
2025ರ ಐಪಿಎಲ್ ಹಬ್ಬಕ್ಕೆ ಮಂಗಳವಾರ (ಜೂನ್ 3) ತೆರೆಬೀಳಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಹಣಾಹಣಿ ಏರ್ಪಡಲಿದೆ. ಐಪಿಎಲ್ ಟ್ರೋಫಿಗಾಗಿ ಎರಡೂ ತಂಡಗಳು ಕಾದಿವೆ. ಅಂತಿಮವಾಗಿ ಯಾರ ಕೈಗೆ ಕಪ್ ಸಿಗಲಿದೆ ಎಂಬುದನ್ನು ನೋಡಲು ಎಲ್ಲರೂ ಕಾದಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಸೇನೆಗೆ (Indian Armed Forces) ವಿಶೇಷ ಗೌರವ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೌದು, ಐಪಿಎಲ್ ಸಮಾರೋಪ ಸಮಾರಂಭದಲ್ಲಿ ಶಂಕರ್ ಮಹಾದೇವನ್ (Shankar Mahadevan) ಅವರು ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಭಾರತೀಯ ಸೇನೆಗೆ ವಿಶೇಷ ಗೌರವ ಸಲ್ಲಿಸಲಿದ್ದಾರೆ.
ಪಹಲ್ಗಾಮ್ನಲ್ಲಿ ಪಾಕ್ ಉಗ್ರರು ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂದೂರ್’ ನಡೆಸಿ ಉಗ್ರರಿಗೆ ತಕ್ಕ ಪಾಠ ಕಲಿಸಿತು. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಸೃಷ್ಟಿ ಆಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಐಪಿಎಲ್ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ವಾತಾವರಣ ತಿಳಿಗೊಂಡ ಬಳಿಕ ಮತ್ತೆ ಐಪಿಎಲ್ ಪಂದ್ಯಗಳು ಪುನಾರಂಭಗೊಂಡವು. ಹೀಗಾಗಿ ಭಾರತೀಯ ಸೇನೆಗೆ ಐಪಿಎಲ್ ಸಮಾರೋಪ ಸಮಾರಂಭದಲ್ಲಿ ಗೌರವ ಸಲ್ಲಿಸಲು ತೀರ್ಮಾನಿಸಲಾಗಿದೆ.
ಖ್ಯಾತ ಗಾಯಕ, ಸಂಗೀತ ಸಂಯೋಜಕ ಶಂಕರ್ ಮಹಾದೇವನ್ ಅವರು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಕ್ರಮ ನೀಡಲಿದ್ದಾರೆ. ಅವರ ಜೊತೆ ಮಕ್ಕಳಾದ ಸಿದ್ದಾರ್ಥ್ ಮಹಾದೇವ್ ಮತ್ತು ಶಿವಂ ಮಹಾದೇವ್ ಕೂಡ ಸಾಥ್ ನೀಡುತ್ತಿದ್ದಾರೆ. ಈ ಅವಕಾಶ ಸಿಕ್ಕಿದ್ದಕ್ಕೆ ಅವರಿಗೆ ತುಂಬ ಖುಷಿ ಆಗಿದೆ. ಈ ಬಗ್ಗೆ ಶಿವಂ ಮಹಾದೇವ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೂನ್ 3ರಂದು ಸಂಜೆ 6 ಗಂಟೆ ಬಳಿಕ ಐಪಿಎಲ್ ಸಮಾರೋಪ ಸಮಾರಂಭ ಆರಂಭ ಆಗಲಿದೆ. ಲಕ್ಷಾಂತರ ಜನರ ಸಮ್ಮುಖದಲ್ಲಿ ಸಮಾರಂಭ ನಡೆಯಲಿದೆ. ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ಸೇನೆಗೆ ಶಂಕರ್ ಮಹಾದೇವನ್ ಮತ್ತು ತಂಡದವರು ಗೌರವ ಸಲ್ಲಿಸುವುದನ್ನು ಇಡೀ ದೇಶವೇ ಕಣ್ತುಂಬಿಕೊಳ್ಳಲಿದೆ.
ಇದನ್ನೂ ಓದಿ: IPL 2025: ಮಳೆಯಿಂದ ಐಪಿಎಲ್ ಫೈನಲ್ ರದ್ದಾದರೆ ಯಾವ ತಂಡಕ್ಕೆ ಚಾಂಪಿಯನ್ ಕಿರೀಟ?
ಈ ಬಾರಿಯ ಐಪಿಎಲ್ ಫೈನಲ್ ಸಿಕ್ಕಾಪಟ್ಟೆ ರೋಚಕವಾಗಿದೆ. ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಹಾತೊರೆಯುತ್ತಿವೆ. ಹೈವೋಲ್ಟೇಜ್ ಪಂದ್ಯದಲ್ಲಿ ಕಪ್ ಯಾರ ಪಾಲಾಗಲಿದೆ ಎಂಬುದನ್ನು ತಿಳಿಯಲು ಇಡೀ ದೇಶವೇ ಕಾದಿದೆ. ಆರ್ಸಿಬಿ ಗೆಲುವಿಗಾಗಿ ಕನ್ನಡಿಗರು ಪ್ರಾರ್ಥಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.