‘ಕ್ಯಾಪ್ಟನ್ ಮಿಲ್ಲರ್’ ಟ್ರೈಲರ್ ಬಿಡುಗಡೆ, ಶಿವಣ್ಣ ಅಭಿಮಾನಿಗಳಿಗೆ ನಿರಾಸೆ
Captain Miller: ಧನುಶ್ ಹಾಗೂ ಶಿವರಾಜ್ ಕುಮಾರ್ ನಟಿಸಿರುವ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಚೆನ್ನಾಗಿದೆ, ಆದರೆ ಶಿವಣ್ಣನ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಧನುಶ್ (Dhanush) ಹಾಗೂ ಶಿವರಾಜ್ ಕುಮಾರ್ (Shiva Rajkumar) ನಟಿಸಿರುವ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಟ್ರೈಲರ್ ಇಂದು (ಜನವರಿ 06) ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ಏನೋ ಚೆನ್ನಾಗಿದೆ, ಆಕ್ಷನ್ ಭರಿತವಾಗಿದೆ ಆದರೆ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಧನುಶ್ ಹಾಗೂ ಶಿವಣ್ಣನ ಸಿನಿಮಾ ಎಂದೇ ಹೇಳಿಕೊಂಡು ಬರಲಾಗಿತ್ತು, ಆದರೆ ಟ್ರೈಲರ್ ನೋಡಿದರೆ ಇದು ಕೇವಲ ಧನುಶ್ ಸಿನಿಮಾ ಮಾತ್ರವೇನಾ ಎಂಬ ಅನುಮಾನ ಮೂಡುತ್ತಿದೆ.
‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಟ್ರೈಲರ್ ಸಖತ್ ಆಕ್ಷನ್ ಭರಿತವಾಗಿದೆ. ಸಿನಿಮಾ ಬ್ರಿಟೀಷ್ ಕಾಲದಲ್ಲಿ ನಡೆಯುವ ಕತೆ. ಬ್ರಿಟೀಷರು ಹಾಗೂ ಬುಡಕಟ್ಟು ಸಮುದಾಯದ ಯುವಕನ ನಡುವೆ ಕದನದ ಕತೆಯನ್ನು ಸಿನಿಮಾ ಒಳಗೊಂಡಿದೆ ಎಂಬುದನ್ನು ಟ್ರೈಲರ್ ಸಾರಿ ಹೇಳುತ್ತಿದೆ. ಬ್ರಿಟೀಷ್ ಅಧಿಕಾರಿಗಳು ಬುಡಕಟ್ಟು ಜನಾಂಗದ ತಾಂಡಾ ಇರುವ ಜಾಗವನ್ನು ವಶಪಡಿಸಿಕೊಂಡು ಅಲ್ಲಿ ಗಣಿಗಾರಿಕೆ ನಡೆಸಲು ಮುಂದಾಗುತ್ತದೆ. ಹಿಂಸಾತ್ಮಕವಾಗಿ ಅವರನ್ನು ಆ ಜಾಗದಿಂದ ಹೊರಗಟ್ಟುವ ಪ್ರಯತ್ನ ಮಾಡುತ್ತದೆ. ಆಗ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ಮಾಡುತ್ತಾನೆ ಅದೇ ಸಮುದಾಯದ ಯುವಕ. ಇದು ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಕತೆ.
ಸಿನಿಮಾದ ಟ್ರೈಲರ್ ಏನೋ ಚೆನ್ನಾಗಿದೆ. ಆದರೆ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ತುಸು ನಿರಾಸೆ ಮೂಡಿಸುತ್ತದೆ. ಏಕೆಂದರೆ ಟ್ರೈಲರ್ನಲ್ಲಿ ಶಿವರಾಜ್ ಕುಮಾರ್ ಕೇವಲ ಒಂದು ಬಾರಿಯಷ್ಟೆ ಕಾಣಿಸಿಕೊಳ್ಳುತ್ತಾರೆ. ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಶಿವಣ್ಣನದ್ದು ಅತಿಥಿ ಪಾತ್ರವಲ್ಲ ಅವರೂ ಸಹ ಸಿನಿಮಾದ ನಾಯಕ ಎಂದೆಲ್ಲ ಹೇಳಲಾಗಿತ್ತು. ಆದರೆ ಟ್ರೈಲರ್ನಲ್ಲಿ ಶಿವರಾಜ್ ಕುಮಾರ್ ಅವರಿಗೆ ಸ್ಪೇಸ್ ನೀಡಿಲ್ಲ. ಹೀಗೆ ಬಂದು ಹಾಗೆ ಮರೆಯಾಗಿ ಬಿಡುತ್ತಾರೆ.
ಇದನ್ನೂ ಓದಿ:‘ಆರ್ಆರ್ಆರ್’ ಸ್ಟಾರ್ ಜೊತೆ ಶಿವರಾಜ್ ಕುಮಾರ್ ನಟನೆ, ನಿರ್ದೇಶಕ ಯಾರು?
ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಹಾಡೊಂದು ಬಿಡುಗಡೆ ಆಗಿದೆ. ಶಿವರಾಜ್ ಕುಮಾರ್ ಹಾಗೂ ಧನುಶ್ ಒಟ್ಟಿಗೆ ಕುಣಿದು ಕುಪ್ಪಳಿಸುವ ಹಾಡದು. ಆ ಹಾಡು ನೋಡಿದವರಿಗೆ ಶಿವಣ್ಣನಿಗೆ, ಸಿನಿಮಾದಲ್ಲಿ ಒಳ್ಳೆಯ ಪಾತ್ರ, ಸ್ಪೇಸ್ ಇರುವ ಭರವಸೆ ಇಟ್ಟುಕೊಂಡಿದ್ದರು. ಆದರೆ ಟ್ರೈಲರ್ನಲ್ಲಿ ಆ ಭರವಸೆ ಹುಸಿಯಾಗಿದೆ. ಆದರೂ ಸಿನಿಮಾ ನೋಡಿದ ಮೇಲಷ್ಟೆ ಶಿವಣ್ಣನ ಪಾತ್ರದ ಬಗ್ಗೆ ಪೂರ್ಣ ಚಿತ್ರಣ ಗೊತ್ತಾಗಲಿದೆ.
‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾವನ್ನು ಅರುನ್ ಮಟ್ಟೇಶ್ವರನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಶಿವಣ್ಣ, ಧನುಶ್ ಜೊತೆಗೆ ಪ್ರಿಯಾಂಕಾ ಅರುಳ್ ಮೋಹನ್, ಜಾನ್ ಕೊಕೆನ್, ಸಂದೀಪ್ ಕಿಶನ್, ನಾಸರ್ ಇನ್ನೂ ಹಲವರು ನಟಿಸಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ನಿರ್ಮಾಣ ಮಾಡಿರುವುದು ಸತ್ಯ ಜ್ಯೋತಿ ಫಿಲಮ್ಸ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