ಅಪ್ಪ-ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ; ಹಾಡಿನ ಮೂಲಕ ತಿಳಿಹೇಳಿದ ಗಾಯಕ ಶಾನ್
ಫಾದರ್ಸ್ ಡೇ ಪ್ರಯುಕ್ತ ಗಾಯಕ ಶಾನ್ ಒಂದು ಹಾಡು ಬಿಡುಗಡೆ ಮಾಡಿದ್ದರು. ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ ಎಂಬ ಸಂದೇಶ ಇರುವ ಆ ಗೀತೆಗೆ ಈವರೆಗೆ 1.8 ಮಿಲಿಯನ್ (18 ಲಕ್ಷ) ವೀವ್ಸ್ ಸಿಕ್ಕಿದೆ.
ಹೊಸ ಪೀಳಿಗೆಯ ಪ್ರೇಕ್ಷಕರನ್ನು ಸೆಳೆದುಕೊಳ್ಳಲು ಹಲವು ಬಗೆಯ ಹಾಡುಗಳು ತಯಾರಾಗುತ್ತವೆ. ಮದ್ಯಪಾನವನ್ನು ಪ್ರಚೋದಿಸುವ, ಡಬಲ್ ಮೀನಿಂಗ್ ಪದ ಪ್ರಯೋಗ ಮಾಡುವ, ಬೈಗುಳಗಳನ್ನೇ ಸಾಹಿತ್ಯವನ್ನಾಗಿ ಮಾಡಿಕೊಳ್ಳುವ ಹಾಡುಗಳ ಸಂಖ್ಯೆ ಹೆಚ್ಚುತ್ತಿದೆ. ಅವು ಮಿಲಿಯನ್ಗಟ್ಟಲೆ ವೀವ್ಸ್ ಕೂಡ ಪಡೆದುಕೊಳ್ಳುತ್ತಿವೆ. ಇಂಥ ಟ್ರೆಂಡ್ಗೆ ವಿರುದ್ಧವಾಗಿ ಜನಪ್ರಿಯ ಗಾಯಕ ಶಾನ್ ಅವರು ಒಂದು ಹೊಸ ಹಾಡು ರಿಲೀಸ್ ಮಾಡಿದ್ದು, ಅದು ಜನರಿಗೆ ತುಂಬ ಇಷ್ಟ ಆಗುತ್ತಿದೆ.
ಸಂಗೀತದ ಮೂಲಕ ಜನರಲ್ಲಿ ಪಾಸಿಟಿವ್ ವಿಚಾರಗಳನ್ನು ತುಂಬಬೇಕು ಎಂಬುದು ಶಾನ್ ಉದ್ದೇಶ. ಯುವಜನತೆಯನ್ನು ಕೆರಳಿಸುವಂತಹ ಮತ್ತು ಕೆಟ್ಟ ಸಂದೇಶ ನೀಡುವಂತಹ ಹಾಡುಗಳಿಗೆ ಶಾನ್ ವಿರೋಧವಿದೆ. ಇಂಥ ಹಾಡುಗಳನ್ನೇ ಜನರು ಇಷ್ಟಪಡುತ್ತಿರುವುದು ಈಗಿನ ಟ್ರೆಂಡ್ ಆಗಿದ್ದರೂ ಕೂಡ ಅದಕ್ಕೆ ವಿರುದ್ಧವಾಗಿ ಶಾನ್ ಮಾಡಿದ ಒಂದು ಪಾಸಿಟಿವ್ ಪ್ರಯತ್ನಕ್ಕೆ ಈಗ ಮೆಚ್ಚುಗೆ ಸಿಕ್ಕಿದೆ. ಇತ್ತೀಚೆಗೆ ಅವರು ಫಾದರ್ಸ್ ಡೇ ಪ್ರಯುಕ್ತ ಒಂದು ಹಾಡು ಬಿಡುಗಡೆ ಮಾಡಿದ್ದರು. ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ ಎಂಬ ಸಂದೇಶ ಇರುವ ಆ ಗೀತೆಗೆ ಈವರೆಗೆ 1.8 ಮಿಲಿಯನ್ (18 ಲಕ್ಷ) ವೀವ್ಸ್ ಸಿಕ್ಕಿರುವುದು ಅವರಿಗೆ ಸಂತಸ ತಂದಿದೆ.
