ಎಸ್ಎಸ್ ರಾಜಮೌಳಿ ಜನ್ಮದಿನ; ಅವರ ನೆಟ್ವರ್ತ್ ಎಷ್ಟು ಕೋಟಿ ರೂಪಾಯಿ?
SS Rajamouli Birthday: ರಾಜಮೌಳಿ ಅವರು ‘ಬಾಹುಬಲಿ’ ಸಿನಿಮಾ ನಿರ್ದೇಶನಕ್ಕೆ 25 ಕೋಟಿ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ‘ಆರ್ಆರ್ಆರ್’ ಸಿನಿಮಾಗಾಗಿ ಅವರು 50+ ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರಂತೆ.
ಎಸ್ಎಸ್ ರಾಜಮೌಳಿ (SS Rajamouli) ಅವರಿಗೆ ಇಂದು (ಅಕ್ಟೋಬರ್ 9) ಜನ್ಮದಿನದ ಸಂಭ್ರಮ. ಅವರಿಗೆ ಈಗ 50 ವರ್ಷ. ಖ್ಯಾತ ನಿರ್ದೇಶಕನಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ರಾಜಮೌಳಿ ಅವರು ಜನಿಸಿದ್ದು 1973ರಲ್ಲಿ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾರೆ. ನಿರ್ಮಾಣದಲ್ಲೂ ರಾಜಮೌಳಿ ಅವರು ಬ್ಯುಸಿ ಆಗಿದ್ದಾರೆ. ಹಾಗಾದರೆ ರಾಜಮೌಳಿ ಅವರ ಒಟ್ಟೂ ಆಸ್ತಿ ಎಷ್ಟು ಎಂಬಿತ್ಯಾದಿ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
2001ರಲ್ಲಿ ‘ಸ್ಟುಡೆಂಟ್ ನಂಬರ್ 1’ ಸಿನಿಮಾವನ್ನು ರಾಜಮೌಳಿ ಅವರು ನಿರ್ದೇಶನ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ನಟಿಸಿದ್ದರು. ಅವರಿಗೂ ಈ ಚಿತ್ರದಿಂದ ಮೈಲೇಜ್ ಸಿಕ್ಕಿತು. ನಂತರ, ‘ಸೈ’, ‘ಛತ್ರಪತಿ’, ‘ವಿಕ್ರಮಾರ್ಕುಡು’, ‘ಮಗಧೀರ’, ‘ಈಗ’ ಅಂಥ ಸೂಪರ್ ಹಿಟ್ ಚಿತ್ರಗಳನ್ನು ರಾಜಮೌಳಿ ನೀಡಿದರು. ಇತ್ತೀಚೆಗೆ ಅವರ ಖ್ಯಾತಿ ಮತ್ತಷ್ಟು ಹೆಚ್ಚಿದೆ.
‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಸಿನಿಮಾಗಳಿಂದ ರಾಜಮೌಳಿ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಳೆದರು. ಪ್ರಭಾಸ್ ನಟನೆಯ ಈ ಚಿತ್ರದಿಂದ ರಾಜಮೌಳಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಅವರ ಕಲ್ಪನೆ ಅನೇಕರನ್ನು ದಿಗ್ಭ್ರಾಂತರನ್ನಾಗಿ ಮಾಡಿದೆ. ಇನ್ನು, ಕಳೆದ ವರ್ಷ ರಿಲೀಸ್ ಆಗಿರುವ ‘ಆರ್ಆರ್ಆರ್’ ಸಿನಿಮಾ ಅಂತೂ ಮಾಡಿರುವ ದಾಖಲೆಗಳ ಬಗ್ಗೆ ಮತ್ತೆ ಹೊಸದಾಗಿ ಹೇಳಬೇಕಿಲ್ಲ. ಈ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಅವಾರ್ಡ್ ಗೆದ್ದಿದೆ.
