AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಇಂಗ್ಲಿಷ್ ವರ್ಷನ್‌ಗೆ ಶಾಕ್; ಮೊದಲ ದಿನ ಮಾರಾಟವಾಗಿದ್ದು ಕೇವಲ 450 ಟಿಕೆಟ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಇಂಗ್ಲಿಷ್ ಆವೃತ್ತಿಯು ಭಾರತದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಕೇವಲ ನಾಲ್ಕು ನಗರಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವು ಮೊದಲ ದಿನವೇ ಕೇವಲ 450 ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ ಒಟ್ಟು 1.40 ಲಕ್ಷ ರೂಪಾಯಿ ಕಲೆಕ್ಷನ್ ಮಾಡಲಷ್ಟೇ ಶಕ್ತವಾಗಿದೆ.

‘ಟಾಕ್ಸಿಕ್’ ಇಂಗ್ಲಿಷ್ ವರ್ಷನ್‌ಗೆ ಶಾಕ್; ಮೊದಲ ದಿನ ಮಾರಾಟವಾಗಿದ್ದು ಕೇವಲ 450 ಟಿಕೆಟ್
ಟಾಕ್ಸಿಕ್ ಸಿನಿಮಾ Image Credit source: Toxic
ರಾಜೇಶ್ ದುಗ್ಗುಮನೆ
|

Updated on: Sep 05, 2026 | 7:38 AM

Share

ಮುಖ್ಯಾಂಶಗಳು

  • ಟಾಕ್ಸಿಕ್ ಇಂಗ್ಲಿಷ್ ವರ್ಷನ್‌ಗೆ ಶಾಕ್
  • ಮೊದಲ ದಿನ ಮಾರಾಟವಾಗಿದ್ದು ಕೇವಲ 450 ಟಿಕೆಟ್
  • ನಾಲ್ಕೇ ನಗರಗಳಲ್ಲಿ ಪ್ರದರ್ಶನ 

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‘ ಸಿನಿಮಾ ಆಗಸ್ಟ್ 26ರಂದು ರಿಲೀಸ್​ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಈಗ ಸಪ್ಟೆಂಬರ್ 4ರಂದು ಇಂಗ್ಲಿಷ್ ಆವೃತ್ತಿಯ ದೇಶಾದ್ಯಂತ ತೆರೆಗೆ ಬಂದಿದೆ. ಇದಕ್ಕೆ ಅತ್ಯಂತ ನಿರಾಸಾದಾಯಕ ಆರಂಭ ಸಿಕ್ಕಿದೆ. ಗಲ್ಲಾಪೆಟ್ಟಿಗೆಯಲ್ಲಿ ಒಂದು ಲಕ್ಷ ರೂಪಾಯಿ ಗಡಿ ದಾಟಲು ಇಂಗ್ಲಿಷ್ ವರ್ಷನ್ ಒದ್ದಾಡಿದೆ. ಈಗಾಗಲೇ ಎಲ್ಲರೂ ಸ್ಥಳೀಯ ಭಾಷೆಯಲ್ಲಿ ಸಿನಿಮಾ ವೀಕ್ಷಿಸಿರುವುದರಿಂದ ಇಂಗ್ಲಿಷ್ ವರ್ಷನ್ ನೋಡಲು ಅಷ್ಟಾಗಿ ಆಸಕ್ತಿ ತೋರಿಸಿಲ್ಲ.

ಆಗಸ್ಟ್ 26ರಂದು ತೆರೆಕಂಡಿದ್ದ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಆವೃತ್ತಿಗಳು ನಿರೀಕ್ಷಿತ ಮಟ್ಟದ ಮೆಚ್ಚುಗೆ ಗಳಿಸುವಲ್ಲಿ ವಿಫಲವಾಗಿದ್ದವು. ಇದರ ಬೆನ್ನಲ್ಲೇ ಸೆಪ್ಟೆಂಬರ್ 4ರಂದು ಚಿತ್ರದ ಇಂಗ್ಲಿಷ್ ಆವೃತ್ತಿಯನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಯಿತು. ಆದರೆ ‘ಹನುಮಾನ್ ಅಂಶ್’ ಹಾಗೂ ‘ಮಿರ್ಜಾಪುರ್’ ಸಿನಿಮಾಗಳ ತೀವ್ರ ಪೈಪೋಟಿಯಿಂದಾಗಿ ಈ ಇಂಗ್ಲಿಷ್ ಆವೃತ್ತಿಗೆ ಭಾರತದಾದ್ಯಂತ ಕೇವಲ 11 ಶೋಗಳು ಮಾತ್ರ ಸಿಕ್ಕಿದ್ದವು.

