ಒಡಿಶಾಗೆ ಹೋಗಿ ತಪ್ಪು ಮಾಡಿದ್ರಾ ರಾಜಮೌಳಿ? ಶೂಟಿಂಗ್ ಸೆಟ್ ಫೋಟೋ ಲೀಕ್
ಎಸ್ಎಸ್ ರಾಜಮೌಳಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಮುಂತಾದವರು ಒಡಿಶಾದಲ್ಲಿದ್ದಾರೆ. ‘SSMB 29’ ಸಿನಿಮಾದ ಚಿತ್ರೀಕರಣವನ್ನು ಅಲ್ಲಿ ಮಾಡಲಾಗುತ್ತಿದೆ. ಆದರೆ ಶೂಟಿಂಗ್ ಸೆಟ್ ಫೋಟೋ ಲೀಕ್ ಆಗಿದೆ. ಒಡಿಶಾ ಸುದ್ದಿವಾಹಿನಿಗಳು ಫೋಟೋ ಲೀಕ್ ಮಾಡಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ನಿರ್ದೇಶಕ ರಾಜಮೌಳಿ (SS Rajamouli) ಅವರು ಸಿನಿಮಾ ಮೇಕಿಂಗ್ ವಿಚಾರದಲ್ಲಿ ತುಂಬ ಕಟ್ಟುನಿಟ್ಟಾಗಿ ಇರುತ್ತಾರೆ. ಶೂಟಿಂಗ್ ಸೆಟ್ನಿಂದ ಯಾವುದೇ ಫೋಟೋ ಲೀಕ್ ಆಗಬಾರದು ಎಂದು ಅವರು ಬಹಳ ಎಚ್ಚರಿಕೆ ವಹಿಸುತ್ತಾರೆ. ಚಿತ್ರತಂಡದ ಎಲ್ಲರೂ ರಾಜಮೌಳಿ ಆದೇಶವನ್ನು ಪಾಲಿಸಲೇಬೇಕು. ಆದರೆ ಈಗ ಒಂದು ಎಡವಟ್ಟು ನಡೆದಿದೆ. ‘SSMB 29’ ಸಿನಿಮಾದ ಚಿತ್ರೀಕರಣದ ಸ್ಥಳದಿಂದ ಫೋಟೋ ಲೀಕ್ ಆಗಿದೆ. ಇದರಿಂದಾಗಿ ಚಿತ್ರತಂಡಕ್ಕೆ ತಲೆನೋವು ಶುರುವಾಗಿದೆ. ಮಹೇಶ್ ಬಾಬು (Mahesb Babu), ಪ್ರಿಯಾಂಕಾ ಚೋಪ್ರಾ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಮಹೇಶ್ ಬಾಬು ನಟಿಸುತ್ತಿರುವ 29ನೇ ಸಿನಿಮಾ ಇದು. ಇದರ ಶೀರ್ಷಿಕೆ ಇನ್ನೂ ಬಹಿರಂಗ ಆಗಿಲ್ಲ. ಸದ್ಯಕ್ಕೆ ‘SSMB 29’ ಎಂದು ಕರೆಯಲಾಗುತ್ತಿದೆ. ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಎಂಬ ಕಾರಣಕ್ಕೆ ಭಾರಿ ನಿರೀಕ್ಷೆ ಮನೆ ಮಾಡಿದೆ. ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡ ಬಳಿಕ ಶೂಟಿಂಗ್ ಶುರು ಮಾಡಲಾಗಿದೆ. ಆದರೆ ಚಿತ್ರೀಕರಣದ ಸೆಟ್ ಫೋಟೋ ಲೀಕ್ ಆಗಿರುವುದು ತಂಡಕ್ಕೆ ಬೇಸರ ತಂದಿದೆ.
ರಾಜಮೌಳಿ ಅವರು ರಾಮೋಜಿ ಫಿಲ್ಮ್ ಸಿಟಿ ಬಿಟ್ಟು ಈ ಬಾರಿ ಒಡಿಶಾಗೆ ತೆರಳಿದ್ದಾರೆ. ಒಡಿಶಾದಲ್ಲಿ ‘SSMB 29’ ಸಿನಿಮಾದ ಶೂಟಿಂಗ್ ಮಾಡಲಾಗುತ್ತಿದೆ. ಒಡಿಶಾದ ಸುದ್ದಿ ವಾಹಿನಿಗಳು ಭಾರಿ ಉತ್ಸಾಹದಲ್ಲಿ ಶೂಟಿಂಗ್ ಸೆಟ್ ಫೋಟೋವನ್ನು ವೈರಲ್ ಮಾಡಿವೆ. ಈಗ ಆ ಸುದ್ದಿವಾಹಿನಿಗಳ ಜೊತೆ ಚಿತ್ರತಂಡದವರು ಮಾತನಾಡಬೇಕಿದೆ. ಇನ್ಮುಂದೆ ಯಾವುದೇ ಫೋಟೋ ಲೀಕ್ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ.
ಒಡಿಶಾದಲ್ಲಿ ಶೂಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಇಷ್ಟೆಲ್ಲ ಆಯ್ತಾ ಎಂಬ ಪ್ರಶ್ನೆ ಮೂಡಿದೆ. ರಾಜಮೌಳಿ ಹೊಸ ಸಿನಿಮಾ ಮಾಡುತ್ತಾರೆ ಎಂದಾಗ ಎಲ್ಲರಲ್ಲೂ ಕುತೂಹಲ ಮೂಡುವುದು ಸಹಜ. ಕಲಾವಿದರ ಲುಕ್ ಹೇಗಿರುತ್ತದೆ? ಶೂಟಿಂಗ್ ಸೆಟ್ ಯಾವ ರೀತಿ ಇರುತ್ತದೆ ಎಂಬಿತ್ಯಾದಿ ವಿವರ ತಿಳಿದುಕೊಳ್ಳಲು ಸಿನಿಪ್ರಿಯರು ಕಾದಿರುತ್ತಾರೆ. ಅದನ್ನೆಲ್ಲ ತೋರಿಸಿ ಟಿಆರ್ಪಿ ಪಡೆಯುವ ಉದ್ದೇಶದಿಂದ ಒಡಿಶಾದ ಸುದ್ದಿ ವಾಹಿನಿಗಳು ‘SSMB 29’ ಚಿತ್ರತಂಡದ ಮೇಲೆ ಕಣ್ಣಿಟ್ಟಿವೆ.
ಇದನ್ನೂ ಓದಿ: ಮಹೇಶ್ ಬಾಬು-ರಾಜಮೌಳಿ ಸಿನಿಮಾ ತಂಡಕ್ಕೆ ಮಲಯಾಳಂ ನಟ ಪೃಥ್ವಿರಾಜ್ ಎಂಟ್ರಿ
ಈ ಸಿನಿಮಾದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ನಟಿಸುತ್ತಿದ್ದಾರೆ. ಆದರೆ ಆ ವಿಚಾರವನ್ನು ಚಿತ್ರತಂಡದವರು ಅಧಿಕೃತವಾಗಿ ಹೇಳಿಲ್ಲ. ಪ್ರಿಯಾಂಕಾ ಚೋಪ್ರಾ ನಾಯಕಿ ಎಂಬುದನ್ನು ಕೂಡ ತಂಡದವರು ಬಾಯಿ ಬಿಟ್ಟಿಲ್ಲ. ಹಾಗಿದ್ದರೂ ಕೂಡ ವಿಷಯ ಬಹಿರಂಗ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.