SS Rajamouli: ‘ಆರ್ಆರ್ಆರ್ 2’ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಲ್ವಾ? ಶಾಕಿಂಗ್ ಹೇಳಿಕೆ ನೀಡಿದ ವಿಜಯೇಂದ್ರ ಪ್ರಸಾದ್
RRR Sequel: ರಾಜಮೌಳಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಆರ್ಆರ್ಆರ್ 2’ ಸಿನಿಮಾಗೆ ಬೇರೆ ಯಾರಾದರೂ ನಿರ್ದೇಶನ ಮಾಡಿದರೆ ಅದನ್ನು ಅಭಿಮಾನಿಗಳು ಒಪ್ಪಿಕೊಳ್ಳುವುದು ಕಷ್ಟ.
ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಕೂಡ ‘ಆರ್ಆರ್ಆರ್’ ಸಿನಿಮಾ (RRR Movie) ಸದ್ದು ಮಾಡಿತು. ಈ ಚಿತ್ರದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಬಂದವು. ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವರ ನಟನೆ ಮತ್ತು ಆ್ಯಕ್ಷನ್ಗೆ ಪ್ರೇಕ್ಷಕರು ಫಿದಾ ಆದರು. ಈ ಸಿನಿಮಾದಿಂದ ನಿರ್ದೇಶಕ ರಾಜಮೌಳಿ (Rajamouli) ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿತು. ಅಂದಹಾಗೆ, ‘ಆರ್ಆರ್ಆರ್’ ಸಿನಿಮಾಗೆ ಸೀಕ್ವೆಲ್ ಮಾಡುವ ಪ್ಲ್ಯಾನ್ ಕೂಡ ಜಾಲ್ತಿಯಲ್ಲಿದೆ. ಆದರೆ ಅದಕ್ಕೆ ರಾಜಮೌಳಿ ಅವರು ನಿರ್ದೇಶನ ಮಾಡುತ್ತಾರೋ ಅಥವಾ ಎಲ್ಲವೋ ಎಂಬ ಬಗ್ಗೆ ಅನುಮಾನ ಮೂಡಿದೆ. ಈ ಕುರಿತು ರಾಜಮೌಳಿ ಅವರ ತಂದೆ, ಕಥೆಗಾರ ವಿಜಯೇಂದ್ರ ಪ್ರಸಾದ್ (Vijayendra Prasad) ಅವರು ಹೇಳಿಕೆ ನೀಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಜಯೇಂದ್ರ ಪ್ರಸಾದ್ ಅವರು ‘ಆರ್ಆರ್ಆರ್ 2’ ಬಗ್ಗೆ ಮಾತನಾಡಿದ್ದಾರೆ. ‘ಆರ್ಆರ್ಆರ್’ ಚಿತ್ರದ ಸೀಕ್ವೆಲ್ಗೆ ಕಥೆ ಈಗಾಗಲೇ ಫೈನಲ್ ಆಗಿದೆ. ‘ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವರೇ ಸೀಕ್ವೆಲ್ನಲ್ಲಿ ಮುಖ್ಯಭೂಮಿಕೆ ನಿಭಾಯಿಸಲಿದ್ದಾರೆ. ಇದು ಹಾಲಿವುಡ್ ಸಿನಿಮಾಗಳ ಗುಣಮಟ್ಟದಲ್ಲಿ ಸಿದ್ಧವಾಗಲಿದೆ. ಸ್ವತಃ ರಾಜಮೌಳಿ ನಿರ್ದೇಶನ ಮಾಡಬಹುದು ಅಥವಾ ಅವರ ಮಾರ್ಗದರ್ಶನದಲ್ಲಿ ಬೇರೆ ಯಾರಾದರೂ ನಿರ್ದೇಶನ ಮಾಡಬಹುದು’ ಎಂದು ವಿಜಯೇಂದ್ರ ಪ್ರಸಾದ್ ಅವರು ಹೇಳಿರುವುದು ಅಚ್ಚರಿ ಉಂಟು ಮಾಡಿದೆ.
ಇದನ್ನೂ ಓದಿ: SS Rajamouli: ರಾಮ್ ಚರಣ್, ಜೂ. ಎನ್ಟಿಆರ್ಗೆ ಮಣೆಹಾಕಿ ರಾಜಮೌಳಿಯನ್ನು ಕಡೆಗಣಿಸಿದ ಆಸ್ಕರ್; ಅಭಿಮಾನಿಗಳಿಗೆ ಅಸಮಾಧಾನ
ಭಾರತೀಯ ಚಿತ್ರರಂಗದಲ್ಲಿ ರಾಜಮೌಳಿ ಅವರು ಸ್ಟಾರ್ ನಿರ್ದೇಶಕನಾಗಿ ಮಿಂಚುತ್ತಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಆರ್ಆರ್ಆರ್ 2’ ಸಿನಿಮಾಗೆ ಬೇರೆ ಯಾರಾದರೂ ನಿರ್ದೇಶನ ಮಾಡಿದರೆ ಅದನ್ನು ಅಭಿಮಾನಿಗಳು ಒಪ್ಪಿಕೊಳ್ಳುವುದು ಕಷ್ಟ. ಹಾಗಾಗಿ ಅಂತಿಮವಾಗಿ ಚಿತ್ರತಂಡದವರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: SS Rajamouli: ಆಸ್ಕರ್ ಸದಸ್ಯತ್ವ ಪಡೆದವರಿಗೆ ‘ಆರ್ಆರ್ಆರ್’ ನಿರ್ದೇಶಕ ರಾಜಮೌಳಿ ಕಡೆಯಿಂದ ಅಭಿನಂದನೆ
ಟಾಲಿವುಡ್ ಸ್ಟಾರ್ ಹೀರೋ ಮಹೇಶ್ ಬಾಬು ಜೊತೆಗೆ ರಾಜಮೌಳಿ ಅವರು ಒಂದು ಸಿನಿಮಾ ಮಾಡಬೇಕಿದೆ. ಆ ಚಿತ್ರಕ್ಕಾಗಿ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆ ಬಳಿಕ ಅವರು ಮಹಾಭಾರತದ ಕಥೆಯನ್ನು ಆಧರಿಸಿ ಸಿನಿಮಾ ಮಾಡಲಿದ್ದಾರೆ. ಈ ಎಲ್ಲ ಪ್ರಾಜೆಕ್ಟ್ಗಳ ಮೇಲೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಮಹಾಭಾರತದ ಕಥೆಯನ್ನು ಇಟ್ಟುಕೊಂಡು ರಾಜಮೌಳಿ ನಿರ್ದೇಶನ ಮಾಡಲಿರುವ ಚಿತ್ರವು 10 ಪಾರ್ಟ್ಗಳಲ್ಲಿ ಮೂಡಿಬರಲಿದೆ ಎಂಬುದು ವಿಶೇಷ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.