ರಾಜಮೌಳಿ ಅವರ ಆಸ್ತಿ 158 ಕೋಟಿ ರೂಪಾಯಿ ಇದೆ. ಅವರು ಬಾಹುಬಲಿ ಸಿನಿಮಾ ನಿರ್ದೇಶನಕ್ಕೆ 25 ಕೋಟಿ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ‘ಆರ್ಆರ್ಆರ್’ ಸಿನಿಮಾಗಾಗಿ ಅವರು 50+ ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರಂತೆ. ರಾಜಮೌಳಿ ಅವರು ಹೈದಾರಾಬಾದ್ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ದೇಶದ ಅನೇಕ ಕಡೆಗಳಲ್ಲಿ ಅವರು ಪ್ರಾಪರ್ಟಿ ಖರೀದಿಸಿದ್ದಾರೆ. ಸೆಲೆಬ್ರಿಟಿಗಳಿಗೆ ಕಾರ್ ಕಲೆಕ್ಷನ್ ಬಗ್ಗೆ ಆಸಕ್ತಿ ಇರುತ್ತದೆ. ಆದರೆ, ರಾಜಮೌಳಿಗೆ ಈ ಬಗ್ಗೆ ಅಷ್ಟೊಂದು ಕ್ರೇಜ್ ಇಲ್ಲ. ಅವರ ಬಳಿ ರೇಂಜ್ ರೋವರ್, ಬಿಎಂಡಬ್ಲ್ಯೂ ಕಾರುಗಳಿವೆ.
ಕರ್ನಾಟಕ ಮೂಲದವರು
ರಾಜಮೌಳಿಗೂ ಕರ್ನಾಟಕಕ್ಕೂ ನಂಟಿದೆ. ಅವರ ಪಾಲಕರು ಶಿವನ ಭಕ್ತರು. ರಾಜಮೌಳಿ ಬೆಳೆದಿದ್ದು ಕೂಡುಕುಟುಂಬದಲ್ಲಿ. ಅವರ ತಂದೆ ಹಾಗೂ ಸಹೋದರರು ಒಂದೇ ಮನೆಯಲ್ಲಿ ವಾಸವಾಗಿದ್ದರು. ಅವರಿಗೆ ಕೋವೂರ್ನಲ್ಲಿ ಭೂಮಿ ಇತ್ತು. ಆದರೆ, ಈ ಭೂಮಿಯ ಮೇಲೆ ರೈಲ್ವೆ ಹಳಿ ನಿರ್ಮಾಣ ಆಗಿದ್ದರಿಂದ ಇರುವ ಜಾಗವೂ ಹೋಯಿತು. ಆ ಬಳಿಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ರಾಯಚೂರಿನ ಮಾನ್ವಿ ಗ್ರಾಮದಲ್ಲಿ ಏಳು ಎಕರೆ ಜಮೀನು ಖರೀದಿಸಿದರು. 1968ರಲ್ಲಿ ಇಲ್ಲಿಗೆ ಶಿಫ್ಟ್ ಆದರು. 1973ರಲ್ಲಿ ರಾಜಮೌಳಿ ಜನಿಸಿದರು. 1977ರಲ್ಲಿ ಕೋವುರಿಗೆ ಕುಟುಂಬ ಮರಳಿತು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿರುವ ಫಿಟ್ನೆಸ್ ಫ್ರೀಕ್ ಸುಂದರಿಯ ಫೋಟೋಸ್
ರಾಜಮೌಳಿ ಅವರು ಮಹೇಶ್ ಬಾಬು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಸೆಟ್ಟೇರೋದು 2024ರಲ್ಲಿ ಎನ್ನಲಾಗಿದೆ. ಮಹೇಶ್ ಬಾಬು ಅವರು ಸದ್ಯ ‘ಗುಂಟೂರು ಖಾರಂ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ರಿಲೀಸ್ ಆದ ಬಳಿಕವೇ ಮಹೇಶ್ ಬಾಬುಗೆ ರಾಜಮೌಳಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:59 am, Tue, 10 October 23