AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲೇಷಿಯಾನಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ ಯಶ್

Yash: ಮಲೇಷಿಯಾಕ್ಕೆ ಭೇಟಿ ನೀಡಿದ್ದ ನಟ ಯಶ್ ಅಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಮಲೇಷಿಯಾನಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ ಯಶ್
ಯಶ್
ಮಂಜುನಾಥ ಸಿ.
|

Updated on: Jul 09, 2023 | 6:09 PM

Share

ನಟ ಯಶ್ (Yash) ಮಲೇಷಿಯಾಕ್ಕೆ (Malaysia) ಭೇಟಿ ನೀಡಿದ ಚಿತ್ರಗಳು, ವಿಡಿಯೋಗಳು ನಿನ್ನೆ (ಜುಲೈ 09) ಸಖತ್ ವೈರಲ್ ಆಗಿದ್ದವು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಯಶ್ ಅವರು ಕೆಲವು ಗೆಳೆಯರೊಟ್ಟಿಗೆ ಮಲೇಷಿಯಾಕ್ಕೆ ತೆರಳಿದ್ದರು. ಮಲೇಷಿಯಾನಲ್ಲಿ ಎಂಎಸ್ ಗೋಲ್ಡ್ ಹೆಸರಿನ ಚಿನ್ನದ ಶೋರೂಂ ಅನ್ನು ಯಶ್ ಉದ್ಘಾಟನೆ ಮಾಡಿದ್ದು, ಉದ್ಘಾಟನೆ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿರೂಪಕಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಈ ಸಂದರ್ಭದಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆಯೂ ನಟ ಯಶ್ ಮಾತನಾಡಿದ್ದಾರೆ, ”ನಾನೇನೋ ಭಾರಿ ದೊಡ್ಡ, ಬೃಹತ್ ಸಿನಿಮಾ ಮಾಡುತ್ತಿದ್ದೇನೆ ಎಂದು ನಾನು ಹೇಳುವುದಿಲ್ಲ ಆದರೆ ಒಂದು ಒಳ್ಳೆಯ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದೇನೆ. ಇದಕ್ಕಾಗಿ ಬಹಳ ಶ್ರಮ ಹಾಕುತ್ತಿದ್ದೇನೆ. ಇನ್ನು ಕೆಲವು ದಿನಗಳಲ್ಲಿಯೇ ಸಿನಿಮಾದ ಘೋಷಣೆ ಮಾಡಲಿದ್ದೇನೆ. ಖಂಡಿತ ಒಂದು ಮಾಸ್ ಸಿನಿಮಾವನ್ನು ನೀಡುತ್ತೇನೆ” ಎಂದು ಯಶ್ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಯಶ್ ಮಾತನಾಡಿದ ಸಂಪೊರ್ಣ ವಿಡಿಯೋ ಬಿಡುಗಡೆ ಆಗಿಲ್ಲ, ಕೆಲವು ವಿಡಿಯೋ ತುಣುಕಗಳಷ್ಟೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮಲೇಷಿಯಾನಲ್ಲಿ ಭಾರಿ ಅದ್ಧೂರಿ ಸ್ವಾಗತ ಯಶ್​ಗೆ ದೊರೆತಿದೆ. ಪ್ರೈವೇಟ್ ಚಾರ್ಟೆಡ್ ಫ್ಲೈಟ್​ನಲ್ಲಿ ಯಶ್, ಮಲೇಷಿಯಾಕ್ಕೆ ಪ್ರಯಾಣಿಸಿದ್ದು, ಅಲ್ಲಿಯೂ ಸಹ ಐಶಾರಾಮಿ ಕಾರುಗಳ ಬೆಂಗಾವಲಿನಲ್ಲಿ ಯಶ್ ರಾಯಲ್ ಆಗಿ ಪ್ರಯಾಣ ಮಾಡಿದ್ದಾರೆ.

ಇದನ್ನೂ ಓದಿ:ಮಲೇಷಿಯಾದಲ್ಲಿ ಯಶ್ ಹವಾ: ಈ ವಿದೇಶಿ ಭೇಟಿಯ ಉದ್ದೇಶ ಚಿನ್ನ

ಮಲೇಷಿಯಾಕ್ಕೆ ಭೇಟಿ ನೀಡಿದ ಯಶ್ ಅನ್ನು ಕಾಣಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಮಲೇಷಿಯಾದ ಸ್ಥಳೀಯರು ಸೇರಿದಂತೆ ಅಲ್ಲಿ ನೆಲೆಸಿರುವ ಕನ್ನಡಿಗರು ಹಾಗೂ ಇತರೆ ರಾಜ್ಯದ ಅಭಿಮಾನಿಗಳು ಸಹ ಯಶ್​ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾಗಳ ಹೊರತುಪಡಿಸಿ ಇನ್ಯಾವುದೇ ಸಿನಿಮಾದಲ್ಲಿ ಯಶ್ ನಟಿಸಿಲ್ಲ. 2018ರಿಂದ ಯಶ್ ನಟಿಸಿರುವುದು ಕೇವಲ ಎರಡು ಸಿನಿಮಾಗಳಲ್ಲಿ ಮಾತ್ರ. ಕೆಜಿಎಫ್ ಸಿನಿಮಾ ಬಿಡುಗಡೆ ಬಳಿಕ ಕಿರಾತಕ 2 ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದರು ಆದರೆ ಆ ನಂತರ ಆ ಸಿನಿಮಾದಿಂದ ಹೊರಬಂದರು. ಇದೀಗ ಯಶ್​ರ ಮುಂದಿನ ಸಿನಿಮಾಗಳ ಬಗ್ಗೆ ಹಲವು ಗಾಳಿಸುದ್ದಿಗಳು ಹರಿದಾಡುತ್ತಲೇ ಇವೆ. ಯಶ್​ರ ಮುಂದಿನ ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ನರ್ತನ್ ಆ ಸಿನಿಮಾದಿಂದ ಹೊರಗೆ ಬಂದರು.

ಇದೀಗ ತಮಿಳಿನ ನಿರ್ದೇಶಕಿ ಒಬ್ಬರು ಯಶ್​ರ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಹಾಲಿವುಡ್ ತಂತ್ರಜ್ಙರು ಕೆಲಸ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾದ ಚಿತ್ರೀಕರಣ ಭಾರತ, ಶ್ರೀಲಂಕಾ ಹಾಗೂ ಇನ್ನೂ ಕೆಲವು ದೇಶಗಳಲ್ಲಿ ನಡೆಯಲಿದೆ ಎಂಬ ಮಾತುಗಳೂ ಸಹ ಇವೆ. ಆದರೆ ಯಾವುದೂ ಸ್ಪಷ್ಟವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