ರರಂಗಕ್ಕೆ ಬರುತ್ತಿದ್ದು, ಹಿಂದಿನ ಕಾಲದವರಿಗೆ ಅವಕಾಶವೇ ಇಲ್ಲದಂತೆ ಆಗಿದೆ. ಹಿರಿಯ ನಟ ಬ್ಯಾಂಕ್ ಜನಾರ್ಧನ್ (Bank Janardhan) ಅವರಿಗೂ ಇದೇ ಪರಿಸ್ಥಿತಿ ನಿರ್ಮಾಣ ಆಗಿತ್ತು. ಇಂದು (ಏಪ್ರಿಲ್ 14) ಬ್ಯಾಂಕ್ ಜನಾರ್ಧನ್ ನಿಧನ ಹೊಂದಿದ್ದು, ಸಾಯುವುದಕ್ಕೂ ಮೊದಲು ಕೆಲ ನಟರ ಬಗ್ಗೆ ಅವರು ಬೇಸರ ಹೊರಹಾಕಿದ್ದರು. ‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದರು
‘ಗಣೇಶ್ ಉದಯ ಟಿವಿಯಲ್ಲಿ ಕಾರ್ಯಕ್ರಮ ಮಾಡಿ ಫೇಮಸ್ ಆದವನು. ಅವನು ಬರೋದಕ್ಕೂ ಮೊದಲು ಆ ಕಾರ್ಯಕ್ರಮ ನಾನು ಮಾಡ್ತಾ ಇದ್ದೆ. ಚಾನೆಲ್ನವರು ಹೊಸ ಹುಡುಗ ಗಣೇಶ್ ಇದನ್ನು ಮಾಡ್ತಾನೆ ನಿಮಗೇನು ತೊಂದರೆ ಇಲ್ಲವ ಎಂದು ಕೇಳಿದ್ದರು. ನಾನು ಇಲ್ಲ ಎಂದು ಹೇಳಿದ್ದೆ. ಹಾಗಾಗಿ, ಆ ಕಾರ್ಯಕ್ರಮ ಗಣೇಶ್ಗೆ ಸಿಕ್ತು. ಉಪೇಂದ್ರ ಜೊತೆ ನಾನು ಅವಾಗ ಸಮಯ ಕಳೆಯುತ್ತಿದ್ದೆ. ದರ್ಶನ್, ಸುದೀಪ್ ಜೊತೆಯೂ ನಾನು ಕೆಲಸ ಮಾಡಿದ್ದೇನೆ. ಅವರು ಯಾರಿಗೂ ನನ್ನ ನೆನಪಿಲ್ಲ’ ಎಂದಿದ್ದರು ಜನಾರ್ಧನ್.
‘ಸ್ವಂತ ಬ್ಯಾನರ್ ಸಿನಿಮಾ ಮಾಡಿದಾಗ ಮಾತ್ರ ಉಪೇಂದ್ರ ನನ್ನನ್ನು ಕರೆಯುತ್ತಾರೆ. ಉಳಿದ ಸಯಮದಲ್ಲಿ ಅವರಿಗೆ ನನ್ನ ನೆನಪು ಇರುವುದಿಲ್ಲ. ಅವರು ಅಂತ ಮಾತ್ರವಲ್ಲ ಗಣೇಶ್, ಸುದೀಪ್, ದರ್ಶನ್ ಹೀಗೆ ಯಾರೂ ನಮ್ಮನ್ನು ನೆನಪಿಸಿಕೊಳ್ಳಲ್ಲ. ಜನಾರ್ಧನ್ ಜೊತೆ ನಟಿಸಿದ್ದೇವೆ, ಅವರಿಗೆ ಒಂದು ಪಾತ್ರ ಕೊಡೋಣ ಎಂದು ಯಾವಾಗಲೂ ಅವರಿಗೆ ಅನಿಸಿಲ್ಲ. ಡಿಂಗ್ರಿ ನಾಗರಾಜ್, ಬಿರಾದಾರ್, ನಾನು ಎಲ್ಲರೂ ಹಿಂದೆ ಸರಿದು ಹೋಗುತ್ತಿದ್ದೇವೆ’ ಎಂದಿದ್ದರು ಅವರು.
‘ಈಗ ಬರುತ್ತಿದ್ದವರೆಲ್ಲರೂ ಯುವ ನಿರ್ದೇಶಕರು. ಇತ್ತೀಚೆಗೆ ಯುವ ನಿರ್ದೇಶಕರು ನನಗೆ ಕರೆ ಮಾಡಿ ಫೋಟೋ ಕೇಳಿದರು. ಏನು ಹೇಳಬೇಕು ಎಂಬುದೇ ಗೊತ್ತಾಗಿಲ್ಲ. ನಟನೆ ಮಾಡುತ್ತಿರುವ ವಿಡಿಯೋ ಕಳುಹಿಸಿ ಎಂದರು. ನಾನು ಉದಯ ಟಿವಿ ಹಾಕಿ, ಅದರಲ್ಲಿ ಯಾವುದೇ ಸಿನಿಮಾ ನೋಡಿದರೂ ನಾನು ಇರುತ್ತೇನೆ ಎಂದೆ. ಆದಾಗ್ಯೂ ಅವರು ಕೇಳಲಿಲ್ಲ. ವಿಡಿಯೋ ಕಳಿಸಿ ಎಂದರು. ವಿಡಿಯೋ ಕಳುಹಿಸಿ ಚಾನ್ಸ್ ತೆಗೆದುಕೊಳ್ಳುವ ಸ್ಥಿತಿ ನನಗೆ ಇಲ್ಲ ಎಂದು ಅವರಿಗೆ ಹೇಳಿದ್ದೆ’ ಎಂದು ವಿವರಿಸಿದ್ದರು ಜನಾರ್ಧನ್.
ಇದನ್ನೂ ಓದಿ: ಬ್ಯಾಂಕ್ ಜನಾರ್ಧನ್ 860 ಸಿನಿಮಾ ಮಾಡಿದರೂ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ; ತಪ್ಪಿನ ಬಗ್ಗೆ ಮರುಗಿದ್ದ ನಟ
‘ಇವತ್ತಿಗೂ ದುಡಿಮೆ ಬೇಕು. ಕೊರೊನಾ ಬಂದು ಮುಂದೇನು ಎನ್ನುವ ಪರಿಸ್ಥಿತಿ ಬಂದಿದೆ. ನಾವು ಸಿನಿಮಾ ಮಾಡುವಾಗ ನಿರ್ದೇಶಕರು ಈಗ ಇಲ್ಲ. ಅವರಿಗೆ ಕೆಲಸವೇ ಇಲ್ಲದಂತೆ ಆಗಿದೆ. ಅವರಿಗೆ ಕೆಲಸ ಇದ್ದಿದ್ದರೆ ನಮ್ಮನ್ನು ಕರೆಯುತ್ತಿದ್ದರು. ರಾಜ್ಕುಮಾರ್ ಜೊತೆ ಆರು ಸಿನಿಮಾ ಮಾಡಿದೆ. ನನಗೆ ಅತೀವ ಖುಷಿ ಇತ್ತು. ಧನ್ಯತಾ ಭಾವನೆ ಕಾಡಿತು’ ಎಂದಿದ್ದರು ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:56 am, Mon, 14 April 25