ಚಿತ್ರತಂಡವು ಮುಂಬೈ, ಬೆಂಗಳೂರು, ಗುರುಗ್ರಾಮ್ ಮತ್ತು ನೋಯ್ಡಾ ಹೀಗೆ ಕೇವಲ ನಾಲ್ಕು ಪ್ರಮುಖ ನಗರಗಳಲ್ಲಿ ಮಾತ್ರ ಇಂಗ್ಲಿಷ್ ಆವೃತ್ತಿಯನ್ನು ತೆರೆಗೆ ತಂದಿತ್ತು. ಬಾಲಿವುಡ್ ಹಂಗಾಮಾ ನೀಡಿದ ಅಂಕಿಅಂಶಗಳ ಪ್ರಕಾರ, ಮೊದಲ ದಿನ ದೇಶಾದ್ಯಂತ ಮಾರಾಟವಾಗಿದ್ದು ಕೇವಲ 450 ಟಿಕೆಟ್‌ಗಳು ಮಾತ್ರ. ಪರಿಣಾಮವಾಗಿ ಮೊದಲ ದಿನದ ಒಟ್ಟು ಗಳಿಕೆ ಕೇವಲ 1.40 ಲಕ್ಷ ರೂಪಾಯಿಗಳಿಗೆ ಸೀಮಿತವಾಗಿದೆ.

ಮುಂಬೈ ಮತ್ತು ಬೆಂಗಳೂರಿನಲ್ಲಿ ಮಾತ್ರ ಶೋಗಳಿಗೆ ಕೊಂಚ ಮಟ್ಟದ ಪ್ರೇಕ್ಷಕರು ಬಂದಿದ್ದರೆ, ಗುರುಗ್ರಾಮ್ ಮತ್ತು ನೋಯ್ಡಾದಲ್ಲಿ ಪ್ರದರ್ಶನಗೊಂಡ ಶೋಗಳಲ್ಲಿ 25ಕ್ಕಿಂತ ಕಡಿಮೆ ಟಿಕೆಟ್‌ಗಳು ಮಾರಾಟವಾಗಿವೆ. ಪ್ರೇಕ್ಷಕರ ನಿರಾಸಕ್ತಿ ಹೀಗೆಯೇ ಮುಂದುವರಿದರೆ ಶನಿವಾರ ಮತ್ತು ಭಾನುವಾರದ ಶೋಗಳ ಸಂಖ್ಯೆ ಮತ್ತಷ್ಟು ಕಡಿತಗೊಳ್ಳುವ ಸಾಧ್ಯತೆಯಿದ್ದು, ಇಂಗ್ಲಿಷ್ ಆವೃತ್ತಿಯ ಜೀವಮಾನದ ಕಲೆಕ್ಷನ್ 10 ಲಕ್ಷ ರೂಪಾಯಿ ಗಡಿ ದಾಟುವುದು ಕೂಡ ಅನುಮಾನವಾಗಿದೆ.

ಇದನ್ನೂ ಓದಿ: ಯಶ್ ‘ಟಾಕ್ಸಿಕ್’ ಚಿತ್ರದ ಗಳಿಕೆ ಎಷ್ಟು ಕೋಟಿ ರೂಪಾಯಿ? 400 ಕೋಟಿ ಕಲೆಕ್ಷನ್ ಅನುಮಾನ?

ಇನ್ನುಳಿದಂತೆ 10ನೇ ದಿನವಾದ ಸೆಪ್ಟೆಂಬರ್ 4ರಂದು ಎಲ್ಲಾ ಭಾಷೆಗಳು ಸೇರಿ ಭಾರತದಲ್ಲಿ 2,253 ಶೋಗಳಿಂದ 1.75 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ದಾಖಲಾಗಿದೆ. ಇದರಲ್ಲಿ ಹಿಂದಿ ಹಾಗೂ ಕನ್ನಡ ಆವೃತ್ತಿಗಳು ತಲಾ 85 ಲಕ್ಷ ರೂಪಾಯಿ ಗಳಿಸಿದರೆ, ತೆಲುಗು 4 ಲಕ್ಷ ಹಾಗೂ ತಮಿಳು ಆವೃತ್ತಿ 1 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿವೆ. ಪ್ರಸ್ತುತ ಭಾರತದಲ್ಲಿ ಒಟ್ಟು ನೆಟ್ ಕಲೆಕ್ಷನ್ 241.05 ಕೋಟಿ ರೂಪಾಯಿ ತಲುಪಿದ್ದು, ವಿದೇಶಿ ಗಳಿಕೆ 43.25 ಕೋಟಿ ಸೇರಿ ಜಾಗತಿಕವಾಗಿ ಚಿತ್ರವು 331 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More