ಒದೆಲಾ 2, ಕುಂಭಮೇಳದಲ್ಲಿ ಬಿಡುಗಡೆ ಆಯ್ತು ಟೀಸರ್
Odela 2 movie teaser: 2022 ರಲ್ಲಿ ಬಿಡುಗಡೆ ಆಗಿ ಜನಮೆಚ್ಚುಗೆ ಗಳಿಸಿದ್ದ ‘ಒದೆಲ’ (ಒದೆಲ ರೈಲ್ವೆ ಸ್ಟೇಷನ್) ಸಿನಿಮಾದ ಎರಡನೇ ಭಾಗ ಬರುತ್ತಿದೆ. ಮೊದಲ ಭಾಗದಲ್ಲಿ ಇದೊಂದು ಸೈಕಾಲಜಿಕಲ್ ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿತ್ತು. ಆದರೆ ಎರಡನೇ ಭಾಗದಲ್ಲಿ ದೆವ್ವ, ಭೂತಗಳನ್ನು ಹೊಂದಿರುವ ಹಾರರ್ ಥ್ರಿಲ್ಲರ್ ಸಿನಿಮಾ ಆಗಿದೆ.

‘ಒದೆಲ ರೈಲ್ವೆ ಸ್ಟೇಷನ್’, 2022 ರಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡ ಒಂದೊಳ್ಳೆ ಕ್ರೈಂ ಥ್ರಿಲ್ಲರ್ ಸಿನಿಮಾ. ಕನ್ನಡದ ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾ ಒಂದು ಹಳ್ಳಿಯಲ್ಲಿ ನಡೆಯುವ ನವವಿವಾಹಿತೆಯರ ಸರಣಿ ಹತ್ಯೆಯ ಕತೆಯನ್ನು ಒಳಗೊಂಡಿತ್ತು. ಹೆಬಾ ಪಟೇಲ್, ಪೂಜಿತ್ ಪೊನ್ನಾದ, ವಸಿಷ್ಠ ಸಿಂಹ, ಸಾಯಿ ರೋನಕ್ ಅವರುಗಳು ನಟಿಸಿದ್ದ ಈ ಸಿನಿಮಾವನ್ನು ಸಂಪತ್ ನಂದಿ ನಿರ್ದೇಶನ ಮಾಡಿದ್ದರು. ಸಿನಿಮಾ ಅದ್ಭುತವಾದ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿತ್ತು.
ಇದೀಗ ‘ಒದೆಲ 2’ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾದ ಪಾತ್ರವರ್ಗದಲ್ಲಿ ಭಾರಿ ಅಪ್ಗ್ರೇಡ್ ಆಗಿದ್ದು ವಸಿಷ್ಠ ಸಿಂಹ ಇನ್ನಿತರರ ಜೊತೆಗೆ ಸ್ಟಾರ್ ನಟಿ ತಮನ್ನಾ ಭಾಟಿಯಾ ಸಹ ಸೇರಿಕೊಂಡಿದ್ದಾರೆ. ‘ಒದೆಲ’ ಸಿನಿಮಾ ಕ್ರೈಂ ಥ್ರಿಲ್ಲರ್ ಆಗಿದ್ದರೆ, ‘ಒದೆಲ 2’ ಸಿನಿಮಾ ದೆವ್ವ-ಭೂತ, ದೇವರುಗಳನ್ನು ಒಳಗೊಂಡಿರುವ ಹಾರರ್ ಸಿನಿಮಾ ಆಗಿ ಬದಲಾಗಿದೆ.
ಇದನ್ನೂ ಓದಿ:ತಮನ್ನಾ ಭಾಟಿಯಾ ಧರಿಸಿರುವ ಈ ಉಡುಗೆಯ ಬೆಲೆಗೆ ಒಂದು ಕಾರು ಖರೀದಿಸಬಹುದು
ಶಿವ ಭಕ್ತೆಯಾಗಿ ತಮನ್ನಾ ಭಾಟಿಯಾ ನಟಿಸಿದ್ದಾರೆ. ‘ಒದೆಲ’ ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೈಕಲ್ ಇಲ್ಲಿ ದೆವ್ವಾಗಿ ಬದಲಾಗಿದೆ. ವಸಿಷ್ಠ ಸಿಂಹ ಇನ್ನೂ ಕೆಲ ಪಾತ್ರಗಳು ರಾಕ್ಷಸರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿ ಒದೆಲ ಊರನ್ನು ಸೈಕೋ ಕಿಲ್ಲರ್ ಕಾಡಿದರೆ ಈ ಬಾರಿ ರಾಕ್ಷಸರು ಕಾಡುತ್ತಿದ್ದಾರೆ. ಮೊದಲ ಭಾಗದಲ್ಲಿ ಸೈಕೋ ಕಿಲ್ಲರ್ ಅನ್ನು ಹಿಡಿಯಲು ಐಪಿಎಸ್ ಅಧಿಕಾರಿ ಗ್ರಾಮಕ್ಕೆ ಬಂದಿರುತ್ತಾರೆ, ಈ ಬಾರಿ ಒದೆಲ ಊರನ್ನು ಕಾಪಾಡಲು ಶಿವಭಕ್ತೆ, ದೈವಾಂಶಸಂಭೂತೆ ತಮನ್ನಾ ಭಾಟಿಯಾ ಬಂದಿದ್ದಾರೆ.
ಸಿನಿಮಾದ ಟೀಸರ್ ಅನ್ನು ನಿನ್ನೆ ಮಹಾಕುಂಭ ಮೇಳದಲ್ಲಿ ಚಿತ್ರತಂಡವೇ ಬಿಡುಗಡೆ ಮಾಡಿದೆ. ತಮನ್ನಾ, ವಸಿಷ್ಠ ಸಿಂಹ ಸೇರಿದಂತೆ ಚಿತ್ರತಂಡದ ಇನ್ನೂ ಕೆಲವರು ಮಹಾಕುಂಭ ಮೇಳಕ್ಕೆ ಭೇಟಿ ನೀಡಿ, ಅಲ್ಲಿ ಪವಿತ್ರ ಸ್ನಾನ ಮಾಡಿ, ಅಲ್ಲಿಂದಲೇ ‘ಒದೆಲ 2’ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಟೀಸರ್ನಲ್ಲಿ ಇದೊಂದು ಹಾರರ್ ಥ್ರಿಲ್ಲರ್ ಕತೆ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿದೆ. ರಾಕ್ಷಸರ ಸಂಹಾರಕ್ಕಾಗಿ ತಮನ್ನಾ ಬರುತ್ತಾರೆ, ಆಕೆ ಶಿವಾಂಶ ಸಂಭೂತೆ ಎಂಬುದನ್ನೆಲ್ಲ ತೋರಿಸಲಾಗಿದೆ. ಸಿನಿಮಾದ ಟೀಸರ್ ಗಮನ ಸೆಳೆಯುವಂತಿದ್ದು, ಸಿನಿಮಾದ ಬಿಡುಗಡೆ ದಿನಾಂಕವನ್ನು ಇನ್ನೂ ಪ್ರಕಟ ಮಾಡಲಾಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




