Chiyaan Vikram: ಖ್ಯಾತ ನಟ ವಿಕ್ರಮ್ಗೆ ಹೃದಯಾಘಾತ? ಗಂಭೀರ ಆರೋಗ್ಯ ಸಮಸ್ಯೆಯಿಂದ ಚೆನ್ನೈ ಆಸ್ಪತ್ರೆಗೆ ದಾಖಲು
Chiyaan Vikram hospitalized: ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ತಮಿಳು ನಟ ಚಿಯಾನ್ ವಿಕ್ರಮ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಕಡೆಯಿಂದ ನೀಡಲಿರುವ ಹೆಲ್ತ್ ಅಪ್ಡೇಟ್ಗಾಗಿ ನಿರೀಕ್ಷಿಸಲಾಗುತ್ತಿದೆ.
ತಮಿಳಿನ ಜನಪ್ರಿಯ ನಟ ಚಿಯಾನ್ ವಿಕ್ರಮ್ (Chiyaan Vikram) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಹೃದಯಾಘಾತ (Heart Attack) ಆಗಿದೆ ಎಂದು ಕೆಲವೆಡೆ ವರದಿ ಆಗಿದೆ. ಈ ಕುರಿತು ಆಸ್ಪತ್ರೆ ಕಡೆಯಿಂದ ಅಥವಾ ಕುಟುಂಬದವರಿಂದ ಖಚಿತ ಮಾಹಿತಿ ಹೊರಬೀಳಬೇಕಿದೆ. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ವಿಕ್ರಮ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿಕ್ರಮ್ ಅವರಿಗೆ ಈಗ 56 ವರ್ಷ (Vikram Age) ವಯಸ್ಸು. ಫಿಟ್ನೆಸ್ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸುತ್ತಾರೆ. ಹದಿಹರೆಯದವರೂ ಕೂಡ ಅಚ್ಚರಿಪಡುವ ರೀತಿಯಲ್ಲಿ ಅವರು ಫಿಟ್ ಆಗಿದ್ದಾರೆ. ಹಾಗಿದ್ದರೂ ಕೂಡ ಅವರಿಗೆ ಹೃದಯಾಘಾತ ಆಗಿದೆ ಎಂಬ ಸುದ್ದಿ ಕೇಳಿ ಅಭಿಮಾನಿಗಳಿಗೆ ಆತಂಕ ಆಗಿದೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಶುಕ್ರವಾರ (ಜುಲೈ 8) ವಿಕ್ರಮ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಆಗಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಸ್ತುತ ಹಲವು ಪ್ರಾಜೆಕ್ಟ್ಗಳಲ್ಲಿ ವಿಕ್ರಮ್ ಅವರು ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘ಪೊನ್ನಿಯಿನ್ ಸೆಲ್ವನ್’ ಮತ್ತು ‘ಕೋಬ್ರಾ’ ಸಿನಿಮಾಗಳು ಹೆಚ್ಚು ನಿರೀಕ್ಷೆ ಮೂಡಿಸಿವೆ. ಈಗಾಗಲೇ ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿನ ಅವರ ಕೆಲವು ಪೋಸ್ಟರ್ಗಳು ಸಖತ್ ಹೈಪ್ ಸೃಷ್ಟಿ ಮಾಡಿವೆ. ಇಂದು (ಜುಲೈ 8) ಸಂಜೆ 6 ಗಂಟೆಗೆ ಈ ಸಿನಿಮಾದ ಟೀಸರ್ ಲಾಂಚ್ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚೆನ್ನೈನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಕ್ರಮ್ ಭಾಗಿ ಆಗಬೇಕಿತ್ತು. ಆದರೆ ಅಷ್ಟರಲ್ಲೇ ಅವರಿಗೆ ಅನಾರೋಗ್ಯ ಸಮಸ್ಯೆ ಎದುರಾಗಿದೆ.
ಇದನ್ನೂ ಓದಿ: ಎಂ.ಎಸ್ ಧೋನಿಯನ್ನು ಭೇಟಿಯಾದ ನಟ ಚಿಯಾನ್ ವಿಕ್ರಮ್; ಫೋಟೋ ನೋಡಿ ಸಂತಸಗೊಂಡ ಅಭಿಮಾನಿಗಳು
ವಿಕ್ರಮ್ ಅವರು ಆಸ್ಪತ್ರೆಗೆ ದಾಖಲಾಗಿರುವುದರಿಂದ ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಟೀಸರ್ ಬಿಡುಗಡೆ ಆಗಲಿದೆಯೋ ಇಲ್ಲವೋ ಎಂಬ ಅನುಮಾನ ಮೂಡಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶನ ಮಾಡಿದ್ದಾರೆ. ಸೆಪ್ಟೆಂಬರ್ 30ರಂದು ‘ಪೊನ್ನಿಯಿನ್ ಸೆಲ್ವನ್’ ಬಿಡುಗಡೆ ಆಗಲಿದೆ.
ಚಿಯಾನ್ ವಿಕ್ರಮ್ ಅವರು ಶೀಘ್ರ ಗುಣಮುಖರಾಗಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕೂಡ ಪ್ರಾರ್ಥಿಸುತ್ತಿದ್ದಾರೆ. ಕೆಲವು ಮೂಲಗಳ ಪ್ರಕಾರ ವಿಕ್ರಮ್ ಅವರು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಹಾಗಾಗಿ ಶೀಘ್ರದಲ್ಲೇ ಅವರು ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
Published On - 3:03 pm, Fri, 8 July 22