ಆರ್​ಟಿಓ ಕಚೇರಿಗೆ ಬಂದ ನಿರ್ದೇಶಕ ರಾಜಮೌಳಿ, ಕಾರಣವೇನು?

SS Rajamouli movies: ನಿರ್ದೇಶಕ ಎಸ್​ಎಸ್ ರಾಜಮೌಳಿ ಪ್ರಸ್ತುತ ಮಹೇಶ್ ಬಾಬು ನಟನೆಯ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು ಅವರ ಪಾಸ್​ಪೋರ್ಟ್ ಕಿತ್ತಿಟ್ಟುಕೊಂಡಿದ್ದಾರೆ. ಆದರೆ ಈಗ ಅವರ ಚಾಲನಾ ಪರವಾನಗಿಯೇ ರದ್ದಾದಂತಿದೆ, ರಾಜಮೌಳಿ ಇತ್ತೀಚೆಗೆ ಆರ್​ಟಿಓ ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ವಿಷಯ ಏನು?

ಆರ್​ಟಿಓ ಕಚೇರಿಗೆ ಬಂದ ನಿರ್ದೇಶಕ ರಾಜಮೌಳಿ, ಕಾರಣವೇನು?
Ss Rajamouli

Updated on: Apr 25, 2025 | 1:33 PM

ನಿರ್ದೇಶಕ ಎಸ್​ಎಸ್ ರಾಜಮೌಳಿ (SS Rajamouli) ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಸ್ಸಾಂನಲ್ಲಿ ಇತ್ತೀಚೆಗಷ್ಟೆ ಚಿತ್ರೀಕರಣ ಮುಗಿಸಿರುವ ರಾಜಮೌಳಿ, ಚಿತ್ರತಂಡದ ಜೊತೆಗೆ ವಿದೇಶಕ್ಕೆ ಹಾರಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾಕ್ಕಾಗಿ ದೇಶ-ವಿದೇಶ ಸುತ್ತುತ್ತಿರುವ ರಾಜಮೌಳಿ ಇತ್ತೀಚೆಗೆ ಹಠಾತ್ತಾಗಿ ಹೈದರಾಬಾದ್​ನ ಆರ್​ಟಿಓ ಕಚೇರಿಯಲ್ಲಿ ಕಾಣಿಸಿಕೊಂಡರು. ಆರ್​ಟಿಓ ಕಚೇರಿಯಲ್ಲಿ ರಾಜಮೌಳಿ, ಕಂಪ್ಯೂಟರ್ ಮುಂದೆ ಕೂತು ಫೋಟೊ ತೆಗೆಸಿಕೊಂಡಿರುವ ಚಿತ್ರವೂ ಸಹ ಇದೀಗ ವೈರಲ್ ಆಗಿದೆ.

ರಾಜಮೌಳಿ, ಸಿನಿಮಾ ಶೂಟಿಂಗ್ ಶುರುವಾಗುತ್ತಿದ್ದಂತೆ ಮಹೇಶ್ ಬಾಬು ಅವರ ಪಾಸ್​ಪೋರ್ಟ್ ಕಿತ್ತಿಟ್ಟುಕೊಂಡಿದ್ದರು. ಆ ಚಿತ್ರವನ್ನು ಸಹ ಹಂಚಿಕೊಂಡಿದ್ದರು. ಆದರೆ ಇದೀಗ ರಾಜಮೌಳಿಯ ಡ್ರೈವಿಂಗ್ ಲೈಸೆನ್ಸ್​ ಸಮಸ್ಯೆ ಎದುರಾಗಿದೆ. ರಾಜಮೌಳಿ ಬಳಿ ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಇದೆಯಂತೆ. ಆದರೆ ಅದರ ಅವಧಿ ಮುಗಿದಿದ್ದು ಅದನ್ನು ಪುನಃ ಸಕ್ರಿಯ (ರಿನೀವಲ್) ಮಾಡಿಸಲೆಂದು ರಾಜಮೌಳಿ, ಆರ್​ಟಿಓ ಕಚೇರಿಗೆ ಬಂದಿದ್ದರು.