‘ಅಪ್ಪ-ಅಮ್ಮನ್ನನ್ನು ನೋಡಿಕೊಳ್ಳುವುದು ಮಕ್ಕಳ ಮೊದಲ ಆದ್ಯತೆ ಆಗಬೇಕು. ವಯಸ್ಸಾದ ಪೋಷಕರನ್ನು ತೊರೆಯಬಾರದು. ಅವರ ಭಾವನೆಗಳ ಬಗ್ಗೆ ಈಗ ಮಾತನಾಡುವುದು ಅವಶ್ಯಕವಾಗಿದೆ. ಅವರು ಸಾಯುವವರೆಗೂ ನಾವು ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಆಗ ತುಂಬ ತಡವಾಗಿರುತ್ತದೆ’ ಎಂದು ಶಾನ್ ಹೇಳಿದ್ದಾರೆ. ಈ ಹಾಡಿನ ಮೂಲಕ ಆದಷ್ಟು ಜನರ ಮನಸ್ಸು ಬದಲಾಯಿಸುವುದು ಅವರ ಮುಖ್ಯ ಉದ್ದೇಶ.
‘ತೇರಾ ಹಿಸ್ಸಾ ಹು’ ಎಂಬ ಈ ಹಾಡಿನಲ್ಲಿ ಸ್ವತಃ ಶಾನ್ ನಟಿಸಿದ್ದಾರೆ. ತಂದೆ-ಮಗನ ಸಂಬಂಧದ ಬಗ್ಗೆ ಮಾತನಾಡುವ ಈ ಗೀತೆಯಲ್ಲಿ ಅವರ ಪುತ್ರ ಶುಭ್ ಕೂಡ ಕಾಣಿಸಿಕೊಂಡಿದ್ದಾರೆ. ‘ನನ್ನ ಮಗ ನನ್ನಂತೆಯೇ ಕಾಣುತ್ತಾನೆ. ಅವನು ನನ್ನ ಬಾಲ್ಯದ ಪಾತ್ರ ಮಾಡಿರುವುದರಿಂದ ಅವನಿಗಿಂತ ಉತ್ತಮವಾದ ಬೇರೆ ಆಯ್ಕೆ ಯಾವುದೂ ಇರುವುದಿಲ್ಲ ಎನಿಸಿತು’ ಎಂದು ಶಾನ್ ಹೇಳಿದ್ದಾರೆ.
ಹೆಚ್ಚು ಜನರು ಈ ಹಾಡನ್ನು ಶೇರ್ ಮಾಡುತ್ತಿದ್ದು, ವೀಕ್ಷಣೆ ಸಂಖ್ಯೆ 18 ಲಕ್ಷವನ್ನೂ ದಾಟಿ ಮುಂದುವರಿಯುತ್ತಿದೆ.
ಇದನ್ನೂ ಓದಿ:
ವೃದ್ಧಾಪ್ಯ ವೇತನ ಪಡೆಯುವುದಕ್ಕೆ ಗದಗದಲ್ಲಿ ಅಜ್ಜಿ ಪರದಾಟ; ವಾಪಸ್ ಊರಿಗೆ ಕಳುಹಿಸಿದ ಪೊಲೀಸರು
ವೃದ್ಧಾಪ್ಯ ವೇತನದಲ್ಲಿ ಗೋಲ್ಮಾಲ್; ಸಾರ್ವಜನಿಕವಾಗಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶಾಸಕ
Published On - 8:10 am, Tue, 6 July 21