ಹೈದರಾಬಾದ್​ನ ಖೈರತಾಬಾದ್​ ಆರ್​ಟಿಓ ಕಚೇರಿಗೆ ಬಂದಿದ್ದ ರಾಜಮೌಳಿ ಅಲ್ಲಿ ತಮ್ಮ ಹಳೆಯ ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ನೀಡಿ ಅದನ್ನು ನಿಯಮಗಳಿಗೆ ಅನುಸಾರವಾಗಿ ನವೀಕರಣ ಮಾಡಿಸಿದ್ದಾರೆ. ಆರ್​ಟಿಓ ಸಿಬ್ಬಂದಿ ರಾಜಮೌಳಿಗೆ ಅಗತ್ಯ ಪ್ರಾಧಾನ್ಯತೆ ನೀಡಿ ಕಡಿಮೆ ಸಮಯದಲ್ಲಿ ರಾಜಮೌಳಿ ಅವರ ಬಯೋಮೆಟ್ರಿಕ್ ದಾಖಲೆಗಳನ್ನು ಪಡೆದುಕೊಂಡು, ನಿಯಮದಂತೆ ಕೆಲ ಪರೀಕ್ಷೆಗಳನ್ನು ಮಾಡಿ ಅವರ ಚಾಲನ ಪರವಾನಗಿಯನ್ನು ನವೀಕರಣ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ:ಆರ್​ಆರ್​​ಆರ್ ಸಿನಿಮಾಕ್ಕೆ ಗೌರವ ನೀಡಿದ ಆಸ್ಕರ್, ರಾಜಮೌಳಿಗೆ ಖುಷಿ

ರಾಜಮೌಳಿ ಅವರು ಬರುತ್ತಿರುವುದು ಮೊದಲೇ ತಿಳಿದು ತೆಲಂಗಾಣ ಸಂಚಾರ ವಿಭಾಗದ ಜಂಟಿ ಆಯುಕ್ತ ರಮೇಶ್ ಅವರು ಖುದ್ದಾಗಿ ಕಚೇರಿಗೆ ಬಂದು ರಾಜಮೌಳಿ ಅವರ ಪರವಾನಗಿ ನವೀಕರಣ ಕಾರ್ಯವನ್ನು ಮಾಡಿಸಿಕೊಟ್ಟಿದ್ದಾರೆ. ಸಾಮಾನ್ಯರನ್ನು ಕಾಯಿಸುವಂತೆ ರಾಜಮೌಳಿ ಅವರನ್ನು ಹೆಚ್ಚು ಸಮಯ ಕಾಯಿಸಿಲ್ಲ, ಶೀಘ್ರವೇ ಅವರ ಕೆಲಸ ಮುಗಿಸಿಕೊಟ್ಟು ಕಳಿಸಿದ್ದಾರೆ.

ರಾಜಮೌಳಿ ಪ್ರಸ್ತುತ ಮಹೇಶ್ ಬಾಬು ನಟನೆಯ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿ. ಇದು ಭಾರತದ ಈವರೆಗಿನ ಅತಿದೊಡ್ಡ ಬಜೆಟ್ ಸಿನಿಮಾ ಆಗಿರಲಿದೆ. ಈ ಸಿನಿಮಾನಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಸಹ ನಟಿಸಿದ್ದಾರೆ. ಸಿನಿಮಾದಲ್ಲಿ ಕೆಲ ಹಾಲಿವುಡ್ ನಟರು ಸಹ ಇರಲಿದ್ದಾರಂತೆ. ಸಿನಿಮಾವನ್ನು ಹಾಲಿವುಡ್ ಲೆವೆಲ್​ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಹಲವು ಅತ್ಯುತ್ತಮ ಹಾಲಿವುಡ್ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